ಕೊರೊನಾ ಸೋಂಕು ವಿಶ್ವಕ್ಕೆ ವ್ಯಾಪಿಸಿ 7 ತಿಂಗಳೇ ಕಳೆದಿದೆ. ಮಾರ್ಚ್ 8 ರಂದು ನಮ್ಮ ದೇಶ ದಲ್ಲಿ ಕೊರೊನಾ ಸೋಂಕಿನಿಂದ ಕಲ್ಬುರ್ಗಿಯಲ್ಲಿ ಸಂಭವಿಸಿದ ಮೊದಲ ಸಾವಿನ ಪ್ರಕರಣ ವರದಿಯಾದಾಗ ಭಾರತ ವಿಶ್ವದಲ್ಲಿ ಸೋಂಕಿನ ಪ್ರಮಾಣದಲ್ಲಿ 22ನೇ ಸ್ಥಾನದಲ್ಲಿತ್ತು.
ಇದೀಗ 210 ದಿನಗಳ ಬಳಿಕ ಭಾರತ ಸೋಂಕಿನ ಪ್ರಮಾಣದಲ್ಲಿ ಜಗತ್ತಿನಲ್ಲಿ 2ನೇ ಸ್ಥಾನದಲ್ಲಿದೆ. ಸೋಂಕಿತರ ಗುಣಮುಖ ಪ್ರಮಾಣದಲ್ಲಿ ಭಾರತ 7ನೇ ಸ್ಥಾನದಲ್ಲಿದೆ. ಕೊರೊನಾ ಸೋಂಕು ಬಹುತೇಕ ದೇಶಗಳಲ್ಲಿ ಇಳಿಮುಖವಾಗುತ್ತಾ ಜನಜೀವನ ಸಾಮಾನ್ಯ ಸ್ಥಿತಿಗೆ ಹಿಂದಿರುಗುತ್ತಿರುವಾಗಲೇ ಭಾರತದಲ್ಲಿ ಮಾತ್ರ ಕೊರೊನಾ ಸೋಂಕು ನಿರೀಕ್ಷೆಗೂ ಮೀರಿ ವ್ಯಾಪಿಸುತ್ತಿದೆ.
ಅಪಾಯಕಾರಿಯಲ್ಲ... ಆದರೆ...!
ಕೊರೊನಾ ಬಗ್ಗೆ ಕಳೆದ 8 ತಿಂಗಳಿನಿಂದ ಗಾಢವಾಗಿ ಅಧ್ಯಯನ ಮಾಡಿರುವ ಪರಿಣಿತ ವೈದ್ಯರ ಪ್ರಕಾರ ಕೊರೊನಾ ಬೇರೆ ವೈರಾಣುಗಳಷ್ಟು ಮಾರಕ ಖಂಡಿತಾ ಅಲ್ಲವಂತೆ. ಬೇರೆ ಅನೇಕ ವೈರಾಣುಗಳಂತೆ ಕೋವಿಡ್ ವೈರಸ್ ಕೂಡ ವರ್ತಿಸುತ್ತಿದೆ. ಕೊರೊನಾ ವೈರಸ್ ಸೋಂಕು ತಗುಲಿದವರ ಪೈಕಿ ಅತ್ಯಂತ ಕಡಿಮೆ ಮಂದಿ ಮಾತ್ರ ಸಾವನ್ನಪ್ಪುತ್ತಾರೆ. ಹಾಗೇ ಸಾಯು ವವರು ಬಹುತೇಕ ಅವರಲ್ಲಿ ಇರಬಹುದಾದ ಇತರ ಗಂಭೀರ ರೋಗ ದಿಂದಾಗಿ ಸಾಯುತ್ತಿದ್ದಾರೆ. ಕೊರೊನಾ ಸೋಂಕು ತಗುಲಿದಾಗ ಅಂತಹವರ ದೇಹದಲ್ಲಿ ಇರಬಹುದಾದ ಬೇರೆ ಕಾಯಿಲೆಗಳ ಗಂಭೀರ ಸ್ವರೂಪದ ವೈರಾಣುಗಳು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವಲ್ಲಿ ಹೊಸದಾಗಿ ದೇಹದೊಳಕ್ಕೆ ಬಂದಿರುವ ಕೊರೊನಾ ವೈರಸ್ ಕಾರಣವಾಗುತ್ತದೆ.
ಅಂದರೆ ಕೊರೊನಾ ವೈರಸ್ ದೇಹವನ್ನು ಅತಿಕ್ರಮಿಸಿ ಬೇರೆ ಯಾವುದೇ ಗಂಭೀರ ರೋಗಗಳನ್ನು ಗುಣಮುಖವಾಗಿಸಲು ಬಿಡುವುದಿಲ್ಲ. ಹೀಗಾಗಿ ಕೊರೊನಾ ಸೋಂಕಿತರು ಸೂಕ್ತ ಚಿಕಿತ್ಸೆಯಿಲ್ಲದೆ ಸಾವನ್ನಪ್ಪುತ್ತಿದ್ದಾರೆ. ಆದರೆ ಈ ರೀತಿ ಕೊರೊನಾ ಸೋಂಕಿರುವ ವ್ಯಕ್ತಿಗಳು ಬೇರೇ ಬೇರೆ ಕಾರಣಗಳಿಂದಾಗಿ ಮೃತಪಟ್ಟರೂ ಅಂತಹ ವ್ಯಕ್ತಿಗಳು ಕೊರೊನಾ ಸೋಂಕಿನಿಂದಲೇ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಪ್ರಕಾರ ಆರೋಗ್ಯ ಇಲಾಖೆ ದಾಖಲಿಸುತ್ತದೆ.
ಹೆಚ್.ಐ.ವಿ., ಸಾರ್ಸ್ನಂಥ ವೈರಸ್ಗಳಿಗೆ ಹೋಲಿಸಿದಲ್ಲಿ ಕೊರೊನಾ ವೈರಸ್ ಗಂಭೀರ ಸ್ವರೂಪದ್ದಲ್ಲ. ಆದರೆ ಜನರ ನಿರ್ಲಕ್ಷ್ಯದಿಂದಾಗಿಯೇ ಇದೀಗ ದೇಶದಲ್ಲಿಯೂ ಕೊರೊನಾ ಸೋಂಕು ನಿರೀಕ್ಷಿಗೂ ಮೀರಿ ಹಬ್ಬುತ್ತಾ ಸಾಗಿ ಆತಂಕ ಸೃಷ್ಟಿ ಮಾಡಿದೆ.
ಬೇರೆ ವೈರಸ್ಗಳಿಗೆ ಸೋಂಕು ಲಕ್ಷಣಗಳು ಸ್ಪಷ್ಟವಾಗಿರುತ್ತದೆ. ಆದರೆ ಕೊರೊನಾಕ್ಕೆ ಯಾವ ಲಕ್ಷಣಗಳು ಇರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಪ್ರಾರಂಭಿಕ ಹಂತದಲ್ಲಿ ಜ್ವರ, ಕೆಮ್ಮು, ಶೀತ ಲಕ್ಷಣಗಳು ಎನ್ನಲಾಗಿತ್ತು. ಈಗ ತಲೆನೋವು, ಮೈ-ಕೈನೋವು, ದೇಹಕ್ಕೆ ಆಯಾಸ, ವಾಂತಿ, ಬೇಧಿ, ಹೃದಯಬೇನೆ ಸೇರಿದಂತೆ ಬೇರೆ ಬೇರೆ ಕಾರಣಗಳೂ ಕೊರೊನಾ ಸೋಂಕು ಲಕ್ಷಣಗಳು ಎಂದು ತಿಳಿದುಬಂದಿದೆ. ಮಾರ್ಚ್ನಲ್ಲಿ ಕೊರೊನಾ ಸೋಂಕು ಬಹುತೇಕ ಹಿರಿಯ ನಾಗರಿಕರಿಗೆ ಮಾರಣಾಂತಿಕ ಎನ್ನಲಾಗುತ್ತಿತ್ತು. ಆದರೆ ಈಗ ಸಣ್ಣ ವಯಸ್ಸಿನವರಲ್ಲಿಯೂ ಕೊರೊನಾ ಸೋಂಕು ಕಂಡುಬರುತ್ತಿದೆ. ಈ ಸೋಂಕು ಬಲಿತೆಗೆದುಕೊಳ್ಳುವವರಲ್ಲಿ ವಯಸ್ಸಿನ ಬೇಧವೂ ಕಂಡುಬರುತ್ತಿಲ್ಲ. ಕೆಲವರಿಗೆ ಲಕ್ಷಣಗಳಿಲ್ಲದೆಯೂ ಪರೀಕ್ಷೆ ನಡೆಸಿದಾಗ ಸೋಂಕಿನ ವೈರಸ್ ಇರುವುದು ಗೊತ್ತಾಗುತ್ತಿದೆ. ಇದೇಕೆ ಹೀಗಾಗುತ್ತಿದೆ ಎಂಬ ವೈದ್ಯರ ಪ್ರಶ್ನೆಗೆ ನಿಖರ ಉತ್ತರ ದೊರಕುತ್ತಿಲ್ಲ. ಬಹುಶಃ ಅದಾಗಲೇ ದೇಹದೊಳಗೆ ಸೇರಿರಬಹುದಾದ ಬೇರೊಂದು ಕಾಯಿಲೆಯ ವೈರಸ್ ಕೊರೊನಾ ಸೋಂಕು ಪರೀಕ್ಷೆ ಕೈಗೊಂಡ ಸಂದರ್ಭ ಪಾಸಿಟಿವ್ ಎಂದು ತೋರಿಸುತ್ತಿರಬಹುದಾದ ಸಾಧ್ಯತೆಗಳೂ ಹೆಚ್ಚಾಗಿದೆ. ಕರ್ನಾಟಕದ ಅಂಕಿಅಂಶ ಗಮನಿಸುವುದಾದಲ್ಲಿ, ಲಾಕ್ಡೌನ್ ಮುಕ್ತಾಯವಾದ ಬಳಿಕ ರಾಜ್ಯದಲ್ಲಿ ವರದಿಯಾದ ಸೋಂಕು ಪೀಡಿತರಲ್ಲಿ ಶೇ. 51 ರಷ್ಟು ಯುವಕ, ಯುವತಿಯರೇ ಇದ್ದಾರೆ. ಇಂತಹ ಯುವ ಸೋಂಕಿತರಿಂದಾಗಿ ಮನೆಯಲ್ಲಿ ಇರುವ ಹಿರಿಯರಿಗೂ ಸೋಂಕು ಕಂಡುಬಂದು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಯುವ ಪೀಳಿಗೆಯಿಂದಾಗಿಯೇ 10 ವರ್ಷದೊಳಗಿನ ಮಕ್ಕಳಿಗೂ ಸೋಂಕು ತಗುಲಿ ಆರೋಗ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಕರ್ನಾಟಕದ ಸೋಂಕಿತರ ಪೈಕಿ 20 ರಿಂದ 40 ವರ್ಷದೊಳಗಿನವರು ಶೇ. 45 ರಷ್ಟಿದ್ದಾರೆ. 60 ವರ್ಷ ಮೇಲ್ಪಟ್ಟ ಸೋಂಕಿತರು 71 ಸಾವಿರ ಮಂದಿಯಿದ್ದಾರೆ. ಯುವಪೀಳಿಗೆಯ ಸಂಖ್ಯೆ 3.05 ಲಕ್ಷದಷ್ಟಿದೆ. 10 ವರ್ಷದೊಳಗಿನ 19,500 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 20 ಕಂದಮ್ಮಗಳು ಕೊನೆಯುಸಿರೆಳೆದಿದ್ದಾರೆ. ಕಳೆದ ತಿಂಗಳ ಅಂತ್ಯದವರೆಗಿನ ವರದಿ ಗಮನಿಸಿದರೆ, ರಾಜ್ಯದಲ್ಲಿ ಪ್ರತೀ 100 ಸೋಂಕಿತರಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಪ್ರಕರಣ 4,470 ರಷ್ಟಿದೆ.
ಈ ಪೈಕಿ 60 ವರ್ಷ ದಾಟಿದವರ ಸಾವಿನ ಪ್ರಮಾಣ ಶೇ. 8.3 ರಷ್ಟಿದೆ. ಬಹುತೇಕ ಹಿರಿಯ ನಾಗರಿಕರಲ್ಲಿ ಸೋಂಕು ಕಾಣಿಸಿಕೊಂಡ ನಂತರ ಅದನ್ನು ತಡೆಗಟ್ಟುವ ರೋಗನಿರೋಧಕ ಶಕ್ತಿ ಇಲ್ಲದ ಹಿನ್ನೆಲೆ ಅದು ಮಾರಣಾಂತಿಕವಾಗಿದೆ. ಹಿರಿಯ ನಾಗರಿಕರು ಬಹುಪಾಲು ಮನೆಯಲ್ಲಿಯೇ ಇದ್ದರೂ ಹೊರಗಡೆ ಸುತ್ತಾಡಿ ಬರುವ ಮನೆಯ ಇತರ ಸದಸ್ಯರಿಂದಾಗಿ ಇಂಥ ಹಿರಿಯ ನಾಗರಿಕರು ಜೀವಕ್ಕೆ ಅಪಾಯ ಎದುರಿಸುವಂತಾಗಿದೆ.
ಆತಂಕ ಮುಂದುವರಿಯಲಿದೆ
ವಿಶ್ಲೇಷಕರ ಪ್ರಕಾರ ಭಾರತದಲ್ಲಿನ ಹಬ್ಬಗಳು ಕೊರೊನಾ ವೈರಸ್ ಸೋಂಕು ವ್ಯಾಪಿಸುವಲ್ಲಿ ಪ್ರಮುಖ ಕಾರಣಗಳು. ಕರ್ನಾಟಕದಲ್ಲಿ ಕೊರೊನಾ ಸೋಂಕು ಇನ್ನೂ ನಿರೀಕ್ಷಿತ ಎತ್ತರವನ್ನು ಮುಟ್ಟಿಲ್ಲ. ಅಂದರೆ ಅಕ್ಟೋಬರ್ ಮತ್ತು ನವೆಂಬರ್ಗಳಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಇಲ್ಲದ ಊರುಗಳೇ ಇಲ್ಲ ಎಂಬಷ್ಟು ಮಟ್ಟಿಗೆ ಸೋಂಕು ಸಾಂಕ್ರಾಮಿಕವಾಗಿ ವ್ಯಾಪಿಸಿದೆ. ಇದು ಮುನ್ನೆಚ್ಚರಿಕೆ ಮಾತ್ರ. ನಿಜವಾದ ಆತಂಕ ಮುಂದಿನ ದಿನಗಳಲ್ಲಿ ಕಾದಿದೆ ಎಂಬ ಲೆಕ್ಕಾಚಾರ ಪರಿಣಿತರದ್ದು. ಯಾವಾಗ ಗೌರಿ-ಗಣೇಶ ಉತ್ಸವಕ್ಕೆ ಸರ್ಕಾರ ಅನುಮತಿ ನೀಡಿತೋ ಅಲ್ಲಿಂದೀಚಿಗೆ ಸಾಮಾಜಿಕ ಅಂತರ ಮರೆತು, ಮಾಸ್ಕ್ ಹಾಕುವುದನ್ನೂ ನಿರ್ಲಕ್ಷಿಸಿದ ಜನ ಸೋಂಕು ಹೆಚ್ಚಳಕ್ಕೆ ಕಾರಣರಾದರು. ಬೆಂಗಳೂರು ಮಹಾನಗರದಲ್ಲಿ ಗೌರಿ-ಗಣೇಶ ಉತ್ಸವದ ನಂತರವೇ ಕೊರೊನಾ ಸೋಂಕು ಮಿತಿಮೀರಿ ವ್ಯಾಪಿಸಿತ್ತು ಎಂಬುದನ್ನು ಮಹಾನಗರ ಪಾಲಿಕೆಯ ಆಯುಕ್ತರು ಹೇಳಿದ್ದಾರೆ. ಕೇರಳದಲ್ಲಿ ಓಣಂ ಹಬ್ಬದ ನಂತರ ಸೋಂಕು ಸಂಖ್ಯೆ ಮಿತಿಮೀರಿತ್ತು. ಯಾವ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರ ಪಾಲಿಸದೇ ಹೆಚ್ಚು ಹೆಚ್ಚು ಒಟ್ಟು ಸೇರುತ್ತಾರೆಯೋ ಆಗೆಲ್ಲ ಸೋಂಕು ಅತ್ಯಧಿಕ ಸಂಖ್ಯೆಯಲ್ಲಿ ವ್ಯಾಪಿಸಿದೆ. ಉದಾಹರಣೆ ಇದೆ. ಕೊಡಗಿನಲ್ಲಿ ಕೂಡ ಸಂತೆ ಹಾಗೂ ಮಾರುಕಟ್ಟೆಯಲ್ಲಿ ಗಮನಹರಿಸಲೇ ಬೇಕಾದ ತುರ್ತು ಅಗತ್ಯ ಈಗ ಇದೆ. ಅಕ್ಟೋಬರ್ನಲ್ಲಿ ಬರುವ ನವರಾತ್ರಿ ಉತ್ಸವ ಕೂಡ ಜನರ ನಿರ್ಲಕ್ಷ್ಯದಿಂದಾಗಿ ಸೋಂಕು ವ್ಯಾಪಿಸಲು ಪ್ರಮುಖ ಕಾರಣವಾಗುವ ಎಲ್ಲಾ ಸಾಧ್ಯತೆಗಳಿದೆ ಎಂಬುದು ಭಾರತೀಯ ಸಾಂಕ್ರಾಮಿಕ ರೋಗಗಳ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಗಿರಿಧರ್ ಆರ್. ಬಾಬು ನೀಡಿರುವ ಮಾಹಿತಿ.
ಹಬ್ಬಗಳ ಸಂದರ್ಭ ಜನ ಸಮೂಹಸನ್ನಿಗೆ ಒಳಗಾಗಿ ಕೊರೊನಾ ಬಗ್ಗೆ ಪೂರ್ತಿ ನಿರ್ಲಕ್ಷ್ಯ ತಾಳುತ್ತಾರೆ. ಉತ್ಸವದ ಸಂಭ್ರಮದಲ್ಲಿ ಮುಂದಿನ ಅಪಾಯಗಳ ಬಗ್ಗೆ ಮೈಮರೆಯುತ್ತಾರೆ. ಇದರಿಂದಾಗಿ ಅಂತಹವರು ತಮಗೆ ಮಾತ್ರವಲ್ಲ ಇಡೀ ಸಮಾಜಕ್ಕೇ ಸೋಂಕು ವ್ಯಾಪಿಸಲು ಕಾರಣರಾಗುತ್ತಾರೆ. ಹೀಗಾಗಿಯೇ ನವರಾತ್ರಿಯ ಅಕ್ಟೋಬರ್ ಮತ್ತು ದೀಪಾವಳಿಯ ನವೆಂಬರ್ ತಿಂಗಳನ್ನು ಅತ್ಯಂತ ಜಾಗ್ರತೆಯಿಂದ ಮತ್ತು ಆತಂಕದಿಂದ ಕೇಂದ್ರ ಆರೋಗ್ಯ ಇಲಾಖೆ ಗಮನಿಸಲಿದೆ. ಹಾಗೇ, ಜಿಲ್ಲಾ ಮಟ್ಟದಲ್ಲಿ ಈಗ ಅತ್ಯಧಿಕ ಪ್ರಮಾಣದಲ್ಲಿ ಸೋಂಕು ಪತ್ತೆ ಪರೀಕ್ಷೆಗೆ ಅತ್ಯಾಧುನಿಕ ಸಾಧನಗಳು ಲಭಿಸಿದೆ. ಇದರಿಂದಾಗಿಯೂ ಕೊಡಗೂ ಸೇರಿದಂತೆ ಬಹುತೇಕ ಕಡೆ ಸೋಂಕಿನ ಪರೀಕ್ಷೆ ಹೆಚ್ಚು ನಡೆದು ಸೋಂಕು ಪೀಡಿತರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದೆ.
ಲಸಿಕೆ ಯಾವಾಗ ಸಿಗುತ್ತದೆ ?
ಇಡೀ ಜಗತ್ತಿನಲ್ಲಿ ಕೇಳಲಾಗುತ್ತಿರುವ ಮುಖ್ಯ ಪ್ರಶ್ನೆಯೇ ಇದು. ಕೊರೊನಾ ಲಸಿಕೆ ಇನ್ನೂ ತಯಾರಿಕೆ ಹಂತದಲ್ಲಿದೆ. 3-4 ಲಸಿಕೆಗಳು ಇನ್ನೂ 3ನೇ ಹಂತದ ಪರೀಕೆಯಲ್ಲಿದೆ. ಹಾಗೆಂದು ಪರೀಕ್ಷಾ ಹಂತದಲ್ಲಿನ ಲಸಿಕೆಗಳು ಅಂತಿಮವಾಗಿ ಯಶಸ್ವಿಯಾಗುತ್ತದೆ ಎಂದೂ ಹೇಳಲು ಅಸಾಧ್ಯವಿದೆ. ಅದೃಷ್ಟ ವಿದ್ದಲ್ಲಿ ಮಾತ್ರ ಈಗ ಪ್ರಯೋಗದ ಹಂತದಲ್ಲಿನ ಲಸಿಕೆಗಳು ಉಪಯೋಗಕ್ಕೆ ಬರಬಹುದು ಎನ್ನುತ್ತಾರೆ ಭಾರತದ ಹೆಸರಾಂತ ಲಸಿಕೆ ಪರಿಣಿತ ವಿಜ್ಞಾನಿ ಡಾ. ಗಗನ್ ದೀಪ್ ರಂಗ್. ಭಾಗ್ಯಶಾಲಿಗಳಾಗಿದ್ದರೆ ಡಿಸೆಂಬರ್ ಅಂತ್ಯದಲ್ಲಿ ಲಸಿಕೆ ಸಿಗುವ ನಿರೀಕ್ಷೆಯಿದೆ. ಹಾಗೊಂದು ವೇಳೆ ಈ ಲಸಿಕೆ ಯಶಸ್ವಿಯಾದಲ್ಲಿ ಭಾರತದಾದ್ಯಂತ ಈ ಲಸಿಕೆ ವಿತರಿಸಲು 2021ರ ಮಧ್ಯ ಭಾಗದವರೆಗೂ ಸಮಯಾವಕಾಶ ಬೇಕು. ಅಲ್ಲಿಯವರೆಗೂ ಕೊರೊನಾ ಸೋಂಕಿನಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಲೇ ಇರಬೇಕಾಗಿದೆ. ಇದು ಅನಿವಾರ್ಯ. ನಾಳೆಯೇ ಲಸಿಕೆ ದೊರಕಿದರೂ ಅದನ್ನು ದೇಶದ ಕೋಟ್ಯಾಂತರ ಜನರಿಗೆ ವಿತರಣೆ ಮಾಡಲು ಕಷ್ಟಸಾಧ್ಯ. ಲಸಿಕೆ ವಿತರಿಸಲು ಮತ್ತು ಮತ್ತಷ್ಟು ಪರೀಕ್ಷೆ ಕೈಗೊಳ್ಳಲು ಕನಿಷ್ಟ 5-6 ತಿಂಗಳು ಬೇಕೇ ಬೇಕು ಎನ್ನುತ್ತಾರೆ ಗಗನ್ ದೀಪ್. ಹೀಗಾಗಿ ಮುಂದಿನ ವರ್ಷದ ಮೇ ತಿಂಗಳವರೆಗೂ ಲಸಿಕೆಗಾಗಿ ಕಾಯಲೇ ಬೇಕು.
ಲಸಿಕೆಯಿಂದ ಪರಿಹಾರ ಸಾಧ್ಯವೇ...?
ಹಾಗೊಂದು ವೇಳೆ ಲಸಿಕೆ ಕಂಡು ಹಿಡಿದುಬಿಟ್ಟರೆ ಸೋಂಕು ನಿವಾರಣೆ ಸಾಧ್ಯವೇ ಎಂಬ ಪ್ರಶ್ನೆಗೆ ಖಂಡಿತಾ ಇಲ್ಲ ಎನ್ನುತ್ತಾರೆ ಡಾ. ಗಗನ್ ದೀಪ್. ನಮಗೆ ಈಗ ಲಸಿಕೆ ದೊರಕಿದರೂ ಅದು ಶೇ. 70 ರಷ್ಟು ಮಾತ್ರ ಪರಿಣಾಮ ಕಾರಿಯೇ ವಿನಾ ಅದು ಖಂಡಿತಾ ಕೊರೊನಾ ಸೋಂಕು ನಿವಾರಣೆಗೆ ಶಾಶ್ವತವಾಗಿ ಸಹಕಾರಿಯಲ್ಲ ಎನ್ನುತ್ತಾರೆ. ಪ್ರತೀ 1 ಸಾವಿರ ಮಂದಿಗೆ ಲಸಿಕೆ ನೀಡಿ ಅದು ಅವರ ಮೇಲೆ ಉಂಟು ಮಾಡುವ ಪರಿಣಾಮ ಗಮನಿಸಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ಲಸಿಕೆ ಬೇರೆ ಬೇರೆ ರೀತಿಯ ಪರಿಣಾಮ ಉಂಟು ಮಾಡಬಹುದು. ಅದನ್ನೂ ಆಳವಾಗಿ ಅಧ್ಯಯನ ನಡೆಸಬೇಕು. ಇಂತಹ ಪ್ರಯೋಗಕ್ಕೆ ಸಾಕಷ್ಟು ಕಾಲಾವಕಾಶ ಬೇಕೇ ಬೇಕು. ನೆನಪಿರಲಿ... ಸಾಮಾನ್ಯವಾಗಿ ಔಷಧಿಯೊಂದು ತಯಾರಾಗಬೇಕಾದರೆ ಕನಿಷ್ಟ 9-10 ವರ್ಷ ಬೇಕು. ಆದರೆ ವಿಶ್ವವ್ಯಾಪಿಯಾಗಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಇಡೀ ವಿಶ್ವದ ದೇಶಗಳು ಟೊಂಕಕಟ್ಟಿ ಬೇರೆ ಬೇರೆ ಹಂತದಲ್ಲಿ ಲಸಿಕೆ ತಯಾರು ಮಾಡುತ್ತಿವೆ. ಹೀಗಾಗಿ ಸೋಂಕು ಕಾಣಿಸಿಕೊಂಡ 1 ವರ್ಷದ ಬಳಿಕ ಲಸಿಕೆ ದೊರಕುವ ಸಾಧ್ಯತೆಯಿದೆ. ಗಮನಿಸಿ. ಕೆಲವೇ ವರ್ಷಗಳ ಹಿಂದೆ ಹೆಚ್.ಐ.ವಿ. ಅಥವಾ ಏಡ್ಸ್ ಕಾಯಿಲೆ ಮಾರಣಾಂತಿಕವಾಗಿ ಜಗತ್ತನ್ನು ಕಾಡಿತ್ತು. ಆದರೆ ಇಷ್ಟೂ ವರ್ಷಗಳ ಬಳಿಕವೂ ಅದಕ್ಕೆ ಇನ್ನೂ ಲಸಿಕೆಯಾಗಲೀ ಸೂಕ್ತ ಔಷಧಿಯಾಗಲೀ ದೊರಕಿಲ್ಲ. ಹಾಗೇ ಕೊರೊನಾ ಕೂಡ ಆಗಬಾರದು ಎಂದು ಪಯತ್ನಗಳು ಸಮರೋಪಾದಿಯಲ್ಲಿ ಸಾಗಿದೆ.
ಸಮಾಧಾನಕರ ವಿಚಾರ ಎಂದರೆ ಕೊರೊನಾ ಸೋಂಕು ರೋಗ ನಿರೋಧಕ ಶಕ್ತಿ ಇದ್ದವರನ್ನು ಕಾಡುತ್ತಿಲ್ಲ. ಹತ್ತಿರವೂ ಸುಳಿಯುತ್ತಿಲ್ಲ. ಹೆಚ್.ಐ.ವಿ. ವೈರಸ್ ಹಾಗಿರಲಿಲ್ಲ. ಅದು ರೋಗ ನಿರೋಧಕ ಶಕ್ತಿಯನ್ನೇ ಸಾಯಿಸಿ ಮಾನವನ ಮೇಲೆ ಅತಿಕ್ರಮಣ ಮಾಡಿ ಸಾವಿಗೆ ಕಾರಣವಾಗುತ್ತಿತ್ತು. ಕೊರೊನಾ ಸೋಂಕಿಗೆ ಇಂತಹ ಲಕ್ಷಣಗಳಿಲ್ಲ. ರೋಗ ನಿರೋಧಕ ಶಕ್ತಿಯ ಜೀವಾಣುಗಳ ತಂಟೆಗೆ ಕೊರೊನಾ ಸೋಂಕು ಹತ್ತಿರವೂ ಬರುತ್ತಿಲ್ಲ ಎಂದು ಡಾ. ಗಗನ್ ದೀಪ್ ಮಾಹಿತಿ ನೀಡಿದ್ದಾರೆ.
ಪರ್ಯಾಯ ಮಾರ್ಗವೇನು?
ಬೇರೆ ಯಾವುದೇ ಮಾರ್ಗಗಳಿಲ್ಲ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಸಾರಿಸಾರಿ ಹೇಳಿದ ಹಾಗೆ ಎಸ್.ಎಂ.ಎಸ್. ಒಂದೇ ಸೂಕ್ತ ಮಾರ್ಗ. ಎಸ್.ಎಂ.ಎಸ್. ಎಂದರೆ ಸಾಮಾಜಿಕ ಅಂತರ (Soಛಿiಚಿಟ ಜisಣಚಿಟಿಛಿeiಟಿg), ಮಾಸ್ಕ್ ಧರಿಸುವಿಕೆ (ಒಚಿsಞ) ಮತ್ತು ಸ್ಯಾನಿಟೈಸರ್ (Sಚಿಟಿiಣiseಡಿ) ಬಳಸುವಿಕೆ. ಜತೆಗೆ ಮತ್ತೊಂದು ಅಂಶ ಗಮನದಲ್ಲಿರಿಸಬೇಕು ಸೋಂಕು ಪೀಡಿತರು, ಸೋಂಕು ತಗುಲದವರು ಕೂಡ ತಾವೇ ವೈದ್ಯರಂತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿ ದಾರಿ ತಪ್ಪಿಸುತ್ತಿರುತ್ತಾರೆ. ಇಂತಹ ಪುಕ್ಕಟೆ ಸಲಹೆಗಳಿಂದ ದೂರ ಇದ್ದು ಯಾವುದೇ ಸೋಂಕು ಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಸೂಕ್ತ.
ಕೊನೇ ಹನಿ: ಚೀನಾದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ಎಷ್ಟು ತಮಾಷೆ ಮಾಡಿದ್ದೆವು, ಸಾಮಾಜಿಕ ಜಾಲತಾಣದಲ್ಲಿ ಚೀನಿಯರನ್ನು ಹಾವು, ಹಲ್ಲಿ, ಚೇಳು ತಿಂದು ರೋಗ ಬರಿಸಿಕೊಂಡಿದ್ದಾರೆ ಎಂದೂ ಹೀಯಾಳಿಸಲಾಗುತ್ತಿತ್ತು. ಇದೀಗ ಚೀನಾ 8 ತಿಂಗಳ ಬಳಿಕ ಮತ್ತೆ ಮೊದಲಿನಂತೆ ಮೇಲೆದ್ದು ನಿಂತಿದೆ. ಚೀನಾವನ್ನು ವ್ಯಂಗ್ಯವಾಡಿದ್ದ ಭಾರತ ಈಗ 2ನೇ ಸ್ಥಾನಕ್ಕೆ ಬಂದು ಗಡಗಡನೆ ಆತಂಕದಿಂದ ನಿಂತಿದೆ. ಚೀನಾಕ್ಕೆ ಪಾಠ ಕಲಿಸಬೇಕಾದ ನಾವೇ ಈಗ ಚೀನಾದಿಂದ ಸೋಂಕು ನಿವಾರಣೆಯ ಪಾಠ ಕಲಿಯುವಂತಾಗಿದೆ.
ಬೇಕಾ ನಮಗಿದೆಲ್ಲಾ ? ಎಸ್.ಎಂ. ಎಸ್. ಅನುಸರಿಸಿ, ಸೋಂಕಿನ ವಿರುದ್ಧ ಹೋರಾಡಿ, ಕೊರೊನಾ ಗೆಲ್ಲುವ ಪಣ ತೊಡಿ ಅಷ್ಟೇ. ದೇಶಕ್ಕಾಗಿ ಸದ್ಯಕ್ಕೆ ನಾವೆಲ್ಲಾ ಮಾಡಬಹುದಾದ ಮಹದುಪಕಾರ. - ಅನಿಲ್ ಎಚ್.ಟಿ.