ಅನಾಹುತ ತಪ್ಪಿಸಲು ಒತ್ತಾಯ ಕೂಡಿಗೆ, ಅ. 7: ಹಾರಂಗಿ ಅಣೆಕಟ್ಟೆಯ ಮುಂಭಾಗದ ಉದ್ಯಾನವನ ವೀಕ್ಷಣೆಯನ್ನು ಲಾಕ್ ಡೌನ್ ಹಿನ್ನೆಲೆ ಸ್ಥಗಿತಗೊಳಿಸ ಲಾಗಿತ್ತು. ಇದೀಗ ಸ್ವಲ್ಪ ಸಡಿಲಿಕೆಯ ಸಂದರ್ಭದಲ್ಲಿ ಅಣೆಕಟ್ಟೆಯು ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ ಇದನ್ನು ವೀಕ್ಷಿಸಲು ಸ್ಥಳೀಯರು ಸೇರಿದಂತೆ ಸಾವಿರಾರು ಪ್ರವಾಸಿಗರು ಹಾರಂಗಿಗೆ ಬರುತ್ತಿದ್ದಾರೆ. ಆದರೆ ಅಣೆಕಟ್ಟೆಯ ಮುಂಭಾಗದಲ್ಲಿ ತೆರಳಲು ಅವಕಾಶ ಇಲ್ಲದ ಕಾರಣ (ಮೊದಲ ಪುಟದಿಂದ) ಕೆಲ ಪ್ರವಾಸಿಗರು ಮತ್ತು ಯುವಕರು ಅಣೆಕಟ್ಟೆಯ ಕೆಳ ಭಾಗದ ಸೇತುವೆಯ ಸಮೀಪದಲ್ಲಿ ನದಿಗೆ ಇಳಿದು ಅದರ ಮೂಲಕ ಬೃಂದಾವನದ ಉದ್ಯಾನವನಕ್ಕೆ ಬರುತ್ತಿರುವುದು ಕಂಡು ಬರುತ್ತಿದೆ. ಇದು ಅಪಾಯಕಾರಿ ಜಾಗವಾಗಿದ್ದು ಅನಾಹುತಕ್ಕೆ ದಾರಿಯಾಗಲಿದೆ. ಇದನ್ನು ನೀರಾವರಿ ಇಲಾಖೆಯವರು ಗಮನ ಹರಿಸಿಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ. ಹಾರಂಗಿ ಅಣೆಕಟ್ಟೆಯ ಎಡ ಭಾಗದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಹೋಗುವ ದಾರಿಯಲ್ಲಿ ನೀರಾವರಿ ಇಲಾಖೆಯ ವತಿಯಿಂದ ಯಾವುದೇ ರಕ್ಷಣೆ ಗೋಡೆ ಅಥವಾ ಬೇಲಿ ಇಲ್ಲದ ಕಾರಣ ಪ್ರವಾಸಿಗರು ಮನಬಂದಂತೆ ಅಣೆಕಟ್ಟೆ ಮುಂಭಾಗದ ನದಿಗೆ ಇಳಿಯುತ್ತಿದ್ದಾರೆ. ಮುಂದಾಗುವ ಅನಾಹುತವನ್ನು ತಪ್ಪಿಸಲು ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. - ಕೆ.ಕೆ.ಎನ್. ಶೆಟ್ಟಿ