ಸೋಮವಾರಪೇಟೆ, ಅ. 6: ದೇಶಾದ್ಯಂತ ಸ್ವಚ್ಛಭಾರತ್ ಅಭಿಯಾನ ದೊಡ್ಡಮಟ್ಟದ ಸದ್ದು ಮಾಡುತ್ತಿದೆ. ಹಲವಷ್ಟು ಗ್ರಾಮ ಪಂಚಾಯಿತಿಗಳು ತ್ಯಾಜ್ಯ ವಿಲೇವಾರಿಗೆ ತಮ್ಮದೇ ಕಾರ್ಯಕ್ರಮ ಗಳನ್ನು ಜಾರಿಗೆ ತರುತ್ತಿವೆ.
ಈ ಮಧ್ಯೆ ಕೊರೊನಾ ವೈರಸ್ ವ್ಯಾಪಕವಾಗುತ್ತಿರುವದರಿಂದ ವೈಯುಕ್ತಿಕ ಮತ್ತು ಸಾರ್ವಜನಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದ್ದರೂ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ಮಾತ್ರ ಇವೆಲ್ಲದರ ಬಗ್ಗೆ ಗಮನಹರಿಸದೇ ಬಜೆಗುಂಡಿಯನ್ನು ಕಸದ ಗುಂಡಿಯನ್ನಾಗಿಸುತ್ತಿದೆ!
ಬೇಳೂರು ಗ್ರಾಮ ಪಂಚಾಯಿತಿಯ ಕಾರ್ಯಾಲಯ ಇದೇ ಬಜೆಗುಂಡಿ ಗ್ರಾಮದಿಂದ 100 ಮೀಟರ್ ದೂರದಲ್ಲಿದ್ದರೂ ಬಜೆಗುಂಡಿಯ ಕಸದ ಸಮಸ್ಯೆಗೆ ಮುಕ್ತಿ ನೀಡುವಲ್ಲಿ ಮಾತ್ರ ಈವರೆಗೆ ಎಳ್ಳಷ್ಟೂ ತಲೆಕೆಡಿಸಿಕೊಂಡಿಲ್ಲ.
ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಒಂದು ಬದಿಯಲ್ಲಿರುವ ಬಜೆಗುಂಡಿ ಗ್ರಾಮ ಅತೀ ಹೆಚ್ಚು ಮನೆ ಹಾಗೂ ಜನಸಂಖ್ಯೆಯನ್ನು ಹೊಂದಿರುವ ಗ್ರಾಮವಾಗಿದೆ. ಶೇ.98ರಷ್ಟು ಕೂಲಿ ಕಾರ್ಮಿಕ ಕುಟುಂಬಗಳೇ ನೆಲೆಸಿದ್ದು, ಇರುವ ಮೂರು ಸೆಂಟ್ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಅವಶ್ಯಕ ಸ್ಥಳಾವಕಾಶ ಇಲ್ಲದ್ದರಿಂದ ರಾಜ್ಯ ಹೆದ್ದಾರಿಯ ಬದಿಯಲ್ಲಿ ತ್ಯಾಜ್ಯವನ್ನು ಸುರಿಯಲಾಗುತ್ತಿದೆ.
ಬಜೆಗುಂಡಿ ಗ್ರಾಮದಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿಗೆ ಒತ್ತಿಕೊಂಡಂತೆ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ, ಖಿಳಾರಿಯಾ ಮಸೀದಿಯೂ ಇದ್ದು, ಇವುಗಳ ಮುಂಭಾಗವೇ ಕಸದ ರಾಶಿ ನಿರ್ಮಾಣವಾಗುತ್ತಿದೆ. ಇದೇ ಸ್ಥಳದಲ್ಲಿ ಬಸ್ ಹಾಗೂ ಆಟೋಗಳ ನಿಲುಗಡೆಯೂ ಆಗುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.
ಮಳೆಬಿದ್ದರೆ ತ್ಯಾಜ್ಯ ಕೊಳೆತು ಇಡೀ ಪ್ರದೇಶ ದುರ್ಗಂಧ ಬೀರುತ್ತಿದ್ದು, ಕ್ರಿಮಿ ಕೀಟಗಳ ಉತ್ಪಾದನಾ ಕಾರ್ಖಾನೆ ಯಂತಾಗಿದೆ. ರಸ್ತೆಯ ಬದಿಯಲ್ಲಿ ಕಸವನ್ನು ಹಾಕಬಾರದು ಎಂದು ಹೇಳುವ ಗ್ರಾಮ ಪಂಚಾಯಿತಿ, ತ್ಯಾಜ್ಯ ವಿಲೇವಾರಿಗೆ ಬದಲಿ ವ್ಯವಸ್ಥೆ ಮಾಡದಿರುವದರಿಂದ ಹಲವು ದಶಕಗಳಿಂದ ಈ ಸಮಸ್ಯೆ ಜೀವಂತವಾಗಿದೆ.
ಬಜೆಗುಂಡಿಯಲ್ಲಿ ಹಲವಷ್ಟು ವರ್ಷಗಳಿಂದ ಕಸವಿಲೇವಾರಿ ಸಮಸ್ಯೆ ಇದ್ದು, ಈವರೆಗೆ ಆಡಳಿತ ನಡೆಸಿದ ಜನಪ್ರತಿನಿಧಿಗಳು, ಕೆಲಸ ಮಾಡಿದ ಅಧಿಕಾರಿಗಳು ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡುವಲ್ಲಿ ವಿಫಲವಾಗಿದ್ದಾರೆ. ಇನ್ನಾದರೂ ಗ್ರಾಮದ ಸ್ವಚ್ಛತೆಯನ್ನು ಗಮನದಲ್ಲಿಸಿಕೊಂಡು ಕಸವಿಲೇವಾರಿಗೆ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ‘ಶಕ್ತಿ’ಯೊಂದಿಗೆ ಆಗ್ರಹಿಸಿದ್ದಾರೆ.
-ವಿಜಯ್ ಹಾನಗಲ್