ಸೋಮವಾರಪೇಟೆ, ಅ. 6: ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಸತತವಾಗಿ ಅತೀವೃಷ್ಟಿ, ಪ್ರಾಕೃತಿಕ ವಿಕೋಪ ಸಂಭವಿಸಿ ಬೆಳೆಗಾರ ವರ್ಗ ಸಂಕಷ್ಟದಲ್ಲಿದ್ದು, ಸರ್ಕಾರಗಳು ಬೆಳೆಗಾರರ ಚಾಲ್ತಿ ಮತ್ತು ಅವಧಿ ಮೀರಿದ ಫಸಲು ಸಾಲಗಳನ್ನು ಮನ್ನಾ ಮಾಡಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಅವರು, ಕಾಫಿ ಉತ್ಪಾದನಾ ವೆಚ್ಚ ಅಧಿಕವಾಗುತ್ತಿದ್ದು, ಫಸಲು ಕಡಿಮೆಯಾಗುತ್ತಿದೆ. ಕೂಲಿ ಹೆಚ್ಚಾಗಿ ಕೂಲಿ ಮಾಡುವ ಅವಧಿ ಕಡಿಮೆಯಾಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಅರೇಬಿಕಾ ಕಾಫಿಯನ್ನು ಉಳಿಸಿಕೊಳ್ಳಬೇಕಾದರೆ ಸರ್ಕಾರಗಳು ಬೆಳೆಗಾರರ ನೆರವಿಗೆ ಧಾವಿಸಲೇಬೇಕಿದೆ ಎಂದರು.
ಅತೀವೃಷ್ಟಿಯೊಂದಿಗೆ ಬೋರರ್ ಹಾವಳಿಯಿಂದ ಅರೇಬಿಕಾ ಗಿಡಗಳು ನಶಿಸುತ್ತಿವೆ. ಜಿಲ್ಲೆಯ ಶೇ.98ರಷ್ಟು ಸಣ್ಣ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದು, ಆರ್ಥಿಕವಾಗಿ ದುರ್ಬಲರಾಗುತ್ತಿದ್ದಾರೆ. ಇದರಿಂದಾಗಿ ಬ್ಯಾಂಕುಗಳಿಂದ ಪಡೆದುಕೊಂಡಿರುವ ಫಸಲು ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದಿನ ಲೋಕಸಭಾ ಚುನಾವಣೆ ಸಂದರ್ಭ ಸಂಸದ ಪ್ರತಾಪ್ ಸಿಂಹ ಅವರು ಬೆಳೆಗಾರರ ನೆರವಿಗೆ ಧಾವಿಸುವ ಭರವಸೆ ನೀಡಿದ್ದು, ಅದನ್ನು ಈಗ ಈಡೇರಿಸಬೇಕೆಂದು ಮೋಹನ್ ಬೋಪಣ್ಣ ಒತ್ತಾಯಿಸಿದರು.
ಅರೇಬಿಕಾ ಕಾಫಿತೋಟ ವರ್ಷದಿಂದ ವರ್ಷಕ್ಕೆ ಕಡಿಮೆ ಯಾಗುತ್ತಿದೆ. ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಅರೇಬಿಕ ಸಂಪೂರ್ಣ ನಶಿಸುವ ಸಂಭವವಿದ್ದು, ತಕ್ಷಣ ಸರ್ಕಾರಗಳು ಅರೇಬಿಕಾ ಕಾಫಿ ಉಳಿವಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದರು. ಕಾಫಿ ಮಂಡಳಿಯು ಬೆಳೆಗಾರರ ಹಿತ ಕಾಯುವಲ್ಲಿ ವಿಫಲವಾಗಿದೆ. ಇದರಿಂದ ಬೆಳೆಗಾರರಿಗೆ ಯಾವದೇ ಪ್ರಯೋಜನ ವಾಗಿಲ್ಲ. ಈ ಹಿನ್ನೆಲೆ ಮಂಡಳಿಯನ್ನು ಸ್ವತಂತ್ರಗೊಳಿಸಿ, ಬೆಳೆಗಾರರ ಪ್ರಾತಿನಿಧ್ಯ ಹೆಚ್ಚಿಸಬೇಕಿದೆ. ಕಾಫಿ ತೋಟಗಳ ನಿರ್ವಹಣೆಗೆ ಸಹಾಯಧನ ಯೋಜನೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೋವಿಡ್ನಿಂದಾಗಿ ಪ್ರಸಕ್ತ ವರ್ಷ ಕಾಫಿ ತೋಟದಲ್ಲಿ ನಿರ್ವಹಣಾ ಕಾರ್ಯಗಳು ನಡೆದಿಲ್ಲ. ಪರಿಣಾಮ ಇಳುವರಿ ಕಡಿಮೆಯಾಗಿದೆ. ಈ ಹಿನ್ನೆಲೆ ಕಾಫಿಗೆ ಸಂಬಂಧಿಸಿದ ಅಭಿವೃದ್ಧಿ ಸಾಲದ ಕಂತುಗಳನ್ನು ಬಡ್ಡಿರಹಿತವಾಗಿ 2 ವರ್ಷಗಳ ಅವಧಿಗೆ ಮುಂದೂಡಲು ಕ್ರಮ ಕೈಗೊಳ್ಳಬೇಕೆಂದು ಮೋಹನ್ ಬೋಪಣ್ಣ ಮನವಿ ಮಾಡಿದರು.
ಸಹಕಾರ ಸಂಘಗಳ 1 ಲಕ್ಷದವರೆಗಿನ ಸಾಲಮನ್ನಾ ಯೋಜನೆ ಇನ್ನೂ ಅನೇಕ ಮಂದಿಗೆ ತಲುಪಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ತಾ. 30 ರೊಳಗೆ ಬಾಕಿ ಇರುವ ಫಲಾನುಭವಿಗಳಿಗೆ ಸಾಲಮನ್ನಾ ಯೋಜನೆಯನ್ನು ಅನುಷ್ಠಾನ ಗೊಳಿಸಬೇಕು. ತಪ್ಪಿದಲ್ಲಿ ಬೆಳೆಗಾರರ ಸಂಘದಿಂದ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿ ಸಿದರು. ಇದರೊಂದಿಗೆ ಎನ್ಡಿ ಆರ್ಎಫ್ ಮತ್ತು ಎಸ್ಡಿಆರ್ ಎಫ್ನಿಂದ ಒಂದು ಹೆಕ್ಟೇರ್ ಬೆಳೆ ನಷ್ಟಕ್ಕೆ ಕನಿಷ್ಟ 1 ಲಕ್ಷ ಪರಿಹಾರ ನೀಡುವಂತಾಗಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಬೆಳೆಗಾರರ ಸಂಘದ ಕಾರ್ಯದರ್ಶಿ ಎಸ್.ಸಿ. ಪ್ರಕಾಶ್, ಉಪಾಧ್ಯಕ್ಷ ಬಿ.ಎಂ. ಲವ, ನಿರ್ದೇಶಕರಾದ ಸೋಮಶೇಖರ್, ಪೂವಮ್ಮ ಅವರುಗಳು ಉಪಸ್ಥಿತರಿದ್ದರು.