ಮಡಿಕೇರಿ, ಅ. 6: ಕೃಷಿ ತಿದ್ದುಪಡಿ ಮಸೂದೆ ಕುರಿತು ವಾಸ್ತವಾಂಶ ತಿಳಿಯದೇ ಗೊಂದಲ ಮೂಡಿಸಲಾಗುತ್ತಿದೆ ಎಂದು ವೀರಾಜಪೇಟೆ ಶಾಸಕ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.
ಅಮ್ಮತ್ತಿ-ಕಾರ್ಮಾಡುವಿನ ಗೋ ಶಾಲೆಯಲ್ಲಿ ಇತ್ತೀಚೆಗೆ ವೀರಾಜಪೇಟೆ ತಾಲೂಕು ಕೃಷಿ ಮೋರ್ಚಾದಿಂದ ಪ್ರಧಾನಿ ನರೇಂದ್ರ ಮೋದಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಹಾತ್ಮ ಗಾಂಧಿ ಯವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ‘ಸೇವಾ ಸಪ್ತಾಹ’ ಆಚರಣೆ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಭೂಮಿ ಪೂಜೆ, ಗಂಗಾ ಪೂಜೆ ಮತ್ತು ಗೋಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎರಡನೇ ಬಾರಿಗೆ ಅಧಿಕಾರ ಹಿಡಿದಿರುವ ಬಾಜಪ ಪಕ್ಷ ದೇಶದ ಜನತೆಗಾಗಿ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ನೀಡಿದೆ. ಅವೆಲ್ಲವನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದರು.
ಭೂಸುಧಾರಣಾ ಕಾಯ್ದೆಯ ಕೆಲವು ಕಲಂಗಳಿಗೆ ತಂದಿರುವ ತಿದ್ದುಪಡಿ. ಅದರ ವಾಸ್ತವಾಂಶವನ್ನು ತಿಳಿಯದೆ ಜನರಲ್ಲಿ ವಿನಾಕಾರಣ ಗೊಂದಲ ಗಳನ್ನು ಮೂಡಿಸಲಾಗುತ್ತಿದೆ.
ಆದರೆ ಯಾವ ಗೊಂದಲವೂ ಆ ತಿದ್ದುಪಡಿಯಲ್ಲಿ ಇಲ್ಲ. ಈ ಹಿಂದೆ ಕೃಷಿಕರಲ್ಲದವರು ಕೃಷಿಭೂಮಿಯನ್ನು ಪರಬಾರೆ ಮಾಡಲು ಆದಾಯದ ಮಿತಿಯಿತ್ತು. ಮೊದಲು 2 ಲಕ್ಷವಿದ್ದದ್ದು ನಂತರ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ 25 ಲಕ್ಷಕ್ಕೆ ನಿಗದಿಯಾಗಿತ್ತು.
ನಮ್ಮ ಸರ್ಕಾರ ಇದ್ದ ಮಿತಿಗಳನ್ನು ತೆಗೆದುಹಾಕಿದೆ. ಇದು ಕೃಷಿ ಭೂಮಿಗೆ ಮಾರಕ, ರೈತವಿರೋಧಿ ಎಂದು ನಮ್ಮನ್ನು ಕರೆಯಲಾಗುತ್ತಿದೆ. ಆದರೆ, ನೀರಾವರಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಬಾರದು ಎನ್ನುವ ನಿರ್ಬಂಧವನ್ನು ವಿಧಿಸಲಾಗಿದೆ. ಒಂದು ವೇಳೆ ನೀರಾವರಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಿದ್ದೇ ಆದಲ್ಲಿ ರೂ. 2 ಲಕ್ಷದವರೆಗೂ ದಂಡ ಮತ್ತು ಅಂಥವರ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ಪಡೆಯುತ್ತದೆ ಎಂದು ಬೋಪಯ್ಯ ಹೇಳಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷರಾದ ರಾಬಿನ್ ದೇವಯ್ಯ ಸೇವಾ ಸಪ್ತಾಹದ ಹೆಸರಿನ್ನಲ್ಲಿ ಕಳೆದೆರೆಡು ವಾರಗಳಿಂದ ರಾಷ್ಟ್ರೀಯ ಚಿಂತಕರ ಜಯಂತಿ ಆಚರಣೆಯನ್ನು ಮಾಡುತ್ತಾ ಬಂದಿದ್ದೇವೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಪಾರಂಪರಿಕವಾದ ಗೋಪೂಜೆ, ಭೂಮಿಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಳಿಕ ಕೃಷಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಹಾಗೂ ಮಕ್ಕಳ ತಜ್ಞರು ಆದ ಡಾ. ನವೀನ್ಕುಮಾರ್ ಬಿ.ಸಿ. ಮಾತನಾಡಿ, ಭಾರತ ದೇಶದ ನೂರಾ ಅರವತ್ತು ಕೋಟಿ ಲಕ್ಷ ಹೆಕ್ಟೇರ್ ಮಣ್ಣಿನಲ್ಲಿ ನೂರಾ ನಾಲ್ಕು ಲಕ್ಷ ಕೋಟಿ ಮಣ್ಣು ಈಗ ತೊಂದರೆಯಲ್ಲಿದೆ. ಅದಕ್ಕೆ ನಾವು ಏನಾದರೂ ಮಾಡಲೇಬೇಕಿದೆ. ನಮಗೆ ಮಣ್ಣಿನ ನಿರ್ವಹಣೆ ಗೊತ್ತಿಲ್ಲ. ಇ-ತ್ಯಾಜ್ಯದಿಂದ ಹಿಡಿದು ಪ್ರತಿ ತ್ಯಾಜ್ಯವನ್ನು ಮಣ್ಣಿಗೆ ಸೇರಿಸುತ್ತಾ ಇದ್ದೇವೆ. ಮಣ್ಣು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಹೀಗೆ ಮುಂದುವರಿದರೆ ಮುಂದಿನ ಜನಾಂಗಕ್ಕೆ ನಾವೂ ಬರೀ ಬರಡು ಭೂಮಿಯನ್ನು ಬಿಟ್ಟುಹೋಗು ವಂತಾಗುತ್ತದೆ. ಆದ್ದರಿಂದ ಸಾವಯವ ಕೃಷಿಗೆ ಮಹತ್ವ ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕಿನ ಪ್ರಗತಿಪರ ರೈತರನ್ನು ಹಾಗೂ ಪ್ರಗತಿಪರ ಕೃಷಿ ಕಾರ್ಮಿಕರನ್ನು ಈ ಸಂದರ್ಭ ಕೃಷಿ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಟ್ಟೇರ ಈಶ್ವರ್, ತಾಲೂಕು ಮಂಡಲದ ಅಧ್ಯಕ್ಷ ನೆಲ್ಲೀರ ಚಲನ್, ಪ್ರವೀಣ್, ಅಮ್ಮತ್ತಿ ಮಹಾಮಂಡಲದ ಅಧ್ಯಕ್ಷ ಸುವಿನ್ ಗಣಪತಿ, ಬಿಜೆಪಿ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.