ಕುಶಾಲನಗರ, ಅ. 6: ಏಳು ದಶಕಗಳನ್ನು ಕಂಡ ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿದ್ದರೂ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ. 1949 ರಲ್ಲಿ ಪ್ರೆಸರ್‍ಪೇಟ್ ಸ್ಕೂಲ್ ಎಕ್ಸ್‍ಟೆನ್ಷನ್‍ನಲ್ಲಿ ಅಂದಿನ ಕೂರ್ಗ್ ಚೀಫ್ ಕಮಿಷನರ್ ಆಗಿದ್ದ ದಿವಾನ್ ಬಹದ್ದೂರ್ ಸಿ.ಟಿ. ಮುದಲಿಯಾರ್ ಶಂಕುಸ್ಥಾಪನೆ ಮಾಡಿದ ಈ ಸರಕಾರಿ ಶಾಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಸಮಾಜದಲ್ಲಿ ಹಲವು ಸ್ಥಾನಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಸರಕಾರಿ ಶಾಲೆ ಮಾತ್ರ ಇನ್ನೂ ಹಂಚಿನ ಕಟ್ಟಡಗಳ ಭೂತ ಬಂಗಲೆಯಂತೆ ಗೋಚರಿಸುತ್ತಿದೆ. ಶಾಲೆ ಏಳು ದಶಕಗಳನ್ನು ಕಂಡರೂ ಈ ಶಾಲೆಗೆ ಮಾತ್ರ ಯಾವುದೇ ನೂತನ ಯೋಜನೆಗಳಾಗಲಿ, ಅನುದಾನಗಳಾಗಲಿ ದೊರಕದೆ ಬರಡಾಗಿರುವ ದೃಶ್ಯ ಕಂಡುಬರುತ್ತಿದೆ.
ಸುಮಾರು 4.5 ಎಕರೆ ವಿಸ್ತೀರ್ಣದ ಪ್ರದೇಶದ ಈ ಶಾಲೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿದ್ದು ಇದುವರೆಗೂ ನೂರಾರು ಸಂಖ್ಯೆಯ ಸಾಮಾಜಿಕ ಕಾರ್ಯಕ್ರಮಗಳು ಈ ಆವರಣದಲ್ಲಿ ನಡೆದಿರುವುದನ್ನು ಗಮನಿಸಬಹುದು. ಆದರೆ ಶಾಲೆ ಮಾತ್ರ ತನ್ನ ಬೆಳ್ಳಿಹಬ್ಬವನ್ನಾಗಲಿ, ಸುವರ್ಣ ಮಹೋತ್ಸವನ್ನಾಗಲಿ ಕಂಡಿಲ್ಲ.
ಜಿಲ್ಲೆಯ ಪ್ರತಿಷ್ಠಿತ ಸರಕಾರಿ ಶಾಲೆಯಲ್ಲಿ ಪ್ರಸಕ್ತ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಕನಿಷ್ಟ ಸೌಲಭ್ಯವಾದ ನೀರಿನ ಕೊರತೆ ಕಂಡುಬಂದಿದೆ. ಹಲವು ದಶಕಗಳ ಹಿಂದೆ ಶಾಲಾ ಆವರಣದಲ್ಲಿ ಕೊಳವೆ ಬಾವಿಯೊಂದನ್ನು ನಿರ್ಮಿಸಲಾಗಿದ್ದು ಅದು ಸಮರ್ಪಕ ನಿರ್ವಹಣೆ ಇಲ್ಲದೆ ಮಣ್ಣು ತುಂಬುತ್ತಿದೆ. ಜೊತೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಪ್ರಸಕ್ತ ಶಾಲೆಯಲ್ಲಿ ಸುಮಾರು 400 ರಿಂದ 500 ವಿದ್ಯಾರ್ಥಿಗಳಿದ್ದು ಬಹುತೇಕ ಬಡ ಕುಟುಂಬದವರು ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಶಾಲೆಗೆ ಸ್ಥಳೀಯ ರೋಟರಿ ಸಂಸ್ಥೆ ಕುಡಿಯುವ ನೀರಿಗಾಗಿ ಲಕ್ಷಾಂತರ ವೆಚ್ಚದಲ್ಲಿ ಶುದ್ಧೀಕರಣ ಘಟಕವೊಂದನ್ನು ನಿರ್ಮಿಸಿಕೊಟ್ಟಿದ್ದು ಅದೂ ಕೂಡ ನೀರಿಲ್ಲದೆ ತನ್ನ ಕೆಲಸವನ್ನು ಸ್ಥಗಿತಗೊಳಿಸಿದೆ. ಇದರೊಂದಿಗೆ ಶೌಚಾಲಯಕ್ಕೂ ಅವಶ್ಯಕತೆಯಿರುವ ನೀರಿನ ಕೊರತೆ ಎದುರಾಗುತ್ತಿದೆ. ಇದೀಗ ಕೊರೊನಾ ರಜಾದ ಹಿನ್ನೆಲೆ ಮಕ್ಕಳು ಈ ಸಮಸ್ಯೆಯಿಂದ ಮುಕ್ತರಾಗಿದ್ದಾರೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ತಂಡ ಶಾಲಾ ಅಭಿವೃದ್ಧಿ ಸಮಿತಿಯೊಂದಿಗೆ ಸೇರಿ ಅಲ್ಪಸ್ವಲ್ಪ ಸೌಲಭ್ಯ ಕಲ್ಪಿಸುವಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಶಾಲೆಗೆ ಯಾವುದೇ ಸ್ವಂತ ಆದಾಯ ಇಲ್ಲದ ಕಾರಣ ಹೆಚ್ಚಿನ ಸೌಲಭ್ಯವನ್ನು ಪಡೆಯಲು ಅಸಾಧ್ಯವಾಗುತ್ತಿದೆ ಎನ್ನುವುದು ಇಲ್ಲಿನ ಆಡಳಿತ ಮಂಡಳಿಯ ಅಳಲಾಗಿದೆ. ಆವರಣದ ಹೊರ ಭಾಗದಲ್ಲಿ ಮಕ್ಕಳು ತೆರಳುವ ದಾರಿಯಲ್ಲಿ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಒಂದು ಇದ್ದು ಇದರಿಂದ ಅಪಾಯದೊಂದಿಗೆ ಮಕ್ಕಳಿಗೆ ಓಡಾಡಲು ಕೂಡ ಕಷ್ಟವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಸಂಘಸಂಸ್ಥೆಗಳು ಅಥವಾ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯತ್ತ ಮನಸ್ಸು ಮಾಡಿದಲ್ಲಿ ಶಾಲೆಯ ಕನಿಷ್ಟ ಅಭಿವೃದ್ಧಿ ಸಾಧ್ಯ ಎನ್ನುವುದು ಇಲ್ಲಿನ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಯ ಆಶಯವಾಗಿದೆ.
ಶಾಲೆಯ ವಿದ್ಯುತ್ ಬಿಲ್ ಪಾವತಿಸಲು ಕೂಡ ಕೆಲವೊಮ್ಮೆ ಪರದಾಡಬೇಕಾದ ಪರಿಸ್ಥಿತಿ ಸೃಷ್ಠಿಯಾಗುತ್ತಿದೆ. ಶಾಲಾ ಕಟ್ಟಡಗಳಂತೂ ನಿರ್ವಹಣೆ ಕಾಣದೆ ದಶಕಗಳೇ ಸಂದಿವೆ. ಇಷ್ಟೆಲ್ಲದರ ನಡುವೆ ಶಾಲೆಗೆ ಬರುವ ವಿದ್ಯಾರ್ಥಿಗಳು ಇದುವರೆಗೆ ಉತ್ತಮ ಫಲಿತಾಂಶ ನೀಡುವಲ್ಲಿ ಮಾತ್ರ ಯಶಸ್ಸು ಕಾಣುತ್ತಿರುವುದು ಸೋಜಿಗದ ಸಂಗತಿ ಎಂದರೆ ತಪ್ಪಾಗಲಾರದು. ವಿಶೇಷ ಅನುದಾನ ಕಲ್ಪಿಸುವ ಮೂಲಕ ದಶಕಗಳ ಇತಿಹಾಸ ಹೊಂದಿರುವ ಕುಶಾಲನಗರದ ಸರಕಾರಿ ಶಾಲೆಗೆ ಕೊರೊನ ರಜಾ ಮುಗಿಯುವ ಮುನ್ನ ಕಾಯಕಲ್ಪ ಕಲ್ಪಿಸುವಲ್ಲಿ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಬೇಕು.
- ಚಂದ್ರಮೋಹನ್