ಮುಳ್ಳೂರು, ಅ. 6: ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ದುಂಡಳ್ಳಿ ಹಾಲುಗೊಲ್ಲರ ಹಟ್ಟಿಯಲ್ಲಿ ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ಕೋವಿಡ್-19 ಕುರಿತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಕ್ಕಳ ಸಹಾಯವಾಣಿ ಕೇಂದ್ರದ ತಾಲೂಕು ಕಾರ್ಯಕರ್ತೆ ಬಿ.ಆರ್. ಕುಮಾರಿ ಮಾಹಿತಿ ನೀಡಿ-ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕೆಂದರು. ಸ್ವಚ್ಛತೆ ಇಲ್ಲದಿದ್ದಲ್ಲಿ ರೋಗ ರುಜಿನಗಳು ಬರುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು, ಉತ್ತಮ ಆರೋಗ್ಯ ವೃದ್ಧಿಸಲು ಸ್ವಚ್ಛತೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ದಿಸೆಯಲ್ಲಿ ನೀವುಗಳು ನಿಮ್ಮ ವಠಾರವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡು ರೋಗ ರುಜಿನಗಳು ಬಾರದಂತೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ದೇವರಾಜ್ ಮಾಹಿತಿ ನೀಡಿ-ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ವಠಾರದ ಮಹಿಳೆಯರು ಜಾಗೃತರಾಗಬೇಕು ಹಾಗೇ ಪೋಷಕರು ಸಹ ತಮ್ಮ ಮಕ್ಕಳ ಮೇಲೆ ಎಚ್ಚರಿಕೆವಹಿಸುವ ಅಗತ್ಯ ಇರುತ್ತದೆ ಎಂದರು.
ಮಕ್ಕಳ ಸಹಾಯವಾಣಿ ಕೇಂದ್ರದ ಉದ್ದೇಶದ ಕುರಿತು ತಾಲೂಕು ಕಾರ್ಯಕರ್ತ ಯೋಗೇಶ್ ಮಾಹಿತಿ ನೀಡಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಹಾಗೂ ಮಕ್ಕಳ ರಕ್ಷಣೆಗಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಕಂಡುಬಂದಾಗ ಮಕ್ಕಳ ಸಹಾಯವಾಣಿ ಕೇಂದ್ರದ 1098 ಸಂಖ್ಯೆಗೆ ಉಚಿತ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು.