ಮಡಿಕೇರಿ, ಅ.5 : ಕಡುಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಒತ್ತಾಯಿಸಿ ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ವಸತಿ ರಹಿತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಡವರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಅವರು ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿ ಸೂರಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲವೆಂದು ಆರೋಪಿಸಿದರು.
ನಿವೇಶನ ಮತ್ತು ವಸತಿ ಇಲ್ಲದೆ ಕೊಡಗಿನ ಸಾವಿರಾರು ಬಡವರು ತೋಟದ ಲೈನ್ ಮನೆಗಳಲ್ಲಿ, ನದಿ ತೀರಗಳಲ್ಲಿ, ಬಾಡಿಗೆ ಮನೆÉಗಳಲ್ಲಿ, ಪೈಸಾರಿ ಜಾಗಗಳಲ್ಲಿ ವಾಸ ಮಾಡುತ್ತಿದ್ದಾರೆ. ಈ ಪೈಕಿ ಆದಿವಾಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ತಕ್ಷಣ ಎಲ್ಲರಿಗೂ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅ.2 ರಿಂದ ಜಿಲ್ಲೆಯ ವಿವಿಧ ಗ್ರಾ.ಪಂ ಎದುರು ಸರಣಿ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲಾಗಿದೆ. ಈ ಬಗ್ಗೆ ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಸೋಮಪ್ಪ ಎಚ್ಚರಿಕೆ ನೀಡಿದರು. ಬೇಡಿಕೆಗಳ ಮನವಿ ಪತ್ರವನ್ನು ಪ್ರಭಾರ ಜಿಲ್ಲಾಧಿಕಾರಿ ಡಾ.ಸ್ನೇಹ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಸಂಘಟನೆಯ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್, ಉಪಾಧ್ಯಕ್ಷರುಗಳಾದ ಎನ್.ಮಣಿ ಮಾರ್ಗೊಲ್ಲಿ, ಆರ್. ಕುಮಾರ್, ಪಿ.ಟಿ.ಸುಂದರ, ಶಬಾನಾ, ಜಯ, ಭವ್ಯ, ಸರೋಜಾ, ಮಾನಸ, ರಮಣಿ, ಎಐವೈಎಫ್ ಜಿಲ್ಲಾಧ್ಯಕ್ಷ ರಫಿಕ್ ನವಲಗುಂದ, ವೀರಾಜಪೇಟೆ ಪ.ಪಂ ಸದಸ್ಯ ವಿ.ಆರ್. ರಜನಿಕಾಂತ್, ವೀರಾಜಪೇಟೆ ಕಟ್ಟಡ ಕಾರ್ಮಿಕ ನಾಯಕರಾದ ಗೋಪಾಲ, ಕೃಷ್ಣ, ರಮೇಶ್ ಮಾರ್ಗೋಲ್ಲಿ, ಹರಿಶ್ಚಂದ್ರ, ಲತಾ ಜಂಬಬೂರು, ಚೆಲುವಿ, ಜಯರಾಮ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುಂಟಿಕೊಪ್ಪ: ಜಿಲ್ಲೆಯ ವಸತಿಹೀನ ಮತ್ತು ನಿವೇಶನ ರಹಿತರ ವಸತಿಗಾಗಿ ಆಗ್ರಹಿಸಿ ಸಿಪಿಐ ಪಕ್ಷದ ವತಿಯಿಂದ ಗ್ರಾಮ ಪಂಚಾಯಿತಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ರಾಜ್ಯ, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೇಣುಗೋಪಾಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರಮೇಶ್ , ನಾರಾಯಣ ಐಗೂರು, ಶಿವಾನಂದ ಭೂತನಕಾಡು, ಶಿವಪ್ಪ ಭೂತನಕಾಡು ಹಾಗೂ ಮಾದಾಪುರ, ಅತ್ತೂರು ನಲ್ಲೂರು, ಕೆದಕಲ್ ಗ್ರಾಮದ ಕಾರ್ಯಕರ್ತರು ಪಾಲ್ಗೊಂಡಿದ್ದರು.