ಸೋಮವಾರಪೇಟೆ,ಅ.5: ಭಾರತೀಯ ಜನತಾ ಪಾರ್ಟಿಯ ಶಾಸಕರ ಕೆಲಸವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿಗಳು, ಕಾನೂನಿಗೆ ವಿರುದ್ಧವಾಗಿ ವ್ಯಕ್ತಿಯ ವಿರುದ್ಧ 107 ಸೆಕ್ಷನ್ ಅಡಿಯಲ್ಲಿ ನೋಟೀಸ್ ಜಾರಿಗೊಳಿಸಿದ್ದಾರೆ ಎಂದು ಜನಾಂದೋಲನ ವೇದಿಕೆ ಜಿಲ್ಲಾ ಅಧ್ಯಕ್ಷ ವಿ.ಪಿ. ಶಶಿಧರ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗಡಿಕಟ್ಟೆಯ ಅಬ್ದುಲ್ ಹಮೀದ್ ಖಾನ್ ಎಂಬವರ ವಿರುದ್ಧ ಈ ಹಿಂದೆ ಯಾವದೇ ಪ್ರಕರಣಗಳು ದಾಖಲಾಗದಿದ್ದರೂ ಶಾಸಕರ ಒತ್ತಡದಿಂದಾಗಿ ಠಾಣಾಧಿಕಾರಿಗಳು 107 ಸೆಕ್ಷನ್ ಅಡಿಯಲ್ಲಿ ನೋಟೀಸ್ ನೀಡಿರುವದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾದಂತಾಗಿದೆ ಎಂದರು.
ಜಿಲ್ಲೆಯ ಈರ್ವರು ಶಾಸಕರುಗಳು ಕಳೆದ 25 ವರ್ಷಗಳಿಂದ ಶಾಸಕರಾಗಿದ್ದರೂ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲು ವಿಫಲರಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕನಿಷ್ಟ ಅವಶ್ಯಕತೆ ಇರುವಷ್ಟು ವೆಂಟಿಲೇಟರ್‍ಗಳನ್ನು ಆಸ್ಪತ್ರೆಗಳಿಗೆ ಒದಗಿಸಲು ಸಾಧ್ಯವಿಲ್ಲವೆ? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದನ್ನು ನೆಪವಾಗಿರಿಸಿ ಕೊಂಡು, 107ರಡಿಯಲ್ಲಿ ನೋಟೀಸ್ ನೀಡಿದ್ದಾರೆ ಎಂದು ಆರೋಪಿಸಿದರು.
ದುರುದ್ದೇಶಪೂರ್ವಕವಾಗಿ ಶಾಸಕರ ಆಪ್ತ ಸಹಾಯಕ ರವಿ ಅವರ ಮೌಖಿಕ ದೂರಿನ ಮೇರೆಗೆ ಹಮೀದ್‍ರವರಿಂದ ಮುಚ್ಚಳಿಕೆ ಪಡೆಯಲು ಮುಂದಾಗಿದ್ದಾರೆ. ಅಪರಾಧ ಹಿನ್ನೆಲೆ ಇಲ್ಲದೇ ಇದ್ದರೂ, ಇಂತಹ ಕ್ರಮಕ್ಕೆ ಮುಂದಾಗಿರುವದು ಖಂಡನೀಯ. ಸಮಾಜದಲ್ಲಿ ಶಾಂತಿ ಸೃಷ್ಟಿಸಬೇಕಾದ ಪೊಲೀಸರು ಅಮಾಯಕರನ್ನು ಬಂಧಿಸಿ ಕಾನೂನಿನ ಕುಣಿಕೆಯಲ್ಲಿ ಸಿಲುಕಿಸುವ ಹುನ್ನಾರ ನಡೆಸುತ್ತಿರುವದು ಸರಿಯಲ್ಲ. ಇದರ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವದಾಗಿ ಎಚ್ಚರಿಸಿದರು.
ದಲಿತ ಒಕ್ಕೂಟದ ಜಿಲ್ಲಾಧ್ಯಕ್ಷ ನಿರ್ವಾಣಪ್ಪ, ಜನಾಂದೋಲನ ವೇದಿಕೆಯ ಸಂಚಾಲಕ ಬಿ.ಈ. ಜಯೇಂದ್ರ, ಪದಾಧಿಕಾರಿಗಳಾದ ಎಚ್.ಬಿ. ಜಯಮ್ಮ, ಕೆ.ಎ. ಆದಮ್, ಕೆ.ಪಿ. ದಿನೇಶ್ ಮತ್ತಿತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.