ಸೋಮವಾರಪೇಟೆ, ಅ.5: ತಾಲೂಕು ಕೇಂದ್ರವಾದ ಸೋಮವಾರಪೇಟೆಯಲ್ಲಿ ಗುರುಭವನ ನಿರ್ಮಾಣಕ್ಕೆ ಶಾಸಕರ ನಿಧಿಯಡಿ 10 ಲಕ್ಷ ಅನುದಾನ ಒದಗಿಸಲಾಗುವದು ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭರವಸೆ ನೀಡಿದರು.

ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೋಮವಾರಪೇಟೆ ತಾಲೂಕಿನ ಶಿಕ್ಷಕರ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಕೆ. ಪಾಂಡು ಅವರು ಈ ಬಗ್ಗೆ ಶಾಸಕರ ಗಮನ ಸೆಳೆದ ಹಿನ್ನೆಲೆ ಮಾತನಾಡಿದ ರಂಜನ್, ಗುರುಭವನ ನಿರ್ಮಾಣಕ್ಕೆ ಅಗತ್ಯ ಜಾಗ ಒದಗಿಸಿದರೆ ತಾನು ಶಾಸಕರ ನಿಧಿಯಡಿ 10 ಲಕ್ಷ ಅನುದಾನ ಒದಗಿಸುತ್ತೇನೆ ಎಂದರು.

ಈಗಾಗಲೇ ಸೋಮವಾರಪೇಟೆಯ ಜೂನಿಯರ್ ಕಾಲೇಜು ಸಮೀಪ ಅಪೂರ್ಣ ಗೊಂಡಿರುವ ಶತಮಾನೋತ್ಸವ ಭವನದ ಕಟ್ಟಡವನ್ನು ಗುರುಭವನವನ್ನಾಗಿ ರೂಪುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಪಾಂಡು ಹಾಗೂ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಅವರುಗಳು ಇದೇ ಸಂದರ್ಭ ಶಾಸಕರ ಗಮನ ಸೆಳೆದರು.

ಸಮಾಜದ ಮಾರ್ಗದರ್ಶಕರು: ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ರಂಜನ್, ಶಿಕ್ಷಕ ವರ್ಗ ಸಮಾಜದ ಮಾರ್ಗದರ್ಶಕರಿದ್ದಂತೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ತಮ್ಮ ಕರ್ತವ್ಯದಲ್ಲಿ ಸಾರ್ಥಕತೆ ಪಡೆಯುವ ಅವಕಾಶ ಶಿಕ್ಷಕರಲ್ಲಿ ಹೆಚ್ಚಿದೆ ಎಂದರಲ್ಲದೆ, ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದರೊಂದಿಗೆ ದೇಶಕ್ಕೆ ಉತ್ತಮ ಪ್ರಜೆಗಳನ್ನಾಗಿ ಪರಿವರ್ತಿಸುವ ಮಹತ್ತರ ಜವಾಬ್ದಾರಿ ಶಿಕ್ಷಕ ವರ್ಗದ ಮೇಲಿದೆ ಎಂದರು.

ಕೊರೊನಾ ವೈರಸ್ ಹಿನ್ನೆಲೆ ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚು ಜಾಗ್ರತೆ ವಹಿಸಬೇಕು. ಮೂಗು-ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು. ಜಪಾನ್‍ನಲ್ಲಿ ಸರ್ಕಾರದ ಸೂಚನೆಗಳನ್ನು ಅಲ್ಲಿನ ನಾಗರಿಕರು ಚಾಚೂ ತಪ್ಪದೇ ಪಾಲಿಸಿದ್ದರಿಂದ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಿದೆ. ಈ ಹಿನ್ನೆಲೆ ಕೊರೊನಾ ಸಂಬಂಧಿತ ಸರ್ಕಾರ ನೀಡುವ ಮಾರ್ಗದರ್ಶನವನ್ನು ಎಲ್ಲರೂ ಪಾಲಿಸಬೇಕು ಎಂದರು.

ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಸರೋಜಮ್ಮ, ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯೆ ತಂಗಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚೇತನ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಂತಿ ಬೋಪಯ್ಯ, ಶಿಕ್ಷಕರ ಸಂಘದ ಮೈಸೂರು ವಲಯ ಉಪಾಧ್ಯಕ್ಷ ಸಿ.ಕೆ. ಶಿವಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷರುಗಳಾದ ಹೆಚ್.ಕೆ. ಕುಮಾರ್, ಸದಾಶಿವ ಪಲ್ಲೇದ್, ಜಿಮ್ಮಿ ಸಿಕ್ವೇರಾ, ನೌಕರರ ಪತ್ತಿನ ಸಂಘದ ಅಧ್ಯಕ್ಷ ಸೋಮಪ್ಪ, ಬಿ.ಸಿ. ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿಕ್ಷಕಿ ನವೀನಾ ಪ್ರಾರ್ಥಿಸಿ, ಕವಿತಾ ಮತ್ತು ತಂಡದವರು ನಾಡಗೀತೆ, ಸೌಭಾಗ್ಯ ಮತ್ತು ತಂಡದವರು ರೈತಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಗಲಿದ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದರೊಂದಿಗೆ ವಿವಿಧ ಶಾಲೆಗಳಲ್ಲಿ ಬೋಧಕೇತರ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು.