ಎಲ್ಲಾದರೂ ಭಾರತ ಚೀನಾ ಸೇನೆಗಳ ನಡುವೆ ಘರ್ಷಣೆ ಸ್ಫೋಟ ಗೊಂಡಿದ್ದರೆ ಖಂಡಿತವಾಗಿ ಚೀನೀಯರ ಮೋಲ್ಡೋ ಗ್ಯಾರಿಸನ್ನಿನ ಸರ್ವ ನಾಶವಾಗುತ್ತಿತ್ತು. ಜುಲೈ 3 ರಂದು ಭಾರತದ ಪ್ರಧಾನ ಮಂತ್ರಿ ಲೇಹ್ಗೆ ಅಚ್ಚರಿ ಮೂಡಿಸುವ ಭೇಟಿ ನೀಡಿದರು. ಅವರೊಡನೆ ದೇಶದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು ಮತ್ತು ಸೇನಾ ಮುಖ್ಯಸ್ಥರು ಇದ್ದರು. ಉತ್ತರ ಕಮಾಂಡ್ನ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ. ಕೆ. ಜೋಶಿ ಮತ್ತು 14 ಕೋರ್ನ ‘ಜಿ ಒ ಸಿ’ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಇದ್ದರು. ಲಡಾಖ್ ಪ್ರಾಂತ್ಯವನ್ನು ಕ್ರಮವಾಗಿ ಕಾರ್ಯ ತಂತ್ರ ಹಾಗೂ ಕಾರ್ಯಾಚರಣೆಯ ಮೂಲಕ ರಕ್ಷಿಸುವುದಕ್ಕೆ ಇವರಿಬ್ಬರೂ ಜವಾಬ್ದಾರರು. ಜೂನ್ 14-15ರ ರಾತ್ರಿ ಗಾಲ್ವಾನ್ನಲ್ಲಿ ನಡೆದ ದುರದೃಷ್ಟಕರ ಘಟನೆಯ ಹಿನ್ನೆಲೆಯಲ್ಲಿ ಈ ಭೇಟಿ ರೂಪುಗೊಂಡಿತ್ತು. ಆ ಘಟನೆಯ ಬಗ್ಗೆ ಇಡೀ ಭಾರತ ದೇಶವೇ ಆಕ್ರೋಶಗೊಂಡಿತ್ತು. 20 ಸೈನಿಕರ ಸಾವು ದೇಶಾದ್ಯಂತ ಆಘಾತ ತರಂಗಗಳನ್ನೇ ಕಳುಹಿಸಿತ್ತು. ಪರಿಸ್ಥಿತಿಯು ನಿಜವಾಗಿಯೂ ಕಠೋರವಾಗಿತ್ತು. 1962 ರ ಪುನರಾವರ್ತನೆಯ ದುಃಸ್ವಪ್ನದ ಚಿಂತನೆ ಎಲ್ಲರ ಮನಸ್ಸಿನಲ್ಲಿತ್ತು.
ಅವತ್ತಿನ ದಿನಗಳಲ್ಲಿ, ಚೀನಾ ಅಂದರೆ ‘ಡ್ರ್ಯಾಗನ್’ ತುಂಬಾ ಅಪಾಯಕಾರಿಯಾಗಿಯೂ ಆಕ್ರಮಣಕಾರಿಯಾಗಿಯೂ ಕಾಣಿಸತೊಡಗಿತ್ತು. ಅವರ 4ನೇ ಯಾಂತ್ರೀಕೃತ ವಿಭಾಗ ಮತ್ತು 6 ನೇ ಯಾಂತ್ರೀಕೃತ ವಿಭಾಗದ 20,000 ಸೈನಿಕರು, ಲಘು ಟ್ಯಾಂಕ್ಗಳು, ರಾಕೇಟ್ ಮತ್ತು ಫೀರಂಗಿಗಳೊಡ ಗೂಡಿ ನಮ್ಮ ದಿಕ್ಕಿನಲ್ಲಿ ತೆರಳಿ ಬಂದಿದ್ದರು. ನಮ್ಮಪ್ರಾಂತ್ಯದೊಳಕ್ಕೆ ನುಗ್ಗಿ ಆಳವಾಗಿ ಆಕ್ರಮಣ ಮಾಡಲು ಸಿದ್ಧರಾಗಿ ಕಾಣುತ್ತಿದ್ದರು. ಭಾರತ ಆಘಾತಕ್ಕೊಳಗಾಗಿತ್ತು. ಆ ಪರಿಸ್ಥಿತಿಯಲ್ಲಿ ನಮ್ಮ ಪ್ರಧಾನಿ ಮೋದಿಯವರು ‘ನಿಮು’ ಎನ್ನುವ ಸ್ಥಳಕ್ಕೆ ಆಗಮಿಸಿದ ನಂತರ, ಜನರಲ್ಗಳು ಪ್ರಸ್ತುತ ಪರಿಸ್ಥಿತಿಯನ್ನು ಆ ಸ್ಥಳದಲ್ಲಿಯೇ ವಿವರಿಸಿಕೊಟ್ಟರು. ಲೆ. ಜ. ಹರೀಂದರ್ ಸಿಂಗ್ ಅವರು, ಚೀನಾದ ಸೈನ್ಯವು ಈ ವರೆಗೆ ಯಾವ ಯಾವ ಕ್ರಮ ಕೈಗೊಂಡಿದೆ, ಹಾಗೂ ಮುಂದಕ್ಕೆ ಏನು ಮಾಡಬಹುದೆಂಬುದರ ಬಗ್ಗೆ ವಿವರಿಸಿದರು.
ಪ್ರಧಾನ ಮಂತ್ರಿ ಇದನ್ನೆಲ್ಲಾ ಆಲಿಸಿದ ನಂತರ “ಚೀನೀಯರು ಏನು ಮಾಡಿದ್ದಾರೆ, ಮತ್ತು ಏನು ಮಾಡಲಿದ್ದಾರೆ ಎನ್ನುವುದರ ಬಗ್ಗೆ ನನಗೆ ಆಸಕ್ತಿ ಇಲ್ಲ, ನೀವು ಏನು ಮಾಡಿದ್ದೀರ ಮತ್ತು ಮುಂದೆ ಏನು ಮಾಡುತ್ತೀರಿ ? ಎಂಬುದರ ಬಗ್ಗೆ ನನಗೆ ಆಸಕ್ತಿ ಇದೆ” ಎಂದು ಹೇಳಿದರು. ಹೀಗೆ ಭವಿಷ್ಯದಲ್ಲಿ ಆಗಲಿರುವ ಕಾರ್ಯಾಚರಣೆಯಲ್ಲಿ ಅವರಿಗೆ ಸ್ವಾತಂತ್ರ್ಯ ನೀಡಿ ಹೊಸ ದಿಕ್ಕನ್ನೇ ಅನುಸರಿಸುವಂತೆ ಪ್ರೇರೇಪಿಸಿದರು. ತದ ನಂತರ, ‘ನಿಮು’ ಎನ್ನುವಲ್ಲಿ ಹೊಸದಾಗಿ ಸೇರ್ಪಡೆಗೊಂಡು ಅಲ್ಲಿಯ ಹವಾಮಾನಕ್ಕೆ ಒಗ್ಗಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಇವರು ಭಾರತದ ಏಕೈಕ ಪರ್ವತ ಆಕ್ರಮಣ ದಳದ ಸಿಪಾಯಿಗಳಾಗಿದ್ದರು. ಈ ಪ್ರಾಂತ್ಯಕ್ಕೆ ಚೀನಾ ಮತ್ತು ಪಾಕಿಸ್ತಾನದ ಉಭಯ ಬೆದರಿಕೆಯನ್ನು ಎದುರಿಸುವ ಸಲುವಾಗಿಯೇ ಇತ್ತೀಚೆಗಷ್ಟೇ ಅವರನ್ನು ಆ ಪ್ರಾಂತ್ಯಕ್ಕೆ ವರ್ಗಾಯಿಸಲಾಗಿತ್ತು. ಅಲ್ಲಿ ಅವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯ ಸಂದೇಶ, ಜಗತ್ತಿಗೆ, ಭಾರತದ ಮೇಲೆ ಪದೇ-ಪದೇ ಧಾಳಿ ಮಾಡಿ ತೊಂದರೆ ಮಾಡುವ ನೆರೆಯ ದೇಶಕ್ಕೆ ಹಾಗೂ ಅದರ ಪ್ರಬಲ ಮಿಲಿಟರಿ ಯಂತ್ರಕ್ಕೆ ಆಗಿತ್ತು. ಪ್ರಧಾನಿ ಒಂದು ಶ್ಲೋಕವನ್ನು ಉಲ್ಲೇಖಿಸಿ ಆ ಸಂದೇಶವನ್ನು ನೀಡಿದ್ದರು. ಅದರ ಅರ್ಥ “ಧೈರ್ಯಶಾಲಿ ಹೃದಯವು ತನ್ನ ಶಸ್ತ್ರಾಸ್ತ್ರಗಳ ಶಕ್ತಿಯಿಂದ ಮಾತೃಭೂಮಿಯನ್ನು ರಕ್ಷಿಸುತ್ತದೆ ಎಂದು”, ಇದು ಪ್ರಪಂಚದಾದ್ಯಂತ ಕೇಳಿಬಂತು. ಮುಂದುವರಿಯುತ್ತಾ “ಈ ಭೂಮಿ ಧೈರ್ಯಶಾಲಿಗಳಿಗೆ, ಅದರ ರಕ್ಷಣೆ ಮತ್ತು ಸುರಕ್ಷತೆಗಾಗಿ ನಮ್ಮ ಬೆಂಬಲ, ಶಕ್ತಿ ಮತ್ತು ಸಂಕಲ್ಪವು ಹಿಮಾಲಯದಷ್ಟು ಹೆಚ್ಚಾಗಿದೆ. ನಾನು ಈ ಸಾಮಥ್ರ್ಯವನ್ನು ನಿಮ್ಮಲ್ಲಿ ನೋಡುತ್ತಿದ್ದೇನೆ ಹಾಗೂ ನೀವು ಪರಿಹರಿಸಬಲ್ಲಿರೆಂದು ನಿಮ್ಮ ದೃಷ್ಟಿಯಲ್ಲಿ ಹಾಗೂ ನಿಮ್ಮ ಮುಖಗಳಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ” ಎಂದರು. “ಸಾವಿರಾರು ವರ್ಷಗಳಿಂದ ಅನೇಕ ಆಕ್ರಮಣಕಾರರ ಧಾಳಿ ಮತ್ತು ದೌರ್ಜನ್ಯವನ್ನು ಹಿಮ್ಮೆಟ್ಟಿಸಿದ ಅದೇ ಭೂಮಿಯ ನಾಯಕರು ನೀವು. ಇದು ನಿಮ್ಮ ಗುರುತು” ಎಂದು ಉತ್ತೇಜಿಸಿದರು. “ ಕೊಳಲನ್ನು ನುಡಿಸುವ ಶ್ರೀಕೃಷ್ಣನನ್ನು ಆರಾಧಿಸುವವರು ನಾವು, ಸುದರ್ಶನ ಚಕ್ರಧಾರಿ ಕೃಷ್ಣನನ್ನು ಆದರ್ಶವಾಗಿ ಅನುಸರಿಸುವವರೂ ನಾವೇ. ಈ ಸ್ಫೂರ್ತಿಯೊಂದಿಗೆ, ಪ್ರತಿ ಧಾಳಿಯ ನಂತರವೂ ಭಾರತ ಬಲಶಾಲಿಯಾಗಿದೆ” ಎಂದು ನೆನೆಪಿಸಿಕೊಟ್ಟರು.
ಇತಿಹಾಸದ ಮರುಕಳಿಕೆ: ಭಾರತ ಚೀನಾ ಗಡಿಭಾಗದಲ್ಲಿಯ ಕಾರ್ಯತಂತ್ರದ ಉದ್ದೇಶದಲ್ಲಿ ಸ್ಥೈರ್ಯವನ್ನು ಹೆಚ್ಚಿಸುವ ಸಂಕೇತ ತುಂಬಾ ಆಳವಾಗಿದ್ದು, ಈ ಸಂದೇಶವನ್ನು ಭಾರತದ ಸೇನಾ ಮುಖಂಡರು ಎಲ್ಲರಿಗಿಂತಲೂ ಎಚ್ಚರಿಕೆಯಿಂದ ಆಲಿಸುತ್ತಿದ್ದರು. ಇದು ಇತಿಹಾಸವನ್ನು ಪುನಃ ಬರೆಯುವ ಸಮಯ, ಇಲ್ಲಿಯವರೆಗೆ ಯೋಚಿಸಲೂ ಆಗದ ಕೆಲಸವನ್ನು ಮಾಡುವ ಅವಕಾಶ ಈಗ ಬಂದೊದಗಿದೆ, ಚೀನೀಯರು ಭೂತಕಾಲದಲ್ಲಿ ವಶಪಡಿಸಿಕೊಂಡ ಭೂ ಪ್ರದೇಶವನ್ನು ವಾಪಾಸ್ ಪಡೆದುಕೊಳ್ಳುವ ಆಕ್ರಮಣಕಾರೀ ಕ್ರಮಕ್ಕೆ ಆಹ್ವಾನವಿದು ಎಂದು ಅವರಿಗರ್ಥವಾಗಿತ್ತು.
ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ, “ ದುರ್ಬಲರಿಂದ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ಶೌರ್ಯವು ಶಾಂತಿಗೆ ಪೂರ್ವಭಾವಿ” ಎಂದಿದ್ದರು. ತಮ್ಮ ಸರ್ಕಾರದ ನಿಲುವಿನಲ್ಲಿ ಆದ ಬದಲಾವಣೆಯನ್ನು ಅಲ್ಲಿದ್ದ ಜನರಲ್ಗಳು ಶೀಘ್ರವಾಗಿ ಅರ್ಥಮಾಡಿಕೊಂಡರು. ಈ ಗಡೀ ಉದ್ವಿಗ್ನತೆಯಲ್ಲಿ, ಆರಂಭಿಕ ಹಂತಗಳಿಂದಲೇ ಚೀನೀಯರು ನಮ್ಮ ಸೇನೆಯನ್ನು ವಿವಿಧ ಮುಖಾಮುಖಿಗಳಿಗೆ ಯಶಸ್ವಿಯಾಗಿ ಸೆಳೆದಿದ್ದರೇ ಅಲ್ಲದೆ, ಯುದ್ಧತಂತ್ರ ಕುಶಲತೆಯಿಂದ ಅಲ್ಲಲ್ಲಿ ಯಶಸ್ಸು ಪಡೆದುಕೊಂಡಿದ್ದರು. ಭಾರತೀಯರು ತಮ್ಮ ಸರಕಾರದ ನಿಲುವನ್ನರಿಯದೇ, ಪ್ರತಿಕ್ರಿಯಾತ್ಮಕ ಕ್ರಮಗಳಲ್ಲೇ ಸಿಕ್ಕಿ ಹಾಕಿಕೊಂಡಿದ್ದರು. ವಿಶಾಲಯುದ್ಧ ಭೂಮಿಯ ಪರಿಕಲ್ಪನೆಯನ್ನೇ ಮಾಡಲಾಗದೆ ಹಲವಾರು ಸ್ಥಳಗಳಲ್ಲಿ ಅವರು ಕಟ್ಟಿ ಹಾಕಿದಂತಿದ್ದರು. ಉತ್ತರದಲ್ಲಿ ದೌಲತ್ ಬೇಗ್ ಓಲ್ಡಿಯಿಂದ (ಡಿ ಬಿ ಓ), ದಕ್ಷಿಣದ ಪಾಂಗೋಂಗ್ ಸರೋವರದವರೆಗೆ, ಸುಮಾರು 300 ಕಿ ಮೀ ವಿಸ್ತಾರವಿರುವ ವ್ಯಾಪ್ತಿಯನ್ನು ಯಾವ ರೀತಿಯಲ್ಲಿ ರಕ್ಷಿಸಬೇಕು ಎಂದರಿಯದೆ ಚೀನೀಯರ ಮುಂದೆ ಕೈ ಕಟ್ಟಿ ಹಾಕಿದಂತೆ ವರ್ತಿಸುತ್ತಿದ್ದರು. ಆದುದರಿಂದ ಪ್ರಾರಂಭಿಕ ಹೆಜ್ಜೆ ಸಂಪೂರ್ಣವಾಗಿ ಚೀನೀಯರ ಕೈಯಲ್ಲಿತ್ತು.
ಗಾಲ್ವಾನ್ ಘರ್ಷಣೆಯ ನಂತರ, ಇದೇ ಜುಲೈ ಆರಂಭದಲ್ಲಿ, ಉತ್ತರ ಕಮಾಂಡ್ನ ಹಿಮಾಚಲ್ ಪ್ರದೇಶದಲ್ಲಿ ಮೀಸಲು ಪಡೆಯಾಗಿ ನಿಯೋಜಿಸ ಲಾಗಿದ್ದ ತನ್ನ ಸೈನ್ಯವನ್ನು ಭಾರತವು ನೇರವಾಗಿ ಲಡಾಖ್ನ ಮುಂಚೂಣಿ ಯಾಗಿ ಸ್ಥಳಾಂತರಿಸಿತು. ಆದರೆ ಅಲ್ಲಿ ಗಡಿಭಾಗದಲ್ಲಿ ಹಿಡುವಳಿ ಸೇನಾ ಪಾತ್ರವಹಿಸಿದ್ದ ‘ಹದಿನಾಲಕ್ಕು ಕೋರ್’ ಇದು ಸಾಲದು, ಇನ್ನೂ ಹೆಚ್ಚು ಸೈನಿಕರ ಅಗತ್ಯವಿದೆಯೆಂದು ಒತ್ತಾಯಿಸುತ್ತಲೇ ಇತ್ತು. ರಕ್ಷಣಾ ಪಾತ್ರ ವಹಿಸಿದ ಎಲ್ಲಾ ಸೇನಾ ಕಮಾಂಡರ್ಗಳ ಸಾಮಾನ್ಯ ಲಕ್ಷಣವಿದು. ರಕ್ಷಣಾ ಪಾತ್ರವಹಿಸಿರುವ ತುಕುಡಿಗಳಿಗೆ ಭೂ ತುಕಡಿಗಳನ್ನು ಆಕ್ರಮಿಸಲು ಯಾವಾಗಲೂ ಒಂದು ತುಂಡು ನೆಲ ಉಳಿದಿರುತ್ತದೆ. ಎಷ್ಟು ನೆಲವನ್ನು ಆಕ್ರಮಿಸಿದರೂ ಅವರಿಗೆ ತೃಪ್ತಿ ಇರುವುದಿಲ್ಲ. 1950ರಿಂದ ಚೀನಾದೊಡನೆ ವ್ಯವಹರಿಸುವಾಗ ಭಾರತೀಯ ಸೇನೆಯ ವರ್ತನೆ ಹೀಗಾಗಿತ್ತು. 1962 ರ ಸೋಲಿನ ನಂತರ ಭಾರತದ ಗಡಿಪ್ರದೇಶ ದಲ್ಲಿ ರಕ್ಷಣಾ ಪಾತ್ರವಹಿಸಿದ ಎಲ್ಲ ಸೇನಾ ತುಕುಡಿಗಳಲ್ಲಿ ಈ ಮನಸ್ಥಿತಿಯನ್ನು ಕಾಣಬಹುದು. ಸೋಲಿನ ನಂತರದ ದಿನಗಳಲ್ಲಿ ಭಾರತ ಮಾನಸಿಕವಾಗಿ ಪಾಶ್ರ್ವವಾಯುವಿಗೆ ತುತ್ತಾದಂತೆ ವರ್ತಿಸುತ್ತಿತ್ತು. ಚೀನೀಯರು ಭಾರತದ ಈ ಮನೋಸ್ಥಿತಿಯನ್ನು ದುರುಪಯೋಗಿಸಿ ಕೊಂಡು, ನಮ್ಮ ಗಡಿ ಪ್ರದೇಶದಲ್ಲಿ ಉಲ್ಲಂಘನೆ ಮತ್ತು ಒಳನುಗ್ಗುವಿಕೆಯನ್ನು ನಿರ್ಭಯದಿಂದ ಮಾಡತೊಡಗಿದರು. ಇದು ಒಂದು ರೀತಿಯ ವಾರ್ಷಿಕ ವೈಶಿಷ್ಟ್ಯವಾಗಿ ಬಿಟ್ಟಿತ್ತು. ಲೈನ್ ಆಫ್ ಏಕ್ಚುವಲ್ ಕಂಟ್ರೋಲ್ (ಎಲ್ ಎ ಸಿ)ನ ವಿಭಿನ್ನ ಗ್ರಹಿಕೆಗಳು ಚೀನಾದ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿದವು. ಪ್ರತಿ ಬಾರಿಯೂ ಅವರು ಎರಡು ಹೆಜ್ಜೆ ಭಾರತದೊಳಕ್ಕೆ ನುಗ್ಗಿ ಒಂದು ಹೆಜ್ಜೆ ಮಾತ್ರ ಹಿಂಜರಿಯುತ್ತಿದ್ದರು. ಹೀಗೆ ಐದು ದಶಕಗಳಿಂದ ನಾವು ನೂರಾರು ಚದರ ಕಿ. ಮೀ. ಗಡಿ ಪ್ರದೇಶವನ್ನು ಕಳೆದುಕೊಂಡಿದ್ದೇವೆ.
ಸ್ಥಾಯೀ ಗಡಿ ರಕ್ಷಣಾ ನೀತಿ: ಜೂನ್ 2017ರ ಡೋಕ್ಲಾಮ್ ಬಿಕ್ಕಟ್ಟು, ಅದನ್ನೆಲ್ಲ ಬದಲಾಯಿಸಿತು. ಇಂತಹ ಬಿಕ್ಕಟ್ಟುಗಳನ್ನು ಸಂಪೂರ್ಣ ಸಿದ್ಧತೆ ಮತ್ತು ಉತ್ಸಾಹದಿಂದ ನಿಭಾಯಿಸುವುದು ಇವತ್ತಿನ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಸರಕಾರಕ್ಕೆ ಹೆಚ್ಚು ಅಗತ್ಯವಾಗಿತ್ತು. ಸಮಯ ಬದಲಾಗುತ್ತಲಿತ್ತು. ಚೀನೀಯರೊಡನೆ ದೃಢತೆ ಹಾಗೂ ಆತ್ಮ ವಿಶ್ವಾಸದಿಂದ ವ್ಯವಹಾರ ಮಾಡುವುದು ದೆಹಲಿಯ ಸರ್ಕಾರಕ್ಕೆ ಬೇಕಾಗಿತ್ತು. ಹಾಗಾಗಿ ಭಾರತೀಯ ಸೇನಾಧಿಕಾರಿಗಳು ಯುದ್ಧ ತಂತ್ರಕ್ಕೆ ಪ್ರ್ರಾಬಲ್ಯ ನೀಡುವ ಪರ್ವತ ಶ್ರೇಣಿಗಳ ರೇಖೆಗಳನ್ನು ಆಕ್ರಮಿಸಿಕೊಳ್ಳುವ ಮೂಲಕ ಚೀನೀಯರು ನಿಯೋಜಿಸಿದ್ದ ಪ್ರವೇಶ ತಂತ್ರವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದರು. ಆಗ ‘ಜನರಲ್ ಬಿಪಿನ್ ರಾವತ್’ ಸೇನಾ ಮುಖ್ಯಸ್ಥರಾಗಿದ್ದರು. ಅವರೀಗ ಭಾರತದ ಮೊಟ್ಟಮೊದಲ ‘ಸಿ ಡಿ ಎಸ್’ ಆಗಿ ಇದ್ದಾರೆ. (ಮುಂದುವರಿಯುವುದು)