‘‘ಕೊಹಿನೂರ್’’ ಎಂದಾಕ್ಷಣ ಎಲ್ಲರ ಮನಸಿಗೆ ಬರುವುದೇ ಅತ್ಯಮೂಲ್ಯ ವಜ್ರದ ನೆನಪು. ಹೌದು ಜಗತ್ ಪ್ರಸಿದ್ಧ ಅತ್ಯಮೂಲ್ಯ ವಜ್ರಗಳಲ್ಲಿ ಒಂದಾದ 756 ಕ್ಯಾರೆಟ್ ತೂಕದ ಈ ಕೊಹಿನೂರ್ ವಜ್ರವು ಗೋಲ್ಕೊಂಡದ ವಜ್ರದ ಗಣಿ ಗಳಲ್ಲಿ ಕ್ರಿ, ಶ 14ನೇಯ ಶತಮಾನದಲ್ಲಿ ದೊರೆಯಿತೆಂದು ಹೇಳಲಾಗಿದೆ. ಇದು ಕೋಳಿ ಮೊಟ್ಟೆಯ ಗಾತ್ರದಷ್ಟಿದ್ದು "ಪ್ರಖರವಾದ ಶುದ್ಧ ಬಿಳಿ ಕಣ"ಗಳಿಂದ ಕೂಡಿತ್ತು.

ಐತಿಹಾಸಿಕ ದಾಖಲೆಗಳ ಪ್ರಕಾರ ಇದನ್ನು ಮೇವಾಡದ ರಜಪೂತ ಅರಸ ರಾಣರತನ್ ಸಿಂಗ್‍ನಿಂದ ಅಲ್ಲಾವುದ್ದೀನ್ ಖಿಲ್ಜಿ ಯು (ಕ್ರಿ.ಶ.1304 ರಲ್ಲಿ) ವಶಪಡಿಸಿಕೊಂಡನು. ನಂತರದಲ್ಲಿ ಅದು ದೆಹಲಿ ಸುಲ್ತಾನರ ವಂಶದಿಂದ (ಕ್ರಿ,ಶ 1526) ರಲ್ಲಿ ಮೊಗಲ್-ಸಾಮ್ರಾಜ್ಯದ ಚಕ್ರವರ್ತಿಯಾದ ಬಾಬರ್‍ನ ವಶವಾಯಿತು. ಈ ವಜ್ರವನ್ನು ಬಾಬರ್ ತನ್ನ ಪ್ರೀತಿಯ ಮಗನಾದ ಹುಮಾಯೂನನಿಗೆ ಕೊಟ್ಟಿದ್ದನು. ಹುಮಾಯೂನನ ಪತನದ ನಂತರ ಅವನಿಗೆ ಆಶ್ರಯಕೊಟ್ಟ ಪರ್ಶಿಯಾದ ಚಕ್ರವರ್ತಿ ತಮ್ ಹಸ್ಪ್ ನ ಕೈಸೇರಿತು.

ತದನಂತರ ಅದು "ಅಹಮದ್ ನಗರದ ನಿಜಾಮ್-ಷಾನಿಗೆ ಪರ್ಶಿಯಾದ ಚಕ್ರವರ್ತಿ ತಮ್ ಹಸ್ಪ್ ನಿಂದ ಕೊಡುಗೆಯಾಗಿ ಬಂದಿತು.

ಅಹಮದ್ ನಗರವನ್ನು (ಕ್ರಿ,ಶ 1631)ರಲ್ಲಿ ಭವ್ಯ"ತಾಜ್ ಮಹಲ್" ಚಕ್ರವರ್ತಿ ಷಹಜಹಾನ್ ಜಯಿಸಲಾಗಿ ಈ ವಜ್ರವು ಇವನ ವಶಕ್ಕೆ ಬಂದಿತು

ಕ್ರಿ,ಶ 1639 ರಲ್ಲಿ ದೆಹಲಿಯನ್ನು ಕೊಳ್ಳೆ ಹೊಡೆದ ಪರ್ಶಿಯಾದ ನಾದಿರ್-ಷಾ " ಇದರ ಅತ್ಯದ್ಭುತ ಪ್ರಕಾಶ ಮತ್ತು ಆಕರ್ಷಕ ಹೊಳಪಿಗೆ ಮನಸೋತು ಈ ಅಮೂಲ್ಯ ವಜ್ರಕ್ಕೆ ಕೊಹಿನೂರ್ ಎಂದು ನಾಮಕರಣ ಮಾಡಿದನು.

ಕ್ರಿ, ಶ. 1751 ರಲ್ಲಿ ಅದು ಪರ್ಶಿಯಾವನ್ನು ಜಹಿಸಿದ ಆಘಾನಿಸ್ಥಾನದ ಅಹಮದ್-ಷಾ ದುರಾನಿಯ ವಶವಾಯಿತು. ಅನಂತರ ಅಧಿಕಾರಕ್ಕೆ ಬಂದ ಷಾಶೊಜಾ ಪದಚ್ಯುತ ನಾಗಿ ರಜಪೂತ ರಾಜ ರಣಜಿತ್ ಸಿಂಗ್‍ನ

ಆಶ್ರಯಕ್ಕೆ ಬಂದಾಗ ಈ ಕೊಹಿನೂರ್ ವಜ್ರ ರಣಜಿತ್‍ಸಿಂಗ್‍ನ ಕೈಗೆ ಸೇರಿತು. ನಂತರ ಈತನ ಕೊನೆಯ ಮಗನಾದ ದಿಲೀಪ್ ಸಿಂಗ್‍ನ ಕಾಲದಲ್ಲಿ ಪಂಜಾಬಿನ ಸಿಖ್ ರಾಜ್ಯ ಕೊನೆ ಗೊಂಡಿತು

ಕ್ರಿ,ಶ 1849 ರಲ್ಲಿ ಈ ವಜ್ರ ಪಂಜಾಬಿನ ಬ್ರಿಟಿಷ್ ಕಮಿಷನರ್, ಸರ್‍ಜಾನ್ ಲಾರೆನ್ಸ್‍ನ ಕೈಸೇರಿತು. ಇದನ್ನು ಕ್ರಿ,ಶ 1851 ಬ್ರಿಟನ್ನಿನ ರಾಣಿ ವಿಕ್ಟೋರಿಯಾಗೆ ಕೊಡುಗೆಯಾಗಿ ಕಳುಹಿಸಲಾಯಿತು. ತದನಂತರ ಅದನ್ನು ರಾಣಿ ಮೂರು ಸಮ ಭಾಗಗಳನ್ನಾಗಿ ಮಾಡಿ ಒಂದನ್ನು "ಮಹಾರಾಣಿ"ಯ ಕಿರೀಟದಲ್ಲೂ, ಇನ್ನೊಂದನ್ನು ರಾಜದಂಡದಲ್ಲೂ, ಮತ್ತೊಂದನ್ನು ಬ್ರಿಟಿಷ್ ಸಿಂಹಾಸನದಲ್ಲೂ ಅಲಂಕರಿಸಲಾಗಿದೆ.

ವಿಶ್ವ ವಿಖ್ಯಾತ ಆಕರ್ಷಣಾ ಹೊಳಪಿನಿಂದ ಕಂಗೊಳಿಸುವ ಈ ಕೊಹಿನೂರ್ ವಜ್ರವು ಇಡೀ ವಿಶ್ವದ ಎಲ್ಲರ ಚಿತ್ತಾಕರ್ಷಕವಾಗಿದ್ದು, ಮನಸ್ಸನ್ನು ಬೆರಗುಗೊಳಿಸಿ ತನ್ನತ್ತ ಸೆಳೆದಿರುವುದು ಮಾತ್ರ ನಿಜಕ್ಕೂ ಅತ್ಯದ್ಭುತವೇ ಸರಿ.

-ಸತೀಶ್ ಕುಮಾರ್ ಎ. ಎಸ್.

ಇತಿಹಾಸ ಉಪನ್ಯಾಸಕರು,

ವೀರಾಜಪೇಟೆ