ಮಡಿಕೇರಿ, ಅ. 3: ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಆಕ್ಸಿಜನ್ ಟ್ಯಾಂಕ್‍ನ್ನು ಉಸ್ತುವಾರಿ ಸಚಿವ ವಿ. ಸೋಮಣ್ಣ ವೀಕ್ಷಿಸಿದರು. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಂಗ್ರಹ ಸಾಮಥ್ರ್ಯ 13,000 ಲೀಟರ್ ಆಗಿದ್ದು, ಪ್ರಸ್ತುತ, ಆಮ್ಲಜನಕವನ್ನು 2 ದಿನಗಳ ಅವಧಿಗೆ ಸಂಗ್ರಹಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳಿರುವ ಸಮಯದಲ್ಲಿ ಈ ಲಿಕ್ವಿಡ್ ಆಕ್ಸಿಜನ್ ಸ್ಥಾವರದಲ್ಲಿ 15 ದಿನಗಳವರೆಗೆ ಆಮ್ಲಜನಕ ಸಂಗ್ರಹವಾಗಿರುತ್ತದೆ. ಕೋವಿಡ್ ಅಲ್ಲದ ಸಮಯಗಳಲ್ಲಿ 2-3 ತಿಂಗಳು ಆಮ್ಲಜನಕ ಸಂಗ್ರಹ ಮಾಡಬಹು ದಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಆಸ್ಪತ್ರೆ ಬ್ಲಾಕ್‍ನಲ್ಲಿ ಒಂದು ಬಾರಿ ಸಂಗ್ರಹವಾದ ಲಿಕ್ವಿಡ್ ಆಕ್ಸಿಜನ್‍ನ್ನು 300 ಆಕ್ಸಿಜನ್ ಹಾಸಿಗೆಗಳಿಗೆ ನಿರಂತರವಾಗಿ 15 ದಿನಗಳ ಕಾಲ ಪೂರೈಕೆ ಮಾಡಬಹುದಾಗಿದೆ. ಆಸ್ಪತ್ರೆಯಲ್ಲಿನ ಬಳಕೆಗೆ ಅನುಗುಣವಾಗಿ ಮತ್ತು ಅಗತ್ಯವಿದ್ದಾಗ ಅದನ್ನು ಪುನಃ ತುಂಬಿಸಲಾಗುತ್ತದೆ. ಪ್ರಸ್ತುತ, ಪ್ರತಿದಿನ ಮೈಸೂರಿನಿಂದ ಆಮ್ಲಜನಕವನ್ನು ಪಡೆಯುತ್ತಿದ್ದು, ಈ ಟ್ಯಾಂಕ್ ನಿರ್ಮಾಣದಿಂದ ಪ್ರತಿನಿತ್ಯ ಮೈಸೂರಿನಿಂದ ಮಡಿಕೇರಿಗೆ ಆಮ್ಲಜನಕ ಸಾಗಾಣಿಕೆ ಮಾಡುವುದನ್ನು ತಪ್ಪಿಸಬಹುದಾಗಿದೆ.ಇದೇ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಶ್ರವಣ ಸಾಧನಗಳನ್ನು ವಿತರಿಸಿದರು.
ಬಾಹ್ಯ ಕೇಂದ್ರ ಉದ್ಘಾಟನೆ
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಬಾಹ್ಯ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಸಚಿವರು, ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸಂಪೂರ್ಣ ಧನಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ವಾಕ್ ಮತ್ತು ಶ್ರವಣ ಸಮಸ್ಯೆಗಳನ್ನು ಹೊಂದಿರುವ ಜನರ ಅಗತ್ಯತೆಗಳನ್ನು ಪೂರೈಸುತ್ತಾ ಬಂದಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ ಮತ್ತು ಸಂವಹನ ಸಮಸ್ಯೆ ಹೊಂದಿರುವ ವ್ಯಕ್ತಿಗಳಿಗೆ ಕ್ಲಿನಿಕಲ್ ಸೇವೆಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಬಾಹ್ಯ ಕೇಂದ್ರದ ಕುರಿತು ‘ಶಕ್ತಿ’ಗೆ
(ಮೊದಲ ಪುಟದಿಂದ) ಮಾಹಿತಿ ನೀಡಿದ ಮೆಡಿಕಲ್ ಕಾಲೇಜಿನ ಡೀನ್ ಕಳ್ಳಿಚಂಡ ಕಾರ್ಯಪ್ಪ ಅವರು ಇದೊಂದು ಅತ್ಯಾಧುನಿಕ ಉಪಕರಣವಾಗಿದ್ದು, ಎಲ್ಲಾ ನವಜಾತ ಶಿಶುಗಳನ್ನು ಇದರಲ್ಲಿ ಪರೀಕ್ಷೆಗೊಳಪಡಿಸಲಾಗುವುದು. ನವಜಾತ ಶಿಶುಗಳಲ್ಲಿ ವಾಕ್ ಮತ್ತು ಶ್ರವಣ ದೋಷವಿದ್ದರೆ ಐದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಅದನ್ನು ಈ ಉಪಕರಣ ಪತ್ತೆ ಹಚ್ಚಲಿದೆ. ಆನ್‍ಲೈನ್ ಮೂಲಕವೂ ಈ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶವಿದೆ ಎಂದರು.