ಮಡಿಕೇರಿ, ಅ. 3: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಮತ್ತು ಗೋಣಿಕೊಪ್ಪ ದಸರಾ ಉತ್ಸವಗಳು ಕೊರೊನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯ ದೊಂದಿಗೆ ಸರಳವಾಗಿ ಆಚರಿಸಲು ಜಿಲ್ಲಾ ಪಂಚಾಯಿತಿ ಭವನದಲ್ಲಿ ಉಸ್ತುವಾರಿ ಸಚಿವ ಸೋಮಣ್ಣ ನೇತೃತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಆರಂಭರವನ್ನು ಬದಿಗೊತ್ತಿ ಕರಗ ಉತ್ಸವಕ್ಕೆ ಮಾತ್ರ ಹೆಚ್ಚು ಒತ್ತು ನೀಡುವುದರೊಂದಿಗೆ ಈ ಬಾರಿ ದಸರಾ ಆಚರಿಸುವಂತಾಗ ಬೇಕು. ಹೆಚ್ಚು ಜನ ಸೇರಲು ಅವಕಾಶ ನೀಡಬಾರದು. ಕರಗ ಉತ್ಸವ ಆರಂಭದ ದಿನ ಎಲ್ಲಾ ಕರಗಗಳಿಗೂ ಸೇರಿ ಒಂದು ವಾದ್ಯ ತಂಡವನ್ನು ಮಾತ್ರ ಬಳಸುವಂತಾಗಬೇಕು. ಪಿಕ್‍ಅಪ್ ವಾಹನದಲ್ಲಿ ವಿಜಯ ದಶಮಿಯಂದು ಉತ್ಸವ ಮೂರ್ತಿ ಯೊಂದಿಗೆ ಕಳಶ ಕೊಂಡೊಯ್ದು ಬನ್ನಿಮಂಟಪದಲ್ಲಿ ಬನ್ನಿ ಕಡಿಯು ವಂತಾಗಬೇಕು. ಈ ಸಂದರ್ಭದಲ್ಲಿ ಹೆಚ್ಚು ಜನ ಸೇರದಂತೆ ಎಚ್ಚರವಹಿಸ ಬೇಕು. ಗೋಣಿಕೊಪ್ಪಲಿ ನಲ್ಲಿ ಕೂಡ ಚಾಮುಂಡೇಶ್ವರಿಯ ಪೂಜೆಗೆ ಮಾತ್ರ ಉತ್ಸವವನ್ನು ಸೀಮಿತಗೊಳಿಸಲಾಗಿದೆ ಎಂದರು.
ಶಾಸಜ ಅಪ್ಪಚ್ಚು ರಂಜನ್ ಮಾತನಾಡಿ, ಕೆ.ಜಿ.ಬೋಪಯ್ಯ ಅವರ ಸಲಹೆಗೆ ತನ್ನ ಸಹಮತವಿದ್ದು, ಕರಗ ಉತ್ಸವವನ್ನು 40 ಜನರೊಳಗೆ ಮುಗಿಸುವಂತಾಗಬೇಕು. ಕರಗ ಆರಂಭದ ದಿನ ಒಂದು ವಾದ್ಯ ತಂಡವನ್ನು ಬಳಸಿ ಮುಂದಿನ ಕರಗಗಳ ನಗರ ಪ್ರದಕ್ಷಿಣೆ ಸಂದರ್ಭ ಬೇಕಿದ್ದರೆ ಪ್ರತ್ಯೇಕ ವಾದ್ಯ ತಂಡವನ್ನು ಬಳಸಿಕೊಳ್ಳಲಿ. ಆದರೆ, ಯಾವುದೇ ಕಾರಣಕ್ಕೂ ಹೆಚ್ಚು ಜನ ಸೇರಲು ಅವಕಾಶ ನೀಡಬಾರದು. ದಸರಾ ಸಂದರ್ಭ ಸೆಕ್ಷನ್ 144 ಜಾರಿ ಮಾಡುವ ಮೂಲಕ ನಗರದಲ್ಲಿ ಹೆಚ್ಚು ಜನ ಸೇರದಂತೆ ತಡೆಯಬಹುದು. ಈ ಬಗ್ಗೆ ಚಿಂತನೆ ನಡೆಸುವಂತೆ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರದಂತೆ ಇತಿಮಿತಿ ಯೊಳಗೆ ದಸರಾ ಆಚರಿಸುವಂತಾಗಲಿ ಎಂದರು.
ಸಭೆಯ ಕೊನೆಯಲ್ಲಿ ಮಾತನಾಡಿದ ಸಚಿವ ಸೋಮಣ್ಣ ಅವರು ದಸರಾ (ಮೊದಲ ಪುಟದಿಂದ) ಉತ್ಸವವನ್ನು ಈ ಬಾರಿ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅತೀ ಕಡಿಮೆ ಜನರನ್ನು ಸೇರಿಸಿಕೊಂಡು ಸಾಂಪ್ರದಾಯಿಕವಾಗಿ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಕರಿಸುವಂತಾಗಬೇಕು. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಂತಾಗಬೇಕು ಎಂದರು.
ಹಣ ಬಂದಿಲ್ಲ
ಸಭೆಯಲ್ಲಿ ಮಾತನಾಡಿದ ಮಡಿಕೇರಿ ದಸರಾ ಸಮಿತಿ ಪದಾಧಿಕಾರಿಗಳಾದ ಬಿ.ಕೆ. ಜಗದೀಶ್, ಈ ಬಾರಿ ದಸರಾವನ್ನು ಸರಳವಾಗಿ ಆಚರಿಸಲು ಈಗಾಗಲೇ ಸಮಿತಿ ತೀರ್ಮಾನಿಸಿದೆ. ಆದರೆ ಕರಗ ಉತ್ಸವಕ್ಕೂ ಹಣದ ಅವಶ್ಯಕತೆಯಿದೆ. ಈ ಬಾರಿ ಸಂಗ್ರಹಿಸಲು ಸಾಧ್ಯವಿಲ್ಲ. ಆದ್ದರಿಂದ ಸೂಕ್ತ ಅನುದಾನವನ್ನು ಸರ್ಕಾರದಿಂದ ಒದಗಿಸಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಕಳೆದ ಬಾರಿ ದಸರಾಗೆ ಘೋಷಣೆಯಾಗಿದ್ದ ರೂ. 50 ಲಕ್ಷ ಹಣವೂ ಬಿಡುಗಡೆಯಾಗಿಲ್ಲ. ಈ ಬಗ್ಗೆಯೂ ಗಮನ ಹರಿಸುವಂತೆ ಉಮೇಶ್ ಸುಬ್ರಮಣಿ ಕೋರಿದರು. ಸಂಸದ ಪ್ರತಾಪ್ ಸಿಂಹ ಕೂಡ ಕಳೆದ ಬಾರಿಯ ಅನುದಾನ ಬಿಡುಗಡೆ ಮಾಡಿಸಲು ಮುಂದಾಗುವಂತೆ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಅವರು, ಪ್ರಸ್ತುತ ಸರ್ಕಾರವು ಸಂಕಷ್ಟದಲ್ಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಸಾಧ್ಯವಾದ ಅನುದಾನವನ್ನು ಒದಗಿಸಲಾಗುವುದು. ಕಳೆದ ಬಾರಿಯ ಅನುದಾನ ಸಂಬಂಧ ಸಂಸದರೂ ಪ್ರಯತ್ನಿಸುವಂತಾಗಲಿ, ನಾವೂ ಪ್ರಯತ್ನಿಸುತ್ತೇವೆ ಎಂದರಲ್ಲದೆ, ಸರ್ಕಾರದಿಂದ ಈ ಬಾರಿ ಹೆಚ್ಚಿನ ಹಣ ನಿರೀಕ್ಷಿಸದೆ ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡುವಂತೆ ಮನವಿ ಮಾಡಿದರು. ದಸರಾ ಸಂಬಂಧ 15 ಲಕ್ಷ ಅನುದಾನವನ್ನು ನೀಡಲಾಗುವುದೆಂದರು.