ಮಡಿಕೇರಿ, ಅ. 3: ಕೊಡಗು ಜಿಲ್ಲೆಯಲ್ಲಿ ಜಾಗತಿಕ ಕೊರೊನಾ ತಡೆಗಟ್ಟುವುದು ಸೇರಿದಂತೆ ಮುಂಗಾರು ಪ್ರಾಕೃತಿಕ ದುರಂತ ಸಂದರ್ಭ ಕೊಡಗು ಪೊಲೀಸ್ ಇಲಾಖೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಮೂಲಕ ಶ್ಲಾಘನೀಯ ಕೆಲಸವನ್ನು ಮಾಡಿದೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅಭಿಪ್ರಾಯಪಟ್ಟಿದ್ದಾರೆ. ಇಂದು ಜಿಲ್ಲಾ ಪೊಲೀಸ್ ಕಚೇರಿಗೆ ಕರ್ನಾಟಕ ದಕ್ಷಿಣ ವಲಯ ಐ.ಜಿ. ವಿಫುಲ್ ಕುಮಾರ್ ಸಹಿತ ಆಗಮಿಸಿ, ಸುದೀರ್ಘ ಸಮಾಲೋಚನೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ದೊಂದಿಗೆ ಮಾತನಾಡಿದರು.

ಕೊಡಗಿನಲ್ಲಿ ಆರಂಭಿಕವಾಗಿ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆಯಾಗಿ ಪ್ರಸ್ತುತ ಸೋಂಕು ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಎಂಟು ಸಾವಿರ ಮಂದಿಗೆ ಇದುವರೆಗೆ ಸೋಂಕು ಕಾಣಿಸಿಕೊಂಡಿದ್ದರೂ, ಬಹುತೇಕ ಮಂದಿ ಗುಣಮುಖರಾಗಿ 73 ಜನ ಮೃತರಾಗಿರುವ ಮಾಹಿತಿ ಲಭಿಸಿದೆ ಎಂದ ಅವರು, ಜಿಲ್ಲಾಡಳಿತ ಹಾಗೂ ಆರೋಗ್ಯ ಕಾರ್ಯಕರ್ತ ರೊಂದಿಗೆ ಪೊಲೀಸರು ಕೂಡ ಮುಂಚೂಣ Âಯಲ್ಲಿ ಕೊಡಗಿನ ಜನತೆಗೆ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ (ಮೊದಲ ಪುಟದಿಂದ) ಎಂಬದಾಗಿ ಬಣ್ಣಿಸಿದರು. ಈ ದಿಸೆಯಲ್ಲಿ ತಾವು ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‍ಪಿಗಳು ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಉಪಸ್ಥಿತಿಯಲ್ಲಿ ಕೊಡಗಿನ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದ್ದು, ಕೊಡಗಿನಲ್ಲಿ ಇತರೆಡೆಗಳಿಗಿಂತಲೂ ಉತ್ತಮ ಸನ್ನಿವೇಶದೊಂದಿಗೆ, ಎಲ್ಲವೂ ಹತೋಟಿಯಲ್ಲಿ ಇದೆ ಎಂದು ಅಭಿಪ್ರಾಯಪಟ್ಟರು.ಸಮಸ್ಯೆಗಳಿವೆ: ಕೊಡಗು ಜಿಲ್ಲೆಯಲ್ಲಿ ಈ ಸಾಲಿನಲ್ಲಿಯೂ ಪ್ರಾಕೃತಿಕ ದುರಂತ ಸಂಭವಿಸಿದ್ದು, ಮಳೆಯಿಂದ ಪೊಲೀಸ್ ವಸತಿಗೃಹಗಳ ಸೋರುವಿಕೆ, ವಾಹನಗಳ ಕೊರತೆ ಮುಂತಾದ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದ್ದು, ಸರಕಾರದ ಹಂತದಲ್ಲಿ ಸೂಕ್ತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಪ್ರವೀಣ್ ಸೂದ್ ವಿವರಿಸಿದರು.

ಡ್ರಗ್ಸ್ ವಿರುದ್ಧ ಕ್ರಮ: ಕರ್ನಾಟಕದಲ್ಲಿ ಡ್ರಗ್ಸ್ ಜಾಲವನ್ನು ಭೇದಿಸಲು ಪೊಲೀಸ್ ಇಲಾಖೆ ತನ್ನದೇ ರೀತಿಯಲ್ಲಿ ಕಾನೂನು ಕ್ರಮಕೈಗೊಂಡಿದೆ. ಮಾಧ್ಯಮಗಳಲ್ಲಿ ಸಿನಿಮಾ ರಂಗದ ಮಂದಿಯತ್ತ ಹೆಚ್ಚಿನ ಪ್ರಚಾರ ಮಾಡುತ್ತಿವೆ. ಆದರೆ ಪೊಲೀಸ್ ತನಿಖೆಯು ನಿಷ್ಪಕ್ಷಪಾತವಾಗಿ ಕೇವಲ ಡ್ರಗ್ಸ್ ಸೇವನೆಯಲ್ಲಿ ತೊಡಗಿರುವ ಮಂದಿ ಮಾತ್ರವಲ್ಲದೆ, ಮಧ್ಯವರ್ತಿಗಳು, ಮಾರಾಟಗಾರರ ಸಹಿತ ಈ ದಂಧೆಯ ಮೂಲವನ್ನು ಭೇದಿಸಲು ಕಾರ್ಯೋನ್ಮುಖವಾಗಿದೆ ಎಂದು ಡಿ.ಜಿ. ಅಭಿಪ್ರಾಯಪಟ್ಟರು.

ನಿರಂತರ ಕೆಲಸ: ಪೊಲೀಸ್ ಇಲಾಖೆಯಿಂದ ಕರ್ನಾಟಕದಲ್ಲಿ ಡ್ರಗ್ಸ್ ಜಾಲ ಸೇರಿದಂತೆ ಎಲ್ಲ ಅಪರಾಧಗಳನ್ನು ಪರಿಣಾಮಕಾರಿ ಯಾಗಿ ಹತ್ತಿಕ್ಕಲು ಪ್ರಯತ್ನ ನಡೆದಿದೆ. ಯಾವುದೇ ಟೀಕೆ-ಅಪಪ್ರಚಾರಗಳಿಗೆ ತಲೆಕೆಡಿಸಿಕೊಳ್ಳದೆ ನಿರಂತರವಾಗಿ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಸಮಾಜ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸುವ ದಿಕ್ಕಿನಲ್ಲಿ ಸಾಗುತ್ತಿದ್ದು, ಅಪರಾಧಿಗಳ ಬೆನ್ನ ಹಿಂದೆ ಬಿದ್ದಿಲ್ಲವೆಂದು ಅವರು ಸೂಚ್ಯವಾಗಿ ನುಡಿದರು.

ಕಠಿಣ ಕ್ರಮ: ಕೊಡಗಿನಲ್ಲಿಯೂ ಡ್ರಗ್ಸ್ ನಂಟು ವಿರುದ್ಧ ಕಠಿಣ ಕ್ರಮಕೈಗೊಳ್ಳುವುದರೊಂದಿಗೆ ಎಲ್ಲ ರೀತಿಯ ಅಪರಾಧಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲಾಗುವುದು ಎಂದು ವಿವರಿಸಿದ ಪ್ರವೀಣ್ ಸೂದ್ ಅವರು, ಈ ದಿಸೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೆಳ ಹಂತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಈ ವೇಳೆ ಐ.ಜಿ. ವಿಫುಲ್ ಕುಮಾರ್, ಎಸ್ಪಿ ಕ್ಷಮಾ ಮಿಶ್ರಾ, ಡಿವೈಎಸ್‍ಪಿಗಳಾದ ಬಿ.ಪಿ. ದಿನೇಶ್ ಕುಮಾರ್, ಶೈಲೇಂದ್ರಕುಮಾರ್, ಜಯಕುಮಾರ್, ಡಿ.ಎಆರ್., ಅರಣ್ಯ ಅಪರಾಧ ನಿಯಂತ್ರಣ ದಳ ಸೇರಿದಂತೆ ಜಿಲ್ಲಾ ಅಪರಾಧ ಪತ್ತೆದಳ, ಗುಪ್ತ ದಳ ಸಹಿತ ಎಲ್ಲ ಪೊಲೀಸ್ ವೃತ್ತಗಳ ನಿರೀಕ್ಷಕರುಗಳು ಪಾಲ್ಗೊಂಡಿದ್ದರು.