ಮಡಿಕೇರಿ, ಅ. 3: ಇಲ್ಲಿನ ಜಿಲ್ಲಾ ಕೋವಿಡ್-19 ಸರಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಇಂದು ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ಇಬ್ಬರು ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ನಗರದ ಚೈನ್‍ಗೇಟ್ ಬಳಿ ಜಿಲ್ಲಾಡಳಿತ ಗುರುತಿಸಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿ ಸಲಾಯಿತು. ಈ ವೇಳೆ ಹಿಂದೂ ಸಂಘಟನೆಯ ಸ್ವಯಂ ಸೇವಕರು ಓರ್ವ ಅಂಚೆ ಉದ್ಯೋಗಿ ಹಾಗೂ ಓರ್ವ ತಾ.ಪಂ. ನೌಕರನ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದರು.

ತಾಲೂಕು ತಹಶೀಲ್ದಾರ್ ಪಿ.ಎಸ್. ಮಹೇಶ್ ಅವರು ಅರಣ್ಯ ಇಲಾಖೆಯ ಮುಖಾಂತರ ಶವಸಂಸ್ಕಾರಕ್ಕೆ ಬೇಕಿರುವ ಸೌದೆಯನ್ನು ಒದಗಿಸುವುದರೊಂದಿಗೆ ಈ ಬಗ್ಗೆ ಸಂಪರ್ಕಿಸಿದ್ದು, ಅವರ ಕೋರಿಕೆ ಯಂತೆ ಬಜರಂಗದಳದ ಯುವಕರು ಎರಡು ಶವಗಳ ಅಂತ್ಯ ಸಂಸ್ಕಾರವನ್ನು ನಡೆಸಿರುವುದಾಗಿ, ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ಹೆಚ್. ಚೇತನ್ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ, ‘ಶಕ್ತಿ’ಯಲ್ಲಿ ಸ್ವಯಂ ಸೇವಕರ ಸಂಕಟದ ಕುರಿತು ಸಚಿತ್ರ ವರದಿ ಬೆನ್ನಲ್ಲೇ, ಅಧಿಕಾರಿಗಳು ಸೌದೆ ಹೊಂದಿಸಿರುವುದು ಶ್ಲಾಘನೀಯ ಎಂದು ಮಡಿಕೇರಿ ತಾಲೂಕು ವಿ.ಹಿಂ.ಪ. ಅಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ಚೇತನ್ ಅಭಿಪ್ರಾಯ ನೀಡಿದರು.