ಶನಿವಾರಸಂತೆ, ಅ. 3: ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಇ. ದೇವರಾಜ್ ಹಾಗೂ ಸಿಬ್ಬಂದಿ ವರ್ಗ ಮಾಸ್ಕ್, ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಚಾಲಕರಿಗೆ ಹಾಗೂ ವಾಹನಗಳ ಚಾಲಕರು ಇನ್ಸೂರೆನ್ಸ್ ಕಟ್ಟದವರಿಗೆ ಇಂದು ದಂಡ ವಿಧಿಸಿ ಬಿಸಿ ಮುಟ್ಟಿಸಿದರು.

ತಾ.1ರಿಂದ ಶನಿವಾರಸಂತೆ ಪಟ್ಟಣದ ರಸ್ತೆ, ಸಂತೆ ಮಾರುಕಟ್ಟೆ ರಸ್ತೆ, ಗುಡುಗಳಲೆ ರಸ್ತೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾಸ್ಕ್ ಧರಿಸದೇ ಇದ್ದವರಿಗೆ ರೂ. 100, ಹೆಲ್ಮೆಟ್ ಧರಿಸದವರಿಗೆ ರೂ. 500 ಹಾಗೂ ಇನ್ಸೂರೆನ್ಸ್ ಕಟ್ಟದೆ, ದಾಖಲಾತಿಗಳನ್ನು ನೀಡದವರಿಗೆ ರೂ. 1000 ದಂಡ ವಿಧಿಸಿದರು. ಒಟ್ಟು ರೂ. 36,000 ದಂಡ ವಸೂಲು ಮಾಡಲಾಗಿದೆ ಎಂದು ಠಾಣಾಧಿಕಾರಿ ದೇವರಾಜ್ ತಿಳಿಸಿದ್ದಾರೆ. ಸಿಬ್ಬಂದಿಗಳಾದ ಪ್ರದೀಪ್, ಹರೀಶ್, ವಿವೇಕ್, ಶಫೀರ್, ಲೋಕೇಶ್, ರವಿಚಂದ್ರ, ಶಶಿಕುಮಾರ್, ಚೆನ್ನಕೇಶವ, ವಿನಯ ಇತರರು ಈ ವೇಳೆ ಪಾಲ್ಗೊಂಡಿದ್ದರು.