ಮಡಿಕೇರಿ, ಅ. 3: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ಕೊಡಗಿನ ಕುಲಮಾತೆ ಕಾವೇರಿ ತೀರ್ಥೋದ್ಭವವನ್ನು ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಒತ್ತು ನೀಡಿ, ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಕುಂಡಿಕೆ ಬಳಿಯ ಕೊಳದಲ್ಲಿ ತೀರ್ಥ ಸ್ನಾನಕ್ಕೆ ಅವಕಾಶ ನೀಡದಿರಲು ಉಸ್ತುವಾರಿ ಸಚಿವ ಸೋಮಣ್ಣ ಅಧ್ಯಕ್ಷತೆಯಲ್ಲಿ ಜಿ.ಪಂ. ಭವನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಕಾವೇರಿ ತೀರ್ಥೋದ್ಭವದ ವೇಳೆ ತೀರ್ಥ ಸ್ನಾನ ಮಾಡುವುದು ಈ ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಆದರೆ ಈ ಬಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಾವೇರಿ ಕೊಳದಲ್ಲಿ ತೀರ್ಥ ಸ್ನಾನ ಮಾಡಲು ಭಕ್ತರಿಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಭಕ್ತರಿಗೆ ತೀರ್ಥ ಪ್ರೋಕ್ಷಣೆ ಮಾಡುವ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಕಾವೇರಿ ಜಾತ್ರೆಯನ್ನು ಹಲವು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನೆರವೇರಿಸಲು ಸಮಿತಿ ತೀರ್ಮಾನಿಸಿದ್ದು, ಭಕ್ತಾದಿಗಳು ದಯವಿಟ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರಸ್ತೆ ಬದಿಗಳಲ್ಲಿ ತೀರ್ಥ ವಿತರಣೆ ಮಾಡುವುದನ್ನು ಈ ಬಾರಿ ನಿಲ್ಲಿಸಬೇಕು. ಇಲ್ಲವಾದರೆ ಕೊರೊನಾ ವೈರಸ್ನಿಂದ ಮತ್ತಷ್ಟು ಅನಾಹುತ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ತೀರ್ಥವನ್ನು ಸ್ವೀಕರಿಸುವಂತಾಗಬೇಕು. ಭಕ್ತಾದಿಗಳಿಗೆ ತೀರ್ಥ ವಿತರಣೆಗೂ ವ್ಯವಸ್ಥೆ ಮಾಡಲಾಗುವದು. ಭಾಗಮಂಡಲ ಸಂಗಮದಲ್ಲಿ ಸ್ನಾನದೊಂದಿಗೆ ಧಾರ್ಮಿಕ ಕಾರ್ಯ ನಡೆಸಲು ಕೂಡ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ವ್ಯವಸ್ಥೆ ಮಾಡಲಾಗುತ್ತದೆ.
ಪ್ರತಿ ಬಾರಿ ಕಾವೇರಿಯಲ್ಲಿ ಹಲವು ಸಂಘ ಸಂಸ್ಥೆಗಳು ಅನ್ನದಾನ ಮಾಡುತ್ತಿದ್ದವು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು. ಪತ್ರಿಕಾ ಮಾಧ್ಯಮ ವಾಹನ, ಗಣ್ಯ ವ್ಯಕ್ತಿಗಳ ವಾಹನ ಹೊರತಾಗಿ ಬೇರಾವುದೇ ವಾಹನಗಳಿಗೆ ಪಾಸ್ ನೀಡಲಾಗುವುದಿಲ್ಲ ಎಂದರು. ವಿವಿಧ ಇಲಾಖೆಗಳಿಂದ ಕಾವೇರಿ ಜಾತ್ರೆ ಪ್ರಯುಕ್ತ ನಡೆಯಬೇಕಾದ ಕೆಲಸ ಕಾರ್ಯಗಳ ಬಗ್ಗೆ ಗಮನ ಸೆಳೆದರು. ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ, ಕಾವೇರಿ ಕೊಳದಲ್ಲಿ ಸ್ನಾನಕ್ಕೆ ಅವಕಾಶ ನೀಡಬೇಡಿ, ಕಾವೇರಿ ಜಾತ್ರೆ ವೇಳೆ ವಾಹನ ಪಾರ್ಕಿಂಗ್ ಸಂಬಂಧ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದರಲ್ಲದೆ, ಯಾವುದೇ ಕಾರಣಕ್ಕೂ ಪೂಜಾ ಕೈಂಕರ್ಯದಲ್ಲಿ ಸಣ್ಣ ಅಪಚಾರವೂ ಆಗದ (ಮೊದಲ ಪುಟದಿಂದ) ರೀತಿಯಲ್ಲಿ ಎಚ್ಚರ ವಹಿಸುವಂತೆ ನಿರ್ದೇಶನ ನೀಡಿದರು.
ಪರೀಕ್ಷಾ ವರದಿ ತನ್ನಿ
ಹೊರಗಿನಿಂದ ಜಿಲ್ಲೆಗೆ ಕಾವೇರಿ ಜಾತ್ರೆಗೆ ಬರುವವರು ಕೊರೊನಾ ಪರೀಕ್ಷಾ ವರದಿಯೊಂದಿಗೆ ಬರುವಂತಾಗಬೇಕು ಎಂದು ಹೇಳಿದ ಸಚಿವರು, ಕೊರೊನಾ ಹಿನ್ನೆಲೆ ವಯಸ್ಸಾದವರು, ಮಕ್ಕಳು, ಜಾತ್ರೆಯಲ್ಲಿ ಭಾಗವಹಿಸದಿರುವುದು ಉತ್ತಮ. ಇದು ಆದೇಶವಲ್ಲ ನನ್ನ ಮನವಿ ಎಂದು ಹೇಳಿದರು. ಕಾವೇರಿ ಕ್ಷೇತ್ರ ಅರ್ಚಕರುಗಳು ಕೂಡ ಜಾತ್ರೆಯ ಒಂದೆರಡು ದಿನ ಮುಂಚಿತವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳು ವಂತೆ ಶಾಸಕ ರಂಜನ್ ಹೇಳಿದರು. ಇದಕ್ಕೆ ಸಚಿವರೂ ಧನಿಗೂಡಿಸಿದರು.
ಹಣ ಕೇಳ ಬೇಡಿ
ಕೊರೊನಾದಿಂದಾಗಿ ಕಾವೇರಿ ಕ್ಷೇತ್ರಕ್ಕೆ ಆದಾಯ ಕಡಿಮೆಯಾಗಿದೆ. ಸಿಬ್ಬಂದಿಗೆ ವೇತನ ನೀಡಲು ಕಷ್ಟವಾಗುತ್ತಿದೆ, ಆದ್ದರಿಂದ ಸರಕಾರದಿಂದ ಅನುದಾನ ನೀಡುವಂತಾದರೆ ಒಳಿತು ಎಂದು ಬಿ.ಎಸ್. ತಮ್ಮಯ್ಯ ಕೋರಿದರು. ಸರಕಾರವೂ ಕೊರೊನಾದಿಂಧ ಸಂಕಷ್ಟದಲ್ಲಿ ಇದೆ. ಆದ್ದರಿಂದ ಹಣ ಕೇಳಬೇಡಿ, ಖರ್ಚೇನಾದರೂ ಹೆಚ್ಚಾದರೆ ನನ್ನನ್ನು ಕೇಳಿ ನಾನು ಸಹಕರಿಸುತ್ತೇನೆ ಎಂದು ಸಚಿವ ಸೋಮಣ್ಣ ಹೇಳಿದರು.
ಒತ್ತುವರಿ ತೆರವು ಮಾಡಿ: ಭಾಗಮಂಡಲ ಸಂಗಮ ವ್ಯಾಪ್ತಿಯಲ್ಲಿ ದೇವಾಲಯಕ್ಕೆ ಸೇರಿದ ಸುಮಾರು 18 ಎಕರೆ ಜಾಗ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಬೇಕೆಂದು ಬಿ.ಎಸ್. ತಮ್ಮಯ್ಯ ಕೋರಿದರು. ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಕೂಡಲೆ ಕ್ರಮಕೈಗೊಂಡು ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್ ಮಹೇಶ್ ಅವರಿಗೆ ಸಚಿವ ಸೋಮಣ್ಣ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯರು ಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾ
ಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ. ಸಿಇಓ ಭಂವರ್ ಸಿಂಗ್ ಮೀನಾ ಮತ್ತಿತರರಿದ್ದರು.