ಮನದಲ್ಲಿ ಮಡುಗಟ್ಟಿದೆ ಮೌನ... ಹೃದಯ ಹಿಂಡಿದಂತೆ... ಉಕ್ಕಿ ಬರುತ್ತಿದೆ... ಕಣ್ಣೀರು... ನಮ್ಮವರೇ ಯಾರೋ ತೀರಿ ಹೋದಂತೆ.
ಎಸ್ಪಿಬಿ....ನಿಧನರಾದಾಗ ಆಗುತ್ತಿರುವ ಅನುಭವ ಇದು. ಶ್ರೀಪತಿ ಪಂಡಿತಾರಾಧ್ಯೂಲ ಬಾಲಸುಬ್ರಮಣ್ಯಂ ಪೂರ್ಣ ಹೆಸರು ಅವರದ್ದು. ಆದರೆ ನನ್ನ ಪ್ರಕಾರ ಎಸ್ಪಿಬಿ ಅಂದರೆ "ಸಂಗೀತ ಪರಬ್ರಹ್ಮ ಬಾಲಸುಬ್ರಮಣ್ಯಂ".
ನಿಧನದ ಸುದ್ದಿ ಬಂದಾಗ ಮನೆಯಲ್ಲಿ ಪೂಜೆ. ಮನೆ ತುಂಬಾ ಜನ, ಕಣ್ಣೀರು ತುಂಬಿ ಬರುತ್ತಿತ್ತು. ಅಳಲು ಸಾಧ್ಯವಾಗದ ಸ್ಥಿತಿ. ಪಪ್ಪಾ ಸತ್ತಾಗ ಬಿಕ್ಕಿ ಬಿಕ್ಕಿ ಅತ್ತಿದ್ದೆ...ಮತ್ತೆ ಅತ್ತಿದ್ದು ಈಗಲೇ....ಸಂಬಂಧವೇ ಇಲ್ಲದ ವ್ಯಕ್ತಿಗಾಗಿ...ಯಾಕೆ ಹೀಗೆ. ಇಡೀ ವಿಶ್ವವೇ ಪ್ರೀತಿಸುವ.. ವೈರಿಗಳೇ ಇಲ್ಲದ ಒಬ್ಬ ವ್ಯಕ್ತಿ ಎಂದರೆ ಅದು ನಮ್ಮ ಬಾಲು ಸರ್. ನಲವತ್ತು ಸಾವಿರ ಹಾಡು ಹಾಡಿದರಂತೆ ಮಹಾನುಭಾವ... ದಿನಕ್ಕೊಂದರಂತೆ ನಾವು ಹಾಡು ಕೇಳಿದರೂ 110 ವರ್ಷ ಬೇಕು ಪೂರ್ತಿ ಕೇಳಲು!
ನಾಲ್ಕು ಹಾಡು-ಹಾಡಿ ಹೆಸರು ಬಂದರೆ ಭೂಮಿ ಮೇಲೆ ಕಾಲು ನಿಲ್ಲದಂತೆ ಆಡುವ ಜನರ ಮಧ್ಯದಲ್ಲಿ ನಲವತ್ತು ಸಾವಿರ ಹಾಡು ಹಾಡಿ ಅದೇ ನಯ ವಿನಯ ನಾಜೂಕು ಇಟ್ಟುಕೊಂಡು ಬಾಳಿದ ವಿಶ್ವದ ಏಕೈಕ ವ್ಯಕ್ತಿ ಬಾಲು.
ಹೆಚ್ಚೂ ಕಮ್ಮಿ 90ರ ದಶಕದಿಂದ ಅವರ ಹಾಡನ್ನು ಕೇಳಿಕೊಂಡು ಬಂದವನು ನಾನು. ಎಂಥೆಂಥ ಹಾಡುಗಳು ಅವು. ಒಮ್ಮೆ ಕೇಳಿದರೆ ಮನದ ಆಳಕ್ಕೆ ಇಳಿದು ಬಿಡುತ್ತಿತ್ತು. ಆಗ ಚಲನ ಚಿತ್ರಗಳನ್ನು ನಾವು ನೋಡುತ್ತಿರಲಿಲ್ಲ. ರೇಡಿಯೋದಲ್ಲಿ ಕೇಳಿದರೆ ಮಾತ್ರ ಹಾಡು. ಯಾರು ನಟಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಬಾಲು ಹಾಡುತ್ತಿದ್ದಾರೆ ಎಂಬುದು ಮಾತ್ರ ಗೊತ್ತು.
ಕಳೆದ 54 ವರ್ಷಗಳಿಂದ ಹಾಡುತ್ತಿದ್ದ ವ್ಯಕ್ತಿ ವಿಶ್ರಾಂತಿ ಬಯಸಿದ್ದೇ ಇಲ್ಲ. ಆದರೆ ಈ ರೀತಿ ಹಠಾತ್ ವಿಶ್ರಾಂತಿ ಬೇಕಿತ್ತಾ ಬಾಲೂಜಿ? ಅದೂ ಶಾಶ್ವತವಾಗಿ. ನಂಬಲೇ ಆಗುತ್ತಿಲ್ಲ. ಹಾಡಿನ ಮೂಲಕ ನಮ್ಮ ಮಧ್ಯೆ ನಮ್ಮ ಅಂತ್ಯದವರೆಗೂ ಇರುತ್ತಾರೆ ನಿಜ...ಆದರೆ ಸಾವು ನ್ಯಾಯವೇ?
ಕೊರೊನಾ ಪಾಸಿಟಿವ್ ಬಂದಾಗ ಎರಡು ದಿನ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದು ಬರುತ್ತೇನೆಂದು ಹೋದ ಜೀವ...ಬಂದಿದ್ದು 51 ದಿನಗಳ ನಂತರ ನಿರ್ಜೀವವಾಗಿ. ಇದಕ್ಕಿಂತ ಕ್ರೂರ ವಿಧಿ ಇನ್ನೊಂದಿದೆಯೇ ? ಕೊರೊನಾ ಇಷ್ಟೊಂದು ಕ್ರೂರ ಆಗಬಾರದಿತ್ತು. ನನ್ನ ದೈವವನ್ನು ಕಸಿದುಕೊಂಡ ಕೊರೊನಾಗೆ ದಿಕ್ಕಾರವಿರಲಿ.
ಹಾಡುತ್ತಲೇ ಕೊನೆಯುಸಿರು ಎಳೆಯಬೇಕು... ಆಸ್ಪತ್ರೆಗೆ ಹೋಗದೆ...ರಾತ್ರಿ ನಿದ್ದೆಯಲ್ಲೇ ಸಾಯಬೇಕು ಅಂದುಕೊಂಡಿದ್ದ ಜೀವ ಅದು. ಕಣ್ಣಿಗೆ ಕಾಣದ ನಾಟಕಕಾರನ ಆಟ ಬಲ್ಲವರಾರು ?
ಭೀಷ್ಮ ಶರಶಯ್ಯೆಯಲ್ಲಿ ಮಲಗಿದಂತೆ 51 ದಿನ ಮಲಗಿದರು. ಎದ್ದು ಬರಬಹುದು ಎನ್ನುವ ಸಣ್ಣ ಆಸೆ ಒಂದಿತ್ತು...ಆದರೆ.... ‘‘ಪವಡಿಸು ಪರಮಾತ್ಮ ಅಂದ ಜೀವವನ್ನು ಪರಮಾತ್ಮ ತನ್ನ ಬಳಿಯೇ ಪವಡಿಸಿಕೊಂಡು ಬಿಟ್ಟ. ಒಳ್ಳೆಯವರನ್ನು ಭಗವಂತ ಬೇಗ ಕರೆಸುತ್ತಾನಂತೆ... ಆದರೂ ಇದು ಬಹಳ ಬೇಗ ಆಗೋಯ್ತು.
ಬಾಲು ಯಾರೋ ಏನೋ... ನಮ್ಮೆಲ್ಲರ ಮನೆಯವರೇ ಆಗಿ ಹೋದರು. ಅವರ ಕನ್ನಡ ಕೇಳುವುದೇ ಚೆಂದ. ಒಂದಷ್ಟು ವರ್ಷ ‘‘ಎದೆ ತುಂಬಿ ಹಾಡುವೆನು’’ ಕಾರ್ಯಕ್ರಮದ ಮೂಲಕ ಮನೆ ಮಾತಾದರು.
ಅವರ "ನಗುವ ನಯನ "ನೋಡುವುದೇ ಚೆಂದ.." ಏನೇ ಕೇಳು ಕೊಡುವೆ ನಿನಗೆ" ಎನ್ನುತ್ತಾ ಎಲ್ಲಾ ಕೊಟ್ಟರು. "ಜೊತೆಯಲಿ ಜೊತೆ ಜೊತೆಯಲಿ ಇರುವೆನು" ಎನ್ನುತ್ತಾ ಹೋಗಿಯೇ ಬಿಟ್ಟರು. "ನೂರೊಂದು ನೆನಪು" ನಮಗಾಗಿ ಬಿಟ್ಟರು. "ಮನಸೇ ಬದುಕು ನಿನಗಾಗಿ" ಎನ್ನುತ್ತಾ ಕನಸಾಗಿ ಬಿಟ್ಟರು. "ಕನಸಲೂ ನೀನೇ ಮನಸಲೂ ನೀನೇ" ಎನ್ನುತ್ತಾ ಮನದಲ್ಲೇ ನಿಂತರು. ‘‘ಏಳೇಳು ಜನ್ಮವೇ ಬರಲಿ..ಈ ಮಣ್ಣಲಿ ನಾನು ಹುಟ್ಟುವೆ...’’ ಎಂದು ಪ್ರತೀ ಬಾರೀ ಅನ್ನುತ್ತಲೇ ಇದ್ದರು. "ಮತ್ತೆ ಹುಟ್ಟಿ ಬರುವಿರಾ ಸಂಗೀತ ಬ್ರಹ್ಮ?"
- ಶಿವಪ್ರಸಾದ್, ಪೆÇನ್ನಂಪೇಟೆ.