ಹತ್ರಾಸ್ ಪ್ರಕರಣ : ಸಿಬಿಐ ತನಿಖೆಗೆ ಆಗ್ರಹ

ಲಖನೌ, ಅ. 2: ಉತ್ತರ ಪ್ರದೇಶದ ಹತ್ರಾಸ್ ಗ್ಯಾಂಗ್ ರೇಪ್‍ನ ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ ಪೊಲೀಸರಿಂದ ಒತ್ತಡವಿದ್ದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸಂತ್ರಸ್ತೆಯ ತಂದೆ ಆಗ್ರಹಿಸಿದ್ದಾರೆ. ಸೆ. 29 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ ಅತ್ಯಾಚಾರ ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನೂ ಪೊಲೀಸರೇ ತರಾತುರಿಯಲ್ಲಿ ನೆರವೇರಿಸಿದ್ದರು. ಈ ನಡುವೆ ಸಂತ್ರಸ್ತ ಯುವತಿಯ ಊರಿನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಮಾಧ್ಯಮದವರೂ ಸೇರಿದಂತೆ ಎಲ್ಲರಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ಇದೇ ವೇಳೆ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾಧ್ರ ಟ್ವಿಟರ್‍ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಸಂತ್ರಸ್ತ ಯುವತಿಯ ತಂದೆ ಪೊಲೀಸರಿಂದ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಯಿಂದ ತಮಗೆ ಯಾವುದೋ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಡವಿದೆ ಎಂದು ಹೇಳಿರುವುದು ಬಹಿರಂಗಗೊಂಡಿದೆ.

ಟ್ರ್ಯಾಕ್ಟರ್ ರ್ಯಾಲಿಗೆ ನಾಳೆ ಚಾಲನೆ

ಚಂಡೀಗಢ, ಅ. 2: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ನೂತನ ಕೃಷಿ ಮಸೂದೆ ವಿರುದ್ಧದ ಹೋರಾಟದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು, ವಿವಾದಾತ್ಮಕ ಕೃಷಿ ಮಸೂದೆ ವಿರೋಧಿಸಿ ತಾ. 4 ರಿಂದ 6 ರವರೆಗೆ ಪಂಜಾಬ್ ಮತ್ತು ಹರಿಯಾಣದಲ್ಲಿ ಟ್ರ್ಯಾಕ್ಟರ್ ರ್ಯಾಲಿಗಳನ್ನು ನಡೆಸಲಿದ್ದಾರೆ. ಇದಕ್ಕೂ ಮೊದಲು ತಾ. 3 ರಿಂದ 5 ರವರೆಗೆ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ರಾಹುಲ್ ಗಾಂಧಿ ನಿರ್ಧರಿಸಿದ್ದರು ಎಂದು ಪಕ್ಷ ಹೇಳಿದೆ. ರಾಹುಲ್ ಗಾಂಧಿ ಅವರ ಟ್ರಾಕ್ಟರ್ ರ್ಯಾಲಿ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದ್ದು, ತಾ. 4, 5, 6ಕ್ಕೆ ಮರು ನಿಗದಿಪಡಿಸಲಾಗಿದೆ. ಉಳಿದ ವಿವರ ಮೊದಲಿನಂತೆಯೇ ಇದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಟ್ವೀಟ್ ಮಾಡಿದ್ದಾರೆ.

ವಿದ್ಯಾರ್ಥಿಗಳ ದಸರಾ ರಜೆ ರದ್ದು

ಬೆಂಗಳೂರು, ಅ. 2: ಕೋವಿಡ್ ಹಿನ್ನೆಲೆ ಈ ಬಾರಿ ಶಾಲೆಗಳು ತಡವಾಗಿ ಆರಂಭವಾದ ಕಾರಣ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ದಸರಾ ರಜೆಯನ್ನು ರದ್ದುಪಡಿಸಿದೆ. ತಾ. 3 ರಿಂದ ತಾ. 26 ರವರೆಗೆ ಪ್ರತಿ ವರ್ಷ ಮಕ್ಕಳಿಗೆ ದಸರಾ ರಜೆ ನೀಡಲಾಗುತ್ತಿತ್ತು. ಆದರೆ ಈ ವರ್ಷ ದಸರಾ ರಜೆ ರದ್ದುಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಹೇಳಿದ್ದಾರೆ.

ಮಂತ್ರಾಲಯದಲ್ಲಿ ರಾಯರ ದರ್ಶನ ಆರಂಭ

ರಾಯಚೂರು, ಅ. 2: ಗುರು ರಾಘವೇಂದ್ರ ಸ್ವಾಮಿಗಳ ದಿವ್ಯ ಸಾನ್ನಿದ್ಯವಿರುವ ಮಂತ್ರಾಲಯ ರಾಘವೇಂದ್ರ ಮಠದ ಆವರಣವನ್ನು 200 ದಿನಗಳ ನಂತರ ಇಂದು ಭಕ್ತರಿಗೆ ಮುಕ್ತಗೊಳಿಸಲಾಗಿದೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆ ರಾಯರ ದರ್ಶನವನ್ನು ನಿಷೇಧಿಸಿದ್ದ ಮಠ ಇಂದು ಪುನಃ ಭಕ್ತರಿಗೆ ರಾಯರ ದರ್ಶನ ಮಾಡಲು ಅವಕಾಶ ಕಲ್ಪಿಸಿದೆ. ಮಠದ ಮುಖ್ಯದ್ವಾರವನ್ನಿಂದು ತೆರೆದ ಹಿನ್ನೆಲೆ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದರು.