ನಮ್ಮೆಲ್ಲರ ಕೈಯಲ್ಲಿ ಚಲಾವಣೆಯಲ್ಲಿ ಇರುವ ನೋಟುಗಳೆಲ್ಲಾ ರಿಸರ್ವ್ ಬ್ಯಾಂಕ್ನಿಂದ ಬಿಡುಗಡೆ ಆಗಿದ್ದು, ಅದು 'ಕ್ಲೀನ್ ನೋಟ್ ಪಾಲಿಸಿ' ಎಂಬ ನಿಯಮವನ್ನು ಬಹಳ ಹಿಂದೆಯೇ ಜಾರಿಗೆ ತಂದಿದೆ. ಚಲಾವಣೆಯಲ್ಲಿ ಇರುವ ಎಲ್ಲ ಹರಿದ ಹಾಗೂ ಹಳೆಯ ನೋಟುಗಳನ್ನು ಚಲಾವಣೆಯಿಂದ ಬೇರ್ಪಡಿಸಿ, ತನಗೆ ಹಿಂದಿರುಗಿಸಬೇಕು ಎಂಬ ನಿರ್ದೇಶನವನ್ನು ಎಲ್ಲಾ ಬ್ಯಾಂಕ್ಗಳಿಗೂ ನೀಡಿದೆ. ಹೀಗಾಗಿ, ಬ್ಯಾಂಕಿಗೆ ಬರುವ ಯಾವುದೇ ಶ್ರೀಸಾಮಾನ್ಯರು ನೀಡುವ ಹರಿದ ಹಾಗೂ ಹಳೆಯ ನೋಟುಗಳನ್ನು ಬದಲಿಸಿಕೊಡುವ ಜವಾಬ್ದಾರಿ ಪ್ರತಿಯೊಂದು ಬ್ಯಾಂಕಿನದ್ದಾಗಿದೆ.
ಈ ಕಾರ್ಯವನ್ನು ಬ್ಯಾಂಕುಗಳು ಸರಿಯಾಗಿ ನಿಭಾಯಿಸುತ್ತಿಲ್ಲ, ಏನಾದರೂ ಸಬೂಬು ಹೇಳಿ ಶ್ರೀಸಾಮಾನ್ಯರಿಗೆ ಈ ಸೇವೆಯನ್ನು ನಿರಾಕರಿಸುತ್ತಿವೆ ಎಂಬುದು ರಿಸರ್ವ್ ಬ್ಯಾಂಕ್ ಗಮನಕ್ಕೆ ಬಂದಿದೆ. ಹಾಗಾಗಿ, ಅದು ತನ್ನ ತನಿಖಾಧಿಕಾರಿಗಳನ್ನು, ಶ್ರೀಸಾಮಾನ್ಯರ ಸೋಗಿನಲ್ಲಿ ಹಳೆಯ ನೋಟುಗಳೊಂದಿಗೆ (ಇನ್ಕಾಗ್ನಿಟೋ ವಿಸಿಟ್) ಬ್ಯಾಂಕ್ ಶಾಖೆಗಳಿಗೆ ಕಳುಹಿಸುತ್ತದೆ. ಹಳೆಯ ನೋಟುಗಳನ್ನು ಬದಲಿಸದ ಬ್ಯಾಂಕಿಗೆ ದಂಡವನ್ನು ವಿಧಿಸಿ, ಕೇಂದ್ರ ಕಚೇರಿಯ ಶ್ರೇಯಾಂಕವನ್ನು ಕಡಿತಗೊಳಿಸುತ್ತದೆ.
ಹಳೆಯ- ಹರಿದ ನೋಟನ್ನು ಬದಲಿಸಲು ಶ್ರೀಸಾಮಾನ್ಯರು ಯಾವುದೇ ಬ್ಯಾಂಕ್ನ ಶಾಖೆಗೂ ಹೋಗಬಹುದು, ಖಾತೆ ಇರುವಲ್ಲಿಗೇ ಹೋಗ ಬೇಕೆಂದೇನೂ ಇಲ್ಲ ಎನ್ನುತ್ತದೆ ರಿಸರ್ವ್ ಬ್ಯಾಂಕ್.
ಹರಿದ ನೋಟುಗಳನ್ನು ಬದಲಾಯಿಸುವಲ್ಲಿ ರಿಸರ್ವ್ ಬ್ಯಾಂಕ್ ಕೆಲವು ಮಾನದಂಡಗಳನ್ನು ನಿಗದಿ ಪಡಿಸಿದೆ. ಅದರ ಅನ್ವಯವೇ ಬ್ಯಾಂಕು ಪೂರ್ಣ ಮೊತ್ತವನ್ನು ಅಥವಾ ಭಾಗಶಃ ಮೊತ್ತವನ್ನು ನೀಡುತ್ತದೆ. ಆದರೆ, ಉದ್ದೇಶ ಪೂರ್ವಕವಾಗಿ ಹರಿದ ಹಾಗೂ ನೋಟಿನ ಬಹುಭಾಗವೇ ಇಲ್ಲದ ಸಂದರ್ಭದಲ್ಲಿ, ಅಂತಹಾ ನೋಟನ್ನು ಹಿಂದಿರುಗಿಸುವ ಅಧಿಕಾರ ಬ್ಯಾಂಕ್ಗಳಿಗೆ ಖಂಡಿತಾ ಇದೆ.
ಒಂದೊಮ್ಮೆ ಬ್ಯಾಂಕಿನಲ್ಲಿ ಈ ಸೇವೆಯು ದೊರೆಯದಿದ್ದಲ್ಲಿ, ಶ್ರೀಸಾಮಾನ್ಯರು ಆ ಬ್ಯಾಂಕ್ನ ಪ್ರಾದೇಶಿಕ ಕಚೇರಿಗೆ ಅಥವಾ ರಿಸರ್ವ್ ಬ್ಯಾಂಕ್,ಇಶ್ಯು ವಿಭಾಗ, ನೃಪತುಂಗ ರಸ್ತೆ, ಬೆಂಗಳೂರು 560001 ಇವರಿಗೆ ದೂರು ನೀಡಿ, ನ್ಯಾಯವನ್ನು ಪಡೆಯಬಹುದಾಗಿದೆ.
-ರಮೇಶ್ ಬಿ.ಎಂ., ಬೆಂಗಳೂರು.