ಮಡಿಕೇರಿ, ಸೆ. 30: ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಅವಿನಾಭಾವ ಸಂಬಂಧದೊಂದಿಗೆ ಹಸಿರು ಪಚ್ಚೆಯ ಸಿರಿ ಸಂಪನ್ನ ತೆಂಗು, ಕಂಗು, ತಾಳೆ ಬಾಳೆಯೊಂದಿಗೆ ಭತ್ತ, ಏಲಕ್ಕಿ, ಕಾಫಿ ಇತ್ಯಾದಿಯ ಸ್ಪರ್ಶವನ್ನು ಕಂಡುಕೊಂಡಿರುವ ಸಂಪಾಜೆ ಹೋಬಳಿಯ ಜನತೆ ನಿರಂತರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ‘ಅತ್ತ ಧರಿ-ಇತ್ತ ಪುಲಿ’ ಎಂಬಂತೆ ಜೀವನ ಸವೆಸುತ್ತಿದ್ದಾರೆ.

ಒಂದು ರೀತಿಯಲ್ಲಿ ಉತ್ತರ ಕೊಡಗಿನ ಗಡಿಯಲ್ಲಿರುವ ತುಳುನಾಡು ಸಂಸ್ಕøತಿಗೆ ಹೊಂದಿಕೊಂಡಿರುವ ಹೋಬಳಿ ಕೇಂದ್ರ ಸಂಪಾಜೆ, ಇಲ್ಲಿ ಒಂದಿಷ್ಟು ಪ್ರದೇಶ ಉತ್ತರ ಕೊಡಗಿನ ಸಂಪಾಜೆಯಾಗಿದ್ದರೆ, ಇನ್ನೊಂದಿಷ್ಟು ಪ್ರದೇಶ ತುಳುನಾಡು ಸೀಮೆಯ ದಕ್ಷಿಣ ಕನ್ನಡ ಸಂಪಾಜೆ ಎಂದು ಪರಿಗಣಿಸಲ್ಪಟ್ಟಿದೆ.ಮಡಿಕೇರಿ ತಾಲೂಕಿಗೆ ಸೇರ್ಪಡೆಗೊಂಡಿರುವ ಕೊಡಗಿನ ಭೂಭಾಗದಲ್ಲಿ ಸಂಪಾಜೆ, ಚೆಂಬು, ಪೆರಾಜೆ ಗ್ರಾಮ ಪಂಚಾಯಿತಿ ಕೇಂದ್ರಗಳೊಂದಿಗೆ ಹತ್ತಾರು ಉಪಗ್ರಾಮಗಳಿವೆ. ಈ ವ್ಯಾಪ್ತಿಯ ಅನೇಕ ಗ್ರಾಮಗಳು ತೀರಾ ಗುಡ್ಡ ಬೆಟ್ಟ ಸಾಲುಗಳಲ್ಲಿ ಕಡಿದಾದ ಪ್ರದೇಶಗಳಿಂದ ಮತ್ತು ಗಡಿಯಲ್ಲಿನ ಮೀಸಲು ಅರಣ್ಯ ಪ್ರದೇಶದ ಒತ್ತಿನಲ್ಲಿ ಪಯಸ್ವಿನಿ ನದಿ ತಟದಲ್ಲಿವೆ.

ವಿಭಿನ್ನ ಕೃಷಿ: ಪ್ರಾರಂಭದಲ್ಲೇ ಉಲ್ಲೇಖಿಸಿದಂತೆ ತುಳುನಾಡು ಸೀಮೆಗೆ ಹೊಂದಿಕೊಂಡಿರುವ ಇಲ್ಲಿನ ನಮ್ಮ ರೈತರು, ಪ್ರಮುಖವಾಗಿ ರಬ್ಬರ್, ಅಡಿಕೆ, ಕೊಕೊ, ತೆಂಗು, ಭತ್ತದೊಂದಿಗೆ ಕಾಫಿ, ಏಲಕ್ಕಿ, ಮೆಣಸು ಇತ್ಯಾದಿಯನ್ನು ಕೃಷಿ ಮಾಡಿಕೊಂಡಿದ್ದಾರೆ. ದನ, ಕೋಳಿ ಸಾಕಾಣಿಕೆಯಲ್ಲೂ ತೊಡಗಿದ್ದು, ಕೃಷಿಗೆ ದನದ ಗೊಬ್ಬರ ಬಳಕೆಯೂ ಮುಂದುವರೆದಿದೆ.

ಮಂಗಗಳ ಸಾಮ್ರಾಜ್ಯ: ಇಂತಹ ಕೃಷಿಕಾಯಕ ರೈತಾಪಿ ವರ್ಗಕ್ಕೆ ವಿಪರೀತ ಮಂಗಗಳ ಉಪಟಳದೊಂದಿಗೆ, ಸಾಕಷ್ಟು ತೆಂಗು ಇತ್ಯಾದಿ ನಿತ್ಯ ಅವುಗಳಿಗೆ ಆಹಾರವಾಗಿ ರೈತರಿಗೆ ಲಭಿಸಲಾಗಿದೆ. ಪ್ರತಿನಿತ್ಯ ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ಮಂಗಗಳು ಸಿಕ್ಕ ಸಿಕ್ಕ ತೆಂಗಿನ ಫಸಲು ಕಿತ್ತು ಹಾಕಿ ಎಳನೀರು ಕುಡಿದು ಮನಬಂದಂತೆ ಹಾನಿಗೊಳಿಸುತ್ತಿವೆ.

ಕಾಡಾನೆ ಕಾಟ: ಇದರೊಂದಿಗೆ ಗಡಿ ಮೀಸಲು ಅರಣ್ಯದ ಕಾಡಾನೆ ಹಿಂಡು ಅವ್ಯಾಹತವಾಗಿ ಲಗ್ಗೆ ಇಡುತ್ತಾ, ಕೃಷಿ ಫಸಲು ನಷ್ಟ ಪಡಿಸುತ್ತಾ, ತುಳಿದು ಧ್ವಂಸಗೊಳಿಸುತ್ತಾ ರೈತ ಕುಟುಂಬಗಳಿಗೆ ಮೇಲಿಂದ ಮೇಲೆ ಮರ್ಮಾಘಾತ ನೀಡುತ್ತಿವೆ.

(ಮೊದಲ ಪುಟದಿಂದ) ಸಂಪಾಜೆ ಹೋಬಳಿ ಅರಣ್ಯ ಸಿಬ್ಬಂದಿಗೆ ಇದು ಮಾಮೂಲಿ ದೂರು ಎನಿಸಿದರೂ, ಪರಿಹಾರ ಅಸಾಧ್ಯವೆನಿಸಿಬಿಟ್ಟಿದೆ. ಕಾಡಾನೆ ಹಾಗೂ ಮಂಗಗಳ ಉಪದ್ರದಿಂದ ಬೇಸತ್ತಿರುವ ಜನತೆ ಹೇಳುವ ಪ್ರಕಾರ; ಈ ಕಾಡಾನೆಗಳಿಂದ ಪಾರಾಗಬಹುದಾದರೂ ಕೋತಿಗಳನ್ನು ಓಡಿಸಲು ಅಸಾಧ್ಯವೆಂದು ನೋವಿನಿಂದ ನುಡಿಯುತ್ತಾರೆ.

ಮಳೆಯ ಹೊಡೆತ: ಈ ಪರಿಸ್ಥಿತಿಯಲ್ಲಿ ಜಾಗತಿಕ ಕೊರೊನಾ ನಡುವೆ ಕಾರ್ಮಿಕರು ಸಿಗದೆ ಕೃಷಿ ಕಾಯಕ ನಿರ್ವಹಿಸಿ, ದುಬಾರಿ ಸಂಬಳದಿಂದ ಹೈರಾಣಾಗುತ್ತಿದ್ದರೆ, ಕಳೆದ ಮೂರು ವರ್ಷಗಳ ಮಳೆಯು ತೀವ್ರ ಹೊಡೆತ ನೀಡಿ ಬದುಕು ನಿರ್ವಹಿಸಲು ಹರಸಾಹಸಪಡುವಂತಾಗಿದೆ ಎಂದು ದುಃಖ ಹೊರಗೆಡವಿದ್ದಾರೆ. ಕಾರಣ ವಿಪರೀತ ಮಳೆಯಿಂದ ಅಡಿಕೆ, ಕೊಕೊ ಇತ್ಯಾದಿ ಕೊಳೆರೋಗಕ್ಕೆ ತುತ್ತಾಗಿ ನಶಿಸುತ್ತಿವೆ. ಇನ್ನು ಈಗಾಗಲೇ ಕದಿರು ಸಹಿತ ಮಾಗುತ್ತಿರುವ ಭತ್ತದ ಬೆಳೆ ನೆಲಕಚ್ಚಿವೆ. ಪರಿಣಾಮ ರಬ್ಬರ್ ಮರದ ಎಲೆಗಳು ಉದುರಿ ‘ಟ್ಯಾಪಿಂಗ್’ ಮಾಡಿದರೂ ಹಾಲು ಸಿಗದೆ ಅಪಾರ ನಷ್ಟ ಎದುರಿಸುವಂತಾಗಿದೆ. ಒಂದು ರೀತಿ ಪ್ರಾಕೃತಿಕ ಸಮೃದ್ಧಿಯ ಸಂಪಾಜೆ ಹೋಬಳಿ ಜನತೆ ವರುಣನ ಕೋಪ, ಕಾಡಾನೆಯೊಂದಿಗೆ ಮಂಗಗಳ ಉಪದ್ರದಿಂದ ನೆಮ್ಮದಿ ಕಳೆದುಕೊಂಡು ದೈನಂದಿನ ಬದುಕಿನಲ್ಲಿ ನಲುಗುವಂತಾಗಿದೆ.