ಮಡಿಕೇರಿ, ಸೆ. 30: ಪ್ರವಾಸಿಗರಿಗೆ ಹಾಗೂ ನಾಗರಿಕರಿಗೆ ವಾಯು ವಿಹಾರ ಮತ್ತು ಮಾನಸಿಕ ಪ್ರಫುಲ್ಲತೆಗಾಗಿ ಮಡಿಕೇರಿ ನಗರದಲ್ಲಿ ಇರುವ ಒಂದೇ ತಾಣವೆಂದರೆ ರಾಜಾಸೀಟು ಉದ್ಯಾನವನ. ಇಲ್ಲಿ ಬರುವವರಿಗೆ ಹೆಚ್ಚಿನ ಹರ್ಷೋಲ್ಲಾಸಕ್ಕಾಗಿ ಎಷ್ಟೋ ವರ್ಷಗಳ ಹಿಂದೆ ಪುಟಾಣಿ ರೈಲು ಅಸ್ತಿತ್ವಕ್ಕೆ ಬಂದಿತು. ಕೇವಲ ಪ್ರವಾಸಿಗರು ಮಾತ್ರವಲ್ಲ, ಮಡಿಕೇರಿಯ ಹಾಗೂ ಕೊಡಗಿನ ನಾಗರಿಕರು, ಮಕ್ಕಳು ಹಾಗೂ ಇಡೀ ಕುಟುಂಬಗಳು ಈ ಪುಟಾಣಿ ರೈಲಿನಲ್ಲಿ ಕುಳಿತು ವಾಯು ವಿಹಾರ ಮಾಡುತ್ತಾ, ಆನಂದೋಲ್ಲಾಸ ಪಡೆಯುತ್ತಿದ್ದರು. ಪ್ರವಾಸೋದ್ಯಮ ಮತ್ತಿತರ ವಿಭಾಗಗಳಿಗೆಂದು ಸರಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡುತ್ತದೆ. ಆದರೆ ಭಗ್ನಗೊಂಡು ಯಾಂತ್ರಿಕವಾಗಿ ದುರಸ್ತಿಗೊಂಡು ಯಂತ್ರೋಪಕರಣಗಳು ಕಳಚಿಬಿದ್ದು, ದುಃಸ್ಥಿತಿಯಲ್ಲಿರುವ ಪುಟಾಣಿ ರೈಲನ್ನು ಸರಿಪಡಿಸಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮುತುವರ್ಜಿ ವಹಿಸದಿರುವುದು ನಾಗರಿಕರ ದೌರ್ಭಾಗ್ಯವೆನ್ನಬಹುದು. ಕೊರೊನಾ ದುಷ್ಪರಿಣಾಮದಿಂದ ಮನೆಯಲ್ಲಿಯೇ ಕುಳಿತು ಮಾನಸಿಕವಾಗಿ ಹಾಗೂ ದೈಹಿಕವಾಗಿ ವಿಹ್ವಲಗೊಳ್ಳುತ್ತಿರುವ ಪುಟಾಣಿ ಮಕ್ಕಳಿಗೂ ಈ ರೈಲು ಓಡುತ್ತಿದ್ದಿದ್ದರೆ ಎಷ್ಟೋ ನೆಮ್ಮದಿ ನೀಡುತ್ತಿತ್ತು. ಕೊರೊನಾ ಬಂದ ನಂತರವಂತೂ ಅಭಿವೃದ್ಧಿ ಕಾರ್ಯಗಳು ನಿರ್ಲಕ್ಷ್ಯಗೊಂಡಿವೆ ಎನ್ನುವುದರ ದ್ಯೋತಕವಾಗಿ ಈ ಪುಟಾಣಿ ರೈಲು ನೆಲಕಚ್ಚಿರುವುದೇ ನಿದರ್ಶನವಾಗಿದೆ. ಈ ಬಗ್ಗೆ ‘ಶಕ್ತಿ’ ಮಾಹಿತಿ ಬಯಸಿದಾಗ ಹಾಳಾದ ಈ ರೈಲನ್ನು ಪುನಶ್ಚೇತನಗೊಳಿಸಲು ಚಾಲನೆಗೆ ಅಣಿಗೊಳಿಸಲು ಹಣದ ಅಗತ್ಯವಿದೆ. ಸದ್ಯದ ಮಟ್ಟಿಗೆ ಇದಕ್ಕೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಆದರೆ, ಜಿಲ್ಲಾಡಳಿತದಿಂದ ವಿವರವಾದ ಯೋಜನಾ ರೂಪು-ರೇಷೆಯನ್ನು ರೈಲ್ವೆ ಇಲಾಖೆಗೆ ಕಳುಹಿಸಿ ಕೊಡಲಾಗಿದೆ. ಉಳಿದಂತೆ ಮುಂದಿನ ಕಾರ್ಯಯೋಜನೆ ಕೈಗೊಳ್ಳಲು ಜಿಲ್ಲಾ ಪ್ರವಾಸೋದ್ಯಮ (ಮೊದಲ ಪುಟದಿಂದ) ಇಲಾಖೆಗೆ ವಹಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಕೊರೊನಾ ಕೆಲಸದ ನಡುವೆ ಪುಟಾಣಿ ರೈಲು ಬಗ್ಗೆ ಗಮನಹರಿಸಲು ಸಾಧ್ಯವಾಗಲಿಲ್ಲವೇ? ಅಥವಾ ಈ ಕುರಿತಾಗಿ ಯೋಜನೆ ಕಾರ್ಯಗತಗೊಳಿಸಲು ಯಾವುದೇ ಪ್ರಯತ್ನ ನಡೆಸದೆ ಮೌನಕ್ಕೆ ಜಾರಿದೆಯೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ‘ಕಾವೇರಿ ಪಟ್ಟಣ’ ಎಂದು ಹೆಸರಿಟ್ಟು ಸುತ್ತಲೂ ಹಸಿರು ಗಿಡಗಳ ನಡುವೆ ಈ ರೈಲು ಓಡುತ್ತಿದ್ದಾಗ ಮಕ್ಕಳು ಆನಂದದ ನಗೆ ಬೀರುತ್ತಿದ್ದರು. ಇದೀಗ ಈ ಸುತ್ತಲ ಪರಿಸರದಲ್ಲಿ ಎಲ್ಲೆಡೆ ಕಾಡು ಬೆಳೆದು ಹಾವು - ಚೇಳುಗಳ ತಾಣವಾಗಿ ಪರಿಣಮಿಸಿದೆ. ಅತ್ತ ಹೆಜ್ಜೆಯಿಡಲೂ ಕೂಡ ಭಯವಾಗುವಂತಿದೆ. ಇನ್ನೊಂದೆಡೆ ಈ ಪುಟಾಣಿ ರೈಲು ತಾಣದಲ್ಲಿ ಒಂದು ಸಾರ್ವಜನಿಕ ಶೌಚಾಲಯವಿದೆ. ಅಸಹ್ಯಕರ ಸನ್ನಿವೇಶವೊಂದು ಈ ವರದಿಗಾರನ ಕಣ್ಣಿಗೆ ಬಿದ್ದಿತು. ಈ ಸ್ಥಳದಲ್ಲಿ ಹಲವು ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿರುವವರಲ್ಲಿ ಕೆಲವು ಮಂದಿ, ಶೌಚಾಲಯದಲ್ಲಿ ದಾಸ್ತಾನಿಡುತ್ತಿದ್ದಾರೆ. ಕೊರೊನಾದಂತಹ ಮಾರಕ ರೋಗದ ಬಾಧೆ ಮೊದಲೇ ಪೀಡನೆಗೈಯ್ಯುತ್ತಿರುವಾಗ ಇಂತಹ ಮಾಲಿನ್ಯಕರ ದೃಶ್ಯ ಸಂಬಂಧಿಸಿದವರ ನಿರ್ಲಕ್ಷ್ಯಕ್ಕೆ ನಿದರ್ಶನವೆನಿಸಿದೆ. ಈ ಬಗ್ಗೆ ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಒಮ್ಮೆಯಾದರೂ ಕಣ್ಣಾಡಿಸಿದ್ದಾರೆಯೇ? ಇನ್ನಾದರೂ ಗಮನಹರಿಸುತ್ತಾರೆಯೇ?

ಉದ್ಘಾಟನೆಗೊಳ್ಳದ ಕೂರ್ಗ್ ವಿಲೇಜ್

ಇನ್ನೊಂದೆಡೆ ರಾಜಾಸೀಟಿನ ಹಿಂಬದಿಯ ಪ್ರದೇಶದಲ್ಲಿ ಒಂದು ವರ್ಷದ ಹಿಂದೆ ‘ಕೂರ್ಗ್ ವಿಲೇಜ್’ ಎಂಬ ಹೊಸ ಕಲ್ಪನೆಯೊಂದಿಗೆ ಪ್ರವಾಸಿಗರು ಮತ್ತು ನಾಗರಿಕರ ಅನುಕೂಲಕ್ಕಾಗಿ ನೂತನ ಯೋಜನೆಯೊಂದನ್ನು ಜಿಲ್ಲಾಧಿಕಾರಿಗಳು ಹಮ್ಮಿಕೊಂಡಿದ್ದರು. ಈ ಯೋಜನೆಯನ್ವಯ ಕೆಲವು ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಈ ಮಳಿಗೆಗಳಲ್ಲಿ ಗೃಹ ಕೈಗಾರಿಕೆ ತಯಾರಿತ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡುವ ಉದ್ದೇಶವಿತ್ತು. ರಾಜಾಸೀಟಿಗೆ ವಾಯು ವಿಹಾರಕ್ಕೆ ಬರುವ ಮಂದಿ ಈ ವಿಭಾಗಕ್ಕೂ ತೆರಳುವುದರೊಂದಿಗೆ ಅಗತ್ಯ ವಸ್ತುಗಳನ್ನು ಸುಲಭದಲ್ಲಿ ಪಡೆಯುವ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿತ್ತು. ಆದರೆ, ಜನರ ವಿರೋಧ ಬಂದ ನಂತರ ಅಲ್ಲಿ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ, ಮಾಹಿತಿಗಳನ್ನು ನೀಡಲು ಬದಲಾವಣೆ ಮಾಡಲಾಯಿತು. ಜೊತೆಗೆ ಇದೇ ಸ್ಥಳದಲ್ಲಿ ವಾಯು ವಿಹಾರವನ್ನು ಮಾಡಬಹುದಾಗಿತ್ತು. ಆದರೆ, ಕೊರೊನಾಘಾತದಿಂದ ಯೋಜನೆ ಪೂರ್ಣಗೊಳ್ಳದೆ ಗೇಟುಗಳನ್ನು ಭದ್ರಪಡಿಸಿ ಮುಚ್ಚಲಾಗಿದೆ. ಸಂಬಂಧಿಸಿದವರನ್ನು ಪ್ರಶ್ನಿಸಿದಾಗ, ಶೇ.90ರಷ್ಟು ಕೆಲಸ ಮುಗಿದಿದೆ ಎನ್ನುವ ಪ್ರತಿಕ್ರಿಯೆ ಕೇಳಿಬಂದಿತು. ಆದರೆ, ಸ್ಥಳಕ್ಕೆ ತೆರಳಿದ ‘ಶಕ್ತಿ’ ಪ್ರತಿನಿಧಿಗೆ ಇನ್ನೂ ಬಹಳಷ್ಟು ಕೆಲಸ ಬಾಕಿ ಇರುವುದು ಗೋಚರವಾಯಿತು. ಅಧಿಕಾರಿಗಳು ಕೆಲಸ ಈಗ ನಡೆಯುತ್ತಿದೆ, ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದುದು ಸ್ಥಳಕ್ಕೆ ತೆರಳಿದಾಗ ತಪ್ಪು ಮಾಹಿತಿ ಎಂಬುದು ಸ್ಪಷ್ಟ ಗೋಚರವಾಯಿತು. ಸುಮಾರು ರೂ. 98 ಲಕ್ಷದ ಈ ಯೋಜನೆಯನ್ನು ಪೂರ್ಣಗೊಳಿಸಲಿ. ಕೊರೊನಾ ಎನ್ನುವ ನಿತ್ಯ ಪ್ರಚಾರ ಪ್ರಹಾರದಿಂದ ಜನತೆಯನ್ನು ಬಿಡುಗಡೆಗೊಳಿಸಲಿ. ಸ್ವಲ್ಪವಾದರೂ ಮಾನಸಿಕ ನೆಮ್ಮದಿ ನೀಡುವ ವಿಹಾರ ತಾಣದತ್ತ ನಾಗರಿಕರು ತೆರಳಲು ಸಂಬಂಧಿಸಿದವರು ಶೀಘ್ರವೇ ಕ್ರಮಕೈಗೊಂಡು ಅವಕಾಶ ಕಲ್ಪಿಸಲಿ ಎಂಬುದು ನಗರದ ಅನೇಕರ ಅಭಿಮತವಾಗಿದೆ.

-ಚಿತ್ರ ವರದಿ : ಟಿ.ಜಿ. ಸತೀಶ್