ಮಡಿಕೇರಿ, ಸೆ. 30: ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 28 ವರ್ಷಗಳ ನಂತರ ಇಂದು ತೀರ್ಪು ಹೊರಬಿದ್ದಿದೆ. ಲಖನೌ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಯಾದವ್ ಅವರ ಪೀಠ ತೀರ್ಪು ಪ್ರಕಟಿಸಿದ್ದು, ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ಕಲ್ಯಾಣ್‍ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾಜನ್, ಲಾಲೂ ಸಿಂಗ್, ಬಿ.ಬಿ. ಶರಣ್ ಸಿಂಗ್ ಸೇರಿದಂತೆ ಎಲ್ಲಾ 32 ಆರೋಪಿಗಳು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.ಮಸೀದಿ ಧ್ವಂಸ ಪೂರ್ವ ನಿಯೋಜಿತವಲ್ಲ ಸಮಾಜಘಾತುಕ ಶಕ್ತಿಗಳು ಮಸೀದಿಯ ಮೇಲೆ ಹತ್ತಿದ್ದರು. ಈ ಸಮಾಜಘಾತುಕ ಶಕ್ತಿಗಳನ್ನು ತಡೆಯಲು ಆರೋಪಿಗಳು ಯತ್ನಿಸಿದ್ದರು ಎಂದು ಕೋರ್ಟ್ ಹೇಳಿದೆ. ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್ ಸೇರಿದಂತೆ 32 ಬಿಜೆಪಿ ಹಾಗೂ ಆರ್‍ಎಸ್‍ಎಸ್ ಪ್ರಮುಖರು, ಮಸೀದಿ ಕೆಡವಲು ಪ್ರಚೋದನೆ ನೀಡಿದ ಆರೋಪ ಹಾಗೂ ಸಂಚು ರೂಪಿಸಿದ ಆರೋಪ ಎದುರಿಸುತ್ತಿದ್ದರು.