ಮಡಿಕೇರಿ, ಸೆ. 30: ಪ್ರಧಾನಿ ನರೇಂದ್ರ ಮೋದಿ, ದೀನ ದಯಾಳ್ ಉಪಾಧ್ಯಾಯ ಹಾಗೂ ಗಾಂಧೀಜಿಯವರ ಹುಟ್ಟು ಹಬ್ಬದ ಅಂಗವಾಗಿ ನಗರ ಬಿ.ಜೆ.ಪಿ. ರೈತ ಮೋರ್ಚಾ ವತಿಯಿಂದ ನಗರದಲ್ಲಿ ‘ಸೇವಾ ಸಪ್ತಾಹ’ ಕಾರ್ಯಕ್ರಮವನ್ನು ಗೋವು, ಗಂಗಾ, ಮತ್ತು ಭೂಮಿ ಪೂಜೆಗಳನ್ನು ನೆರವೇರಿಸುವುದರ ಮೂಲಕ ಬಿಜೆಪಿ ಮುಖಂಡರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ನಗರದ ಕಾನ್ವೆಂಟ್ ಜಂಕ್ಷನ್‍ನಲ್ಲಿರುವ ವಿನೋದ್ ಅವರ ಮನೆಯ ಆವರಣದಲ್ಲಿ ಸೋಮವಾರ ಸಂಜೆ ಗೋವು, ಭೂಮಿ, ಮತ್ತು ಗಂಗೆಗೆ ಪೂಜೆ ಸಲ್ಲಿಸಿ ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಕುಮಾರ್ ಅವರು, ದೇಶದಲ್ಲಿ ಗೋವು, ಜಲ ಹಾಗೂ ಮಣ್ಣಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಈ ಬಗ್ಗೆ ಗ್ರಾಮೀಣ ಹಾಗೂ ನಗರದಲ್ಲಿ ಜಾಗೃತಿ ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ ಮಣ್ಣಿಗೆ ತಾಯಿ ಸ್ಥಾನ ನೀಡಲಾಗಿದೆ. ಈ ಸಂಬಂಧ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ಪ್ರಪಂಚದಲ್ಲಿ ಪ್ರತಿ ಸೆಕೆಂಡಿಗೆ ಒಂದು ಪುಟ್ಬಾಲ್ ಮೈದಾನದಷ್ಟು ಮಣ್ಣು ಸವಕಳಿಯಾಗುತ್ತಿದೆ. ಇನ್ನು ಭೂಮಿಯೊಳಗೆ ಶೇ. 1.7 ರಷ್ಟಿರುವ ನೀರಿನಲ್ಲಿ. ಶೇ.50ರಷ್ಟು ನೀರು ಕಲುಷಿತವಾಗುತ್ತಿದೆ. ಆದರಿಂದ, ಪ್ರಸ್ತುತ ದಿನಗಳಲ್ಲಿ ಮಣ್ಣು ಮತ್ತು ಜೀವಜಲಕ್ಕೆ ಹಾನಿಯಾಗದಂತೆ ಕಾಪಾಡಿಕೊಳ್ಳಬೇಕಿದೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ, ಭವಿಷ್ಯದಲ್ಲಿ ಜೀವ ಸಂಕುಲವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯೂ ಎದುರಾಗಬಹುದು ಎಂದು ಆತಂಕ ವ್ಯಕ್ತ ಪಡಿಸಿದರು..

ಗೋವುಗಳನ್ನು ಸಂರಕ್ಷಣೆ ಮಾಡಿ: ಗೋವಿನಿಂದ ಸಿಗುವ ಪಂಚದ್ರವ್ಯಗಳು ಔಷಧಿಯ ಗುಣಗಳನ್ನು ಹೊಂದಿವೆ. ಈ ಬಗ್ಗೆ ವೈಜ್ಞಾನಿಕವಾಗಿ ರಿಸಾಚ್ರ್ಗಳು ನಡೆಯುತ್ತಿದೆ. ಆ ನಿಟ್ಟಿನಲ್ಲಿ ಗೋವಿನ ಪ್ರಾಮುಖ್ಯತೆ ಅರಿತು ಗೋವು ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಕೋರಿದರು.

ಭಾವನಾತ್ಮಕವಾಗಿ ಪ್ರತಿಭಟಿಸಿದಲ್ಲಿ ಪ್ರಯೋಜನವಿಲ್ಲ

2014ರಲ್ಲಿ ರಾಷ್ಟ್ರೀಯ ಗೋಕುಲ್ ಮಿಷನ್ ನಂತರದಲ್ಲಿ ಸರ್ಕಾರ ರಾಷ್ಟ್ರೀಯ ಕಾಮಧೇನು ಆಯೋಗವನ್ನು ತಂದಿದೆ. ಇದರ ಮುಖ್ಯ ಉದ್ದೇಶ ಗೋವುಗಳನ್ನು ಸಂರಕ್ಷಣೆ ಮಾಡುವುದಾಗಿದೆ. ಕೆಲವರಲ್ಲಿ ಗೋವು ಸಂರಕ್ಷಣೆ ಅಂದರೇ, ಗೋವುಗಳನ್ನು ಕದ್ದೊಯ್ಯುವ ಸಂದರ್ಭ ಕಳ್ಳರನ್ನು ಹಿಡಿದು ಪೆÇಲೀಸ್ ಠಾಣೆಗೆ ನೀಡುವುದಷ್ಟೇ ಅಲ್ಲ. ದೇಶಿಯ ಗೋವು ತಳಿಗಳನ್ನು ಉಳಿಸಲು ನೆರವಾಗಬೇಕಿದೆ. ಗೋವು ಸಾಕುವವರಿಗೂ ಉತ್ತೇಜನ ನೀಡಿ, ಆರ್ಥಿಕವಾಗಿ ಸಹಕಾರಿಯಾಗಬೇಕಿದೆ. ಭಾವನಾತ್ಮಕವಾಗಿ ಪ್ರತಿಭಟಿಸಿದಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಡಾ. ನವೀನ್ ಕುಮಾರ್ ತಿಳಿಸಿದರು.

ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆ ಕಲ್ಪಿಸಿ

ಜಿಲ್ಲೆಯಲ್ಲಿ ಕೃಷಿಯ ಜೊತೆಗೆ ಪ್ರವಾಸೋದ್ಯಮದ ಬೆಳವಣಿಗೆಯಾಗಬೇಕಿದೆ. ಗ್ರಾಮೀಣ ಭಾಗದಲ್ಲಿ ರೈತರು ಬೆಳೆಯುವ ತರಕಾರಿಗಳನ್ನು ನೇರವಾಗಿ ನಗರದ ಜನರಿಗೆ ಮಾರಾಟ ಮಾಡಲು ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆ ಕಲ್ಪಿಸಬಹುದು. ದಲ್ಲಾಳಿಗಳ ಸಹಾಯ ಇಲ್ಲದೆಯೇ ತರಕಾರಿಗಳನ್ನು ಮಾರಾಟ ಮಾಡಬಹುದು. ಇದರಿಂದ ರೈತರಿಗೆ ದುಪ್ಪಟ್ಟು ಲಾಭವಾಗಲಿದೆ. ಈ ಕಾರ್ಯಕ್ಕೆ ಸ್ತ್ರೀಶಕ್ತಿ ಸಂಘ, ಸ್ವ-ಸಹಾಯ ಸಂಘಗಳು ನೆರವಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ರೈತರು ಆರ್ಥಿಕವಾಗಿ ಹಿನ್ನಡೆಯಾಗಿರುವ ಕಾಲಘಟ್ಟದಲ್ಲಿ ಪ್ರತಿಯೊಬ್ಬರು ರೈತರ ಏಳಿಗೆಯ ಬಗ್ಗೆ ಚಿಂತಿಸಬೇಕಿದೆ. ಈ ನಿಟ್ಟಿನಲ್ಲಿ ನೂತನ ಎರಡು ಮಸೂದೆಗಳು ರೈತರ ಆದಾಯವನ್ನು ಹೆಚ್ಚಿಸಲು ಲಾಭದಾಯಕವಾಗಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅರಿವು ಮೂಡಿಸಬೇಕು ಎಂದು ಕೋರಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಪ್ರಕೃತಿಯ ಆರಾಧಕರೂ ಆಗಿರುವ ಪ್ರತಿಯೊಬ್ಬರೂ ನೆಲ, ಜಲ, ಪಶು, ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು; ರೈತರ ಬೆಳವಣಿಗೆ ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್ ಮಾತನಾಡಿ, ಸೇವಾ ಸಪ್ತಾಹ ಅಂಗವಾಗಿ ನಗರದಲ್ಲಿ ಅನೇಕ ಕಾರ್ಯಕ್ರಮಗಳು ನೆರವೇರಿವೆ. ದೇಶದ ಬೆನ್ನೆಲುಬಾಗಿರುವ ರೈತರಿಗೆ ಕೃಷಿ ಮಸೂದೆ ಉತ್ತಮ ಲಾಭವನ್ನು ಭವಿಷ್ಯದಲ್ಲಿ ತರಬಹುದು. ಈಗಾಗಲೇ ಮಧ್ಯವರ್ತಿಗಳ ಕಾಟದಿಂದ ಬೇಸತ್ತ ರೈತರಿಗೆ ನೂತನ ಎರಡು ಮಸೂದೆಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಮನವರಿಕೆ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.

ಈ ಸಂದರ್ಭ ಕೃಷಿ ಬೆಳೆಗಾರ ರನ್ನು ಮತ್ತು ಕೃಷಿ ಕಾರ್ಮಿಕರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಉಮೇಶ್ ಸುಬ್ರಮಣಿ, ನಗರದ ಕೃಷಿ ಮೋರ್ಚಾ ಅಧ್ಯಕ್ಷ ನಂದಾ, ರೈತ ವಿನೋದ್ ಮಾತನಾಡಿದರು. ಈ ಸಂದರ್ಭ ನಗರ ಬಿಜೆಪಿ ಪದಾಧಿಕಾರಿಗಳು, ಕೃಷಿ ಮೋರ್ಚಾ ಪದಾಧಿಕಾರಿಗಳು ಇದ್ದರು.