ಕೊರೊನಾ ನಿರ್ಲಕ್ಷಿಸಿದರೆ ಕಠಿಣ ಕ್ರಮ

ಬೆಂಗಳೂರು, ಸೆ.30 : ಕೊರೊನಾ ನಿಯಂತ್ರಣ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸ್ಕ್‍ಧರಿಸದ, ಭೌತಿಕ ಅಂತರ ಕಾಯ್ದುಕೊಳ್ಳದ, ಸಭೆ-ಸಮಾರಂಭ ನೆಪದಲ್ಲಿ ಜನದಟ್ಟಣೆಗೆ ಅವಕಾಶ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಒಂದೆರಡು ದಿನದಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದರು. ಲಾಕ್ ಡೌನ್ ತೆರವು ಬಳಿಕ ಕಳೆದೆರಡು ತಿಂಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈಗಿರುವ ಏಕೈಕ ಮಾರ್ಗವೆಂದರೆ ಕಠಿಣ ಕಾನೂನು ಜಾರಿಗೆ ತರುವುದು. ಸರಕಾರದ ಮಾರ್ಗಸೂಚಿ ಅನುಸರಿಸದವರ ವಿರುದ್ದ ಕಠಿಣ ಶಿಕ್ಷೆ ಹಾಗೂ ದಂಡ ಪ್ರಯೋಗ ಅನಿವಾರ್ಯ ಎಂದರು.

ಮುಸ್ಲಿಂ ಕಾನೂನು ಮಂಡಳಿಯಿಂದ ಮೇಲ್ಮನವಿ

ಲಖನೌ, ಸೆ.30 : ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ನ್ಯಾಯಾಲಯ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಸಿಬಿಐ ಕೋರ್ಟ್ ತೀರ್ಪಿನ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮಗೆ ಅನ್ಯಾಯವಾಗಿದ್ದು, ಉನ್ನತ ಕೋರ್ಟ್ ನಲ್ಲಿ ಪ್ರಶ್ನಿಸಬೇಕು ಎಂದಿದ್ದಾರೆ. ಮುಸ್ಲಿಮರ ಪರವಾಗಿ ಅಯೋಧ್ಯೆ ವಿಷಯದ ಬಗ್ಗೆ ಕಾನೂನು ಹೋರಾಟದ ನೇತೃತ್ವ ವಹಿಸಿದ ಪ್ರಮುಖರಲ್ಲಿ ಒಬ್ಬರಾದ ಬಾಬರಿ ಮಸೀದಿ ಕ್ರಿಯಾ ಸಮಿತಿ ಸಂಚಾಲಕ ಜಫಾರ್ಯಾಬ್ ಜಿಲಾನಿ, ಸಿಬಿಐ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಿದ್ದಾರೆ. ``ತೀರ್ಪು ಸಂಪೂರ್ಣವಾಗಿ ತಪ್ಪಾಗಿದೆ. ಇದು ಸಾಕ್ಷ್ಯವನ್ನು ಆಧರಿಸಿಲ್ಲ ಅಥವಾ ಕಾನೂನಿನ ಪ್ರಕಾರವೂ ಇಲ್ಲ. ಇದು ದೇಶದ ಅಪರಾಧ ನ್ಯಾಯ ವ್ಯವಸ್ಥೆಗೆ ವಿರುದ್ಧವಾಗಿದೆ. ಸಾಕ್ಷ್ಯಾಧಾರದ ಕೊರತೆಯ ಬಗ್ಗೆ ನ್ಯಾಯಾಲಯದ ಅವಲೋಕನ ತಪ್ಪಾಗಿದೆ. ಆರೋಪ ಸಾಬೀತುಪಡಿಸಲು ಅಪಾರ ಪುರಾವೆಗಳಿವೆ. ಈ ತೀರ್ಪನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗುತ್ತೇವೆ'' ಎಂದು ಜಿಲಾನಿ ಹೇಳಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‍ಬಿ) ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ.

ತೀರ್ಪು ದುರದೃಷ್ಟಕರ : ಸಿದ್ದರಾಮಯ್ಯ

ಬೆಂಗಳೂರು, ಸೆ.30 : ಬಾಬರಿ ಮಸೀದಿ ಧ್ವಂಸ ಪ್ರಕರಣದ 32 ಆರೋಪಿಗಳನ್ನು ಖುಲಾಸೆಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಲಯ 2019ರ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಸಂವಿಧಾನದ ಆಶಯಗಳನ್ನು ಗಮನಕ್ಕೆ ತೆಗೆದುಕೊಂಡ ಹಾಗೆ ಕಾಣುತ್ತಿಲ್ಲ. ‘ಬಾಬರಿ ಮಸೀದಿ ಧ್ವಂಸ ನೆಲದ ಕಾನೂನಿಗೆ ವಿರುದ್ಧವಾದ ಕೃತ್ಯ' ಎಂದು 2019 ನವಂಬರ್ 9ರ ಸುಪ್ರೀಂ ಕೋರ್ಟ್ ತೀರ್ಪು ಹೇಳಿದೆ. ಈಗ ಸಿಬಿಐ ವಿಶೇಷ ನ್ಯಾಯಾಲಯ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಬಾಬರಿ ಮಸೀದಿ ಧ್ವಂಸ ಮಾಡಿದವರು ಯಾರೆಂಬ ಪ್ರಶ್ನೆ ಹಾಗೆಯೇ ಉಳಿದಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಬಾಬರಿ ಮಸೀದಿ ಧ್ವಂಸ ಮಾಡಿದವರನ್ನು ಶಿಕ್ಷೆಗೊಳಪಡಿಸುವಂತೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಯುಪಿಎಸ್‍ಸಿ ಪರೀಕ್ಷೆ ಮುಂದೂಡಲ್ಲ

ನವದೆಹಲಿ, ಸೆ.30 : ಕೋವಿಡ್ ಸಾಂಕ್ರಾಮಿಕ ಮತ್ತು ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ನಡೆಸುವ 2020ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆ ಮುಂದೂಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಅ.4ಕ್ಕೆ ನಿಗದಿಯಾಗಿರುವ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೋರಿ ಯುಪಿಎಸ್ ಸಿಯ 20 ಆಕಾಂಕ್ಷಿಗಳು ವಕೀಲರ ಮೂಲಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪರೀಕ್ಷೆ ಮುಂದೂಡಲು ನಿರಾಕರಿಸಿದೆ. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅರ್ಜಿದಾರರು ನಾಗರಿಕ ಸೇವೆಗಳ ಪರೀಕ್ಷೆಯನ್ನು ಎರಡು ಅಥವಾ ಮೂರು ತಿಂಗಳು ಮುಂದೂಡಬೇಕೆಂದು ಕೋರಿದ್ದರು. ಪ್ರವಾಹ / ನಿರಂತರ ಮಳೆ ಮತ್ತು ಕೊರೋನಾ ಕಡಿಮೆಯಾದ ನಂತರ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದ್ದರು.

ಸಾಮೂಹಿಕ ಅತ್ಯಾಚಾರ : ಎಸ್‍ಐಟಿ ತನಿಖೆ

ಲಕ್ನೋ, ಸೆ.30 : ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಸಾವಿನ ಬಗ್ಗೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಈ ಘಟನೆ ಕುರಿತು ವಿಶೇಷ ತನಿಖಾ ತಂಡ (ಎಸ್‍ಐಟಿ) ತನಿಖೆ ನಡೆಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ. ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಮೂವರು ಸದಸ್ಯರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಅಲ್ಲದೇ ಏಳು ದಿನಗಳಲ್ಲಿ ತನಿಖಾ ವರದಿಯನ್ನು ಸಲ್ಲಿಸುವ ಸೂಚಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ಹತ್ರಾಸ್ ಸಾಮೂಹಿಕ ಅತ್ಯಾಚಾರ ಘಟನೆಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ಘಟನೆಯ ತನಿಖೆಗಾಗಿ ಎಸ್‍ಐಟಿ ರಚಿಸಲಾಗಿದೆ. ಮುಂದಿನ 7 ದಿನಗಳಲ್ಲಿ ತಂಡವು ವರದಿಯನ್ನು ಸಲ್ಲಿಸುತ್ತದೆ. ಅಲ್ಲದೇ ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.

ಸಿಡಿಲು ಬಡಿದು 38 ಮೇಕೆಗಳ ಸಾವು

ಕಲಬುರಗಿ, ಸೆ.30 : ಸಿಡಿಲು ಬಡಿದು 38 ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಬುಧವಾರ ಮಧ್ಯಾಹ್ನ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಳ್ಳೂರು ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಸತೀಶ ಹುಗ್ಗೆಳ್ಳಿ, ಬಾಬು ಗುತ್ತಿ, ದಶರಥ ಗುತ್ತಿ, ಅಮೃತ ದೊಡನೋರ, ಗುಂಡಪ್ಪ, ವಿಠಲ ಗಡ್ಡಿಮನಿ, ತುಳಜಪ್ಪ ಅವರಿಗೆ ಸೇರಿದ್ದ 38 ಮೇಕೆಗಳು ಮೃತಪಟ್ಟಿವೆ ಎನ್ನಲಾಗಿದೆ. ಮೇಕೆಗಳನ್ನು ಮೇಯಿಸಲು ಅಡವಿಗೆ ಹೋದಾಗ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಮೇಕೆಗಳು ಕೊನೆಯುಸಿರೆಳೆದಿವೆ.

ಕುವೈತ್ ದೊರೆ ನಿಧನ

ನವದೆಹಲಿ, ಸೆ.30 : ಕುವೈತ್ ದೊರೆ (ಅಮೀರ್) ಸಬಾಹ್ ಅಲ್ ಅಹಮದ್ ಅಲ್ ಜಾಬೀರ್ ಅಲ್ ಸಬಾಹ್ (91) ಅಮೆರಿಕಾದ ಆಸ್ಪತ್ರೆಯಲ್ಲಿ ನಿಧನರಾದರು. ಶೇಖ್ ಜಾಬೀರ್ ಅಲ್ ಸಬಾಹ್ ಅವರ ನಿಧನ ನಂತರ ಸಬಾಹ್ ಅಲ್ ಅಹಮದ್ 2006ರ ಜನವರಿಯಲ್ಲಿ ಕುವೈತ್ ನ ದೊರೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಕುವೈತ್ ದೊರೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕುವೈತ್ ತನ್ನ ನಾಯಕನನ್ನು ಕಳೆದುಕೊಂಡಿದೆ. ಭಾರತ ತನ್ನ ಆತ್ಮೀಯ ಮಿತ್ರನನ್ನು, ಜಗತ್ತು ಒಬ್ಬ ಮುತ್ಸದ್ದಿಯನ್ನು ಕಳೆದುಕೊಂಡಿದ್ದು ಅವರು ಕುವೈತ ನಲ್ಲಿದ್ದ ಭಾರತೀಯರ ಪರ ಕಾಳಜಿ ಹೊಂದಿದ್ದರು. ಎರಡೂ ರಾಷ್ಟ್ರಗಳ ಸಂಬಂಧ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಂದು ಹೇಳಿದ್ದಾರೆ.