ಮಡಿಕೇರಿ, ಸೆ. 30: ಪ್ರಸಕ್ತ (2020-21) ಸಾಲಿನಲ್ಲಿ ರಾಜ್ಯದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ನದಿಗಳಲ್ಲಿ ಪ್ರವಾಹ ಉಂಟಾಗಿ ನದಿ ಪಾತ್ರದ ಹಲವು ಕಡೆ ಕೃಷಿ ಜಮೀನುಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಮರಳು ಸಂಗ್ರಹವಾಗಿರುತ್ತದೆ. ಈ ಜಮೀನುಗಳನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಮರಳನ್ನು ತೆರವುಗೊಳಿಸುವ ಅವಶ್ಯಕತೆ ಇರುತ್ತದೆ. ಪ್ರವಾಹದಿಂದ ಕೃಷಿ ಜಮೀನುಗಳಲ್ಲಿ ಸಂಗ್ರಹವಾಗಿರುವ ಮರಳನ್ನು ಡಿ. 31 ರವರೆಗೆ ವಿಲೇವಾರಿ ಮಾಡಲು ಪಟ್ಟಾ ಜಮೀನುಗಳ ಮಾಲೀಕರುಗಳಿಗೆ ಸರ್ಕಾರ ಅನುಮತಿ ನೀಡಿದೆ.

ಪಟ್ಟಾ ಜಮೀನಿನಲ್ಲಿ ಶೇಖರಣೆ ಗೊಂಡಿರುವ ಮರಳು ನಿಕ್ಷೇಪದ ಛಾಯಾಚಿತ್ರ, ಆರ್‍ಟಿಸಿ ಹಾಗೂ ಭಾವಚಿತ್ರದೊಂದಿಗೆ ಜಮೀನಿನ ಮಾಲೀಕರುಗಳು ಹಿರಿಯ ಭೂ ವಿಜ್ಞಾನಿಗಳ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಡಿಕೇರಿ ಇವರ ಕಚೇರಿಗೆ ನವೆಂಬರ್, 30 ರೊಳಗೆ ಮನವಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ: 08272-228523ನ್ನು ಸಂಪರ್ಕಿಸ ಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ರೇಷ್ಮಾ ಅವರು ತಿಳಿಸಿದ್ದಾರೆ.ಕಳೆದ 2018ರಿಂದ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಭೂಕುಸಿತಗಳು ಸಂಭವಿಸುತ್ತಿದ್ದು, ಸಾಕಷ್ಟು ಸಾವು - ನೋವು, ಕಷ್ಟ-ನಷ್ಟಗಳು ಸಂಭವಿಸಿವೆ. ಮನೆ, ತೋಟಗಳು ಮಣ್ಣಿನಡಿ ಸಿಲುಕಿ ಕೊಚ್ಚಿ ಹೋಗಿದ್ದರೆ, ಇತ್ತ ಕೃಷಿ ಭೂಮಿಗಳಾದ ಗದ್ದೆಗಳಲ್ಲಿ ಮರ, ಮಣ್ಣು, ಮರಳು ಶೇಖರಣೆಗೊಂಡು ಕೃಷಿ ಮಾಡಲಾಗದ (ಮೊದಲ ಪುಟದಿಂದ) ಪರಿಸ್ಥಿತಿ ನಿರ್ಮಾಣವಾಗಿದೆ. ಜಮೀನಿನಲ್ಲಿ ತುಂಬಿ ಕೊಂಡಿರುವ ಮರ, ಮರಳನ್ನು ತೆರವುಗೊಳಿಸದ ಹೊರತು ಯಾವುದೇ ಚಟುವಟಿಕೆನಡೆಸಲು ಸಾಧ್ಯವಿಲ್ಲದಂತಾಗಿದೆ. ಹೀಗಾಗಿ 2018ರಲ್ಲಿ ನಷ್ಟಕ್ಕೊಳಗಾದ ರೈತರು ಈಗಲೂ ಭೂಮಿಯನ್ನು ಹಾಗೇ ಬಿಟ್ಟಿದ್ದು, ಏನೂ ಬೆಳೆಯಲಾಗದೆ ಸಂಕಷ್ಟದಲ್ಲಿದ್ದಾರೆ.

ಜಮೀನಿನಲ್ಲಿರುವ ಮರ ಹಾಗೂ ಮರಳನ್ನು ತೆರವುಗೊಳಿಸಲು ರೈತರಿಗೆ ಅವಕಾಶ ನೀಡಬೇಕೆಂದು ಕಳೆದ ಎರಡು ವರ್ಷಗಳಿಂದಲೂ ರೈತರು ಆಗ್ರಹಿಸುತ್ತಲೇ ಬಂದಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಸಾಕಷ್ಟು ಬಾರಿ ಸರಕಾರದ ಗಮನ ಸೆಳೆದಿದ್ದಾರೆ. ಅಲ್ಲದೆ ಕಳೆದ ವರ್ಷ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲೆಗೆ ಬಂದ ಸಂದರ್ಭ ಅವರ ಸಮ್ಮುಖದಲ್ಲೇ ಈ ಬಗ್ಗೆ ಶಾಸಕರುಗಳು ಗಮನ ಸೆಳೆದಿದ್ದು, ರೈತರಿಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗಳು ಕೂಡ ಆದೇಶಿಸಿದ್ದರು. ಆದರೂ ಇದು ಫಲಪ್ರದವಾಗಿರಲಿಲ್ಲ. ಇತ್ತೀಚೆಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಸಮಕ್ಷಮ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮರ-ಮರಳು ತೆಗೆಯಲು ಅಡ್ಡಿಪಡಿಸಬಾರದೆಂದು ಸೂಚನೆ ನೀಡಿದ್ದರು.

ಆದರೆ ಇದೀಗ 2020-21ನೇ ಸಾಲಿನಲ್ಲಿ ಉಂಟಾದ ಮಳೆ ಯಿಂದಾಗಿ ನದಿ ಪಾತ್ರದ ಕೃಷಿ ಜಮೀನಿನಲ್ಲಿ ಸಂಗ್ರಹವಾಗಿರುವ ಮರಳನ್ನು ತೆಗೆಯಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಎರಡು ವರ್ಷಗಳ ಮರಳು ಗದ್ದೆಯಲ್ಲಿ ಹಾಗೆಯೇ ಉಳಿದಿವೆ. ಇವುಗಳ ವಿಲೇವಾರಿಗೂ ಅವಕಾಶ ನೀಡ ಬೇಕೆಂಬದು ರೈತರ ಆಗ್ರಹವಾಗಿದೆ.