ನಮ್ಮ ಸುತ್ತಲು ಹರಡಿ ಕೊಂಡಿರುವ ಕಾಫಿ.... ಬೆಳಗ್ಗಿನ ಆಹ್ಲಾದದೊಂದಿಗೆ ಘಮಘಮಿಸುತ್ತಾ ಮೈಮನ ತಣಿಸುವ ನಮ್ಮ ಜೀವನದ ಭಾಗವೇ ಆಗಿರುವ ಕಾಫಿಗೆ ಇಂದು ವಿಶೇಷ ದಿನ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಕಾಫಿ ದಿನವನ್ನಾಗಿ ಅಕ್ಟೋಬರ್ 1 ನ್ನು ಆಚರಿಸುತ್ತಾ ಆ ಕಾಫಿ ಎಂಬ ಸುಂದರ ಪೇಯವನ್ನು ಗುರುತಿಸುತ್ತಾ, ಕಾಫಿಗೆ ಮಾನ್ಯತೆಯೊಂದಿಗೆ ಘನತೆಯನ್ನೂ ತಂದುಕೊಡುವ ದಿನ ಇಂದು. ಕೊಡಗಿನ ಆರ್ಥಿಕತೆ ನಿಂತಿರುವುದೇ ಕಾಫಿ ಕೃಷಿ ಮೇಲೆ, ಕಾಫಿಗೆ ಬೆಲೆಯಿಲ್ಲ, ಕಾಫಿ ಬೆಳೆಯಿಲ್ಲ, ಕಾಫಿಗೆ ಕಾರ್ಮಿಕರಿಲ್ಲ, ಕಾಫಿಗೆ ಗುಣಮಟ್ಟವಿಲ್ಲ ಎಂಬೆಲ್ಲಾ ಕೊರಗುಗಳ ನಡುವೇ ಕೃಷಿಕರ ಜೀವನವನ್ನು ಹಸನಾಗಿಸಿದ್ದು ಇದೇ ಕಾಫಿ. ಕಾಫಿಗೆ ಉತ್ತಮ ಬೆಲೆ ದೊರಕಿದಾಗ, ಗಿಡದಲ್ಲಿ ಬಂಪರ್ ಬೆಳೆ ಬಂದಾಗ ಹೆಚ್ಚಿನವರು ಕಾಫಿಯನ್ನು ಹೊಗಳಲಿಲ್ಲ. ಕಾಫಿಯಿಂದಾಗಿ ನಾನು ಸಮೃದ್ಧಿ ಕಂಡೆ ಎಂದು ಅಭಿಮಾನ ಮರೆಯಲಿಲ್ಲ. ಹೀಗಾಗಿಯೇ ವ್ಯತಿರಿಕ್ತ ಕಾರಣಗಳಿಂದಾಗಿ ಕಾಫಿ ಕೈಕೊಟ್ಟಾಗ ಕಾಫಿಯನ್ನೇ ದೂರುವ ಹಕ್ಕು ಬೆಳೆಗಾರನಿಗಿಲ್ಲ ಎನ್ನಬಹುದು. ಕಾಫಿ ಪೇಯ ಹಲವರ ಪಾಲಿನ ಪ್ರೀತಿಗೆ, ಮಮತೆಗೆ, ಬಾಂಧವ್ಯಕ್ಕೆ ಕಾರಣವಾಗಿದೆ. ಒಂದು ಕಪ್ ಕಾಫಿ ಅನೇಕ ಸಂಬಂಧಗಳನ್ನು ಬೆಸೆದಿದೆ. ಕಾಫಿ ಮೂಟೆಗಳು ಬಂಗಲೆಗಳ ನಿರ್ಮಾಣಕ್ಕೆ ಆಧುನಿಕ ವಾಹನ ಗಳ ಸೌಕರ್ಯಕ್ಕೆ, ವಿದೇಶಗಳ ಸುತ್ತಾಟಕ್ಕೆ, ಎಲ್ಲಾ ರೀತಿಯ ಮೋಜುಮಸ್ತಿಗೆ, ಶ್ರೀಮಂತಿಕೆಗೆ ಕಾಫಿ ಮೂಲಾಧಾರ. ನಮ್ಮೆಲ್ಲಾ ಸುಖಗಳಿಗೆ ಕಾರಣವಾಗಿರುವ ಪ್ರೀತಿಯ ಕಾಫಿಯನ್ನು ನಾವೆಷ್ಟು ಪ್ರೀತಿಸಿದ್ದೇವೆ ? ಕಾಫಿ ಎಂಬ ಕಪ್ಪು ಬೆಡಗಿ ತನ್ನ ಅಂತರಂಗದ ಮಾತನ್ನು ಆಡುವ ಶಕ್ತಿ ಹೊಂದಿದ್ದರೆ ನಮ್ಮನ್ನು ಹೇಗೆಲ್ಲಾ ದೂಷಿಸುತ್ತಿತ್ತೋ ಏನೋ. ಗಮನಿಸಿ ನೋಡಿ, ಕಾಫಿ ಬೆಳೆಗಾರರಿಗೆ ತಮ್ಮ ಕಾಫಿಗೆ ಸೂಕ್ತ ಮಾರುಕಟ್ಟೆ ಬೇಕು. ಕಾಫಿ ಖರೀದಿಯಾಗಬೇಕು.

ಆದರೆ, ತಾವು ಮಾತ್ರ ಕಾಫಿ ಕುಡಿಯಲು ಸಿದ್ದರಿಲ್ಲ, ಕಾಫಿ ಬೆಳೆಗಾರರಾಗಿಯೂ ಕಾಫಿಯ ಬಗ್ಗೆ ಒಳ್ಳೇ ಮಾತನಾಡಲು ಸಿದ್ದರಿಲ್ಲ. !

ಸಮಾರಂಭಗಳಲ್ಲಿ. ಕಾರ್ಯಕ್ರಮಗಳಲ್ಲಿ, ಬಂಧು, ಮಿತ್ರರ ಮನೆಯಲ್ಲಿ ಕಾಫಿ ಬದಲಿಗೆ ಹಲವರ ಆದ್ಯತೆ ಚಹಾ. ನಮಗೇ ಕಾಫಿ ಪೇಯವಾಗಿ ಬೇಡದೇ ಹೋದರೆ ಅದೇ ಕಾಫಿಯನ್ನು ಬೇರೆಯವರು ಪ್ರೀತಿಸಲಿ ಎಂಬ ಬಯಕೆ ಎಷ್ಟರ ಮಟ್ಟಿಗೆ ಸರಿ ಹೋದೀತು ? ಕಾಫಿ ಬೆಳೆಸುವವರೇ ಕಾಫಿ ಕುಡಿಯದೇ ಹೋದರೆ, ಕಾಫಿಯ ಆಂತರಿಕ ಮಾರುಕಟ್ಟೆ ಹೇಗೆ ವೃದ್ಧಿಯಾದೀತು ? ಸಂಸ್ಕøತಿಯನ್ನು ಪ್ರೀತಿಸುವ ಕೊಡಗಿನ ಜನರಾಗಿ ನಾವೇ ನಮ್ಮದೇ ಕಾಫಿಯನ್ನು ಸಂಸ್ಕøತಿಯನ್ನಾಗಿ ನೋಡುತ್ತಿಲ್ಲ ಯಾಕೆ ? ಊಟಿ ಹೇಳಿ-ಕೇಳಿ ತಮಿಳುನಾಡಿನ ಗಿರಿಧಾಮ. ಊಟಿಯಲ್ಲಿ ಚಹಾ ಬೆಳೆಯಲಾಗುತ್ತದೆ. ಎಲ್ಲಿ ನೋಡಿದರೂ ಟೀ ಅಂಗಡಿಗಳು, ಕಾಫಿ ಬೇಕೆಂದರೆ ದೂರದೂರ ಅಂಗಡಿ ಹುಡುಕಬೇಕು. ತಾವು ಬೆಳೆಸುವ ಬೆಳೆಯಿಂದ ತಯಾರಾಗುವ ಚಹಾ ಮೇಲೆ ಅವರ ಪ್ರೀತಿ ಅಪಾರ. ಆದರೆ, ನಮ್ಮಲ್ಲಿ ಕಾಫಿ ಪಾಪದ ಕೂಸು ! ಕಾಫಿ ಎಂಬ ಕಪ್ಪು ಸುಂದರಿ ಮೇಲೆ ಬೆಳ್ಳಗಿನ ಹಾಲು ಸುರಿದಾಗ ಸಿಗುವ ಸ್ವಾದ ಅಮೃತ ಸಮಾನ, ಹೀಗಾಗಿಯೇ ವಿಶ್ವವ್ಯಾಪಿ ಕಾಫಿಗೆ ದೊರಕಿರುವ ಮಾನ್ಯತೆ ಚಹಾಕ್ಕೆ ದೊರಕಿಲ್ಲ.

ಹಿತ್ತಲ ಗಿಡ ಮದ್ದಲ್ಲ ಸರಿ.. ಹಿತ್ತಲ ಗಿಡದ ಕಾಫಿ ಮದ್ದಲ್ಲ ಯಾಕೆ ?

ಕಾಫಿಯ ಅಚ್ಚರಿಗಳು: ಹೆಂಡತಿ ಕಾಫಿ ಚೆನ್ನಾಗಿ ತಯಾರಿಸಿಲ್ಲ ಎಂದಾದರೆ ಆಕೆಯನ್ನು ವಿಚ್ಚೇದಿಸುವ ಹಕ್ಕು ಪುರಾತನ ಕಾಲದಲ್ಲಿ ಅರಬ್ ದೇಶಗಳಲ್ಲಿ ಇತ್ತೆನ್ನಲಾಗಿದೆ. ಪುಣ್ಯ ಈ ನಿಯಮ ನಮ್ಮಲ್ಲಿ ಇಲ್ಲ, ಹಾಗಿದ್ದರೆ ಅದೆಷ್ಟು ಮನೆಗಳಲ್ಲಿ ವಿಚ್ಚೇದನವಾಗುತ್ತಿತ್ತೋ ಎಂಬುದು ಹಾಸ್ಯವಂತೂ ಅಲ್ಲ. 1500 ರಲ್ಲಿ ಇಥೋಪಿಯ ದೇಶದಲ್ಲಿ ಆಡು ಮೇಯಿಸುವವನೋರ್ವ ಕಾಫಿ ಹಣ್ಣು ತಿಂದ ತನ್ನ ಆಡು ಅನಂತರ ಅತ್ಯಂತ ಸಕ್ರಿಯವಾಗಿ ರಾತ್ರಿ ಕೂಡ ನಿದ್ರಿಸದೇ ಇರುವುದನ್ನು ಕಂಡುಕೊಂಡ. ಈ ಕುತೂಹಲಕಾರಿ ವಿಚಾರವನ್ನು ಆತ ಗ್ರಾಮದ ಸನ್ಯಾಸಿಗಳಿಗೆ ತಿಳಿಸಿದ. ಸನ್ಯಾಸಿಗಳೂ ಇದನ್ನು ಗಮನಿಸಿ ತಾವೂ ಕಾಫಿ ಬೀಜದಿಂದ ಪಾನೀಯ ತಯಾರಿಸಿ ಕುಡಿದರು, ಏನಚ್ಚರಿ ? ಸನ್ಯಾಸಿಗಳ ಮೈಮನದಲ್ಲಿ ಹೊಸ ರೀತಿಯ ಉಲ್ಲಾಸ ಕಂಡುಬಂತು. ಈ ಪೇಯದ ಬಗ್ಗೆ ಸನ್ಯಾಸಿಗಳು ವಿಶ್ವವ್ಯಾಪಿ ವಿಚಾರ ಮುಟ್ಟಿಸಿದರು. ಹಾಗೇ ಕಾಫಿ ಜಗತ್ತಿನ ಎಲ್ಲೆಡೆ ತನ್ನ ಘಮ ಬೀರತೊಡಗಿತು.

ಕಾಫಿಯ ಮೂಲಹೆಸರು-ಕ್ಯಾವ. ಟರ್ಕಿಯಲ್ಲಿ ಅದು ಕೋಫಿ ಎಂದಾಯಿತು. ಇಂಗ್ಲೀಷ್‍ನಲ್ಲಿ ಕಾಫಿ ಎಂದಾಯಿತು, ಇಷ್ಟಕ್ಕೂ ಕಾಫಿಯ ನಿಜಾರ್ಥ ಏನು ಎಂದರೆ ವೈನ್ ಎಂಬ ಅರ್ಥವಿದೆ ! ಚಿಕ್ಕಮಗಳೂರಿನ ಸಂತ ಬಾಬಾ ಬುಡನ್ ಮೆಕ್ಕಾ ಯಾತ್ರೆಗೆಂದು ತೆರಳಿದ್ದ ಸಂದರ್ಭ ಯಾಮಾನ್ ಗ್ರಾಮದ ತೋಟದಲ್ಲಿ ಸಿಕ್ಕಿದ್ದ 7 ಕಾಫಿ ಬೀಜಗಳನ್ನು ತನ್ನ ಗಡ್ಡದಲ್ಲಿ ಅಡಗಿಸಿಕೊಂಡು ಭಾರತಕ್ಕೆ ಮರಳಿ 1670 ರಲ್ಲಿ ಚಿಕ್ಕಮಗಳೂರಿನ ಗಿರಿಯಲ್ಲಿ ಕಾಫಿ ಕೃಷಿ ಪ್ರಾರಂಭಿಸಿದರು. ತರುವಾಯ 1840 ರ ವೇಳೆಗೆ ಭಾರತದ ಮೊದಲ ಕಾಫಿ ತೋಟವೂ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿತ್ತು ಎಂದು ದಾಖಲೆಗಳು ತಿಳಿಸುತ್ತವೆ. ತೈಲ ಹೊರತು ಪಡಿಸಿದರೆ ಜಗತ್ತಿನಲ್ಲಿ ಅತ್ಯಧಿಕ ವಹಿವಾಟು ನಡೆಸುವ ಉತ್ಪನ್ನವೇ ಕಾಫಿ ಎಂಬುದು ಬೆಳೆಗಾರರ ಪಾಲಿಗೆ ಹೆಮ್ಮೆಯ ವಿಚಾರ. ನೀರು ಬಿಟ್ಟರೆ ಮನುಷ್ಯರು ಅತೀ ಹೆಚ್ಚು ಕುಡಿಯುವುದೇ ಕಾಫಿಯನ್ನು ಎನ್ನಲಾಗಿದೆ. ಐರಿಷ್ ದೇಶದಲ್ಲಿ ಕಾಫಿಗೆ ವಿಸ್ಕಿಯನ್ನು ಮಿಶ್ರ ಮಾಡಿಕೊಂಡಾಗ ತಯಾರಾಗುವುದೇ ಐರಿಷ್ ಕಾಫಿ. ಅಮೇರಿಕಾದಲ್ಲಿ ಹವಾಯಿ ಮತ್ತು ಕ್ಯಾಲಿಪೆÇೀರ್ನಿಯಾಗಳಲ್ಲಿ ಮಾತ್ರ ಕಾಫಿ ಬೆಳೆಸಲಾಗುತ್ತದೆ. 1932 ರಲ್ಲಿ ಬ್ರೆಜಿಲ್ ತನ್ನ ಕ್ರೀಡಾಪಟುಗಳನ್ನು ಲಾಸ್‍ಎಂಜಲೀಸ್ ಒಲಂಪಿಕ್ಸ್‍ಗೆ ಕಳುಹಿಸುವ ಸಂದರ್ಭ ಆರ್ಥಿಕ ಸಮಸ್ಯೆ ಕಾಡಿತ್ತು. ಆಗ ಕ್ರೀಡಾಳುಗಳ ಜತೆ ಹಡಗಿನಲ್ಲಿ ಕಾಫಿ ಮೂಟೆಗಳನ್ನು ತುಂಬಿ ಹಡಗು ಸಾಗುವ ದೇಶಗಳಲ್ಲಿ ಕಾಫಿಯನ್ನು ಮಾರಾಟ ಮಾಡುತ್ತಾ ಅದರಿಂದ ಬಂದ ಹಣದಲ್ಲಿ ಕ್ರೀಡಾಪಟುಗಳನ್ನು ಒಲಂಪಿಕ್ಸ್ ಗೆ ತಲುಪಿಸಲಾಯಿತು,. ಕಾಫಿ ಬೀಜ ತಿಂದ ಕಾಡುಬೆಕ್ಕು ವಿಸರ್ಜಿಸುವ ಹಿಕ್ಕೆಯಿಂದ ತಯಾರಾಗುವ ಇಂಡೋನೇಶ್ಯಾದ ಕಾಫಿ ಲುವಾಕ್ ಎಂಬ ಹೆಸರಿನ ಕಾಫಿಯೇ ಜಗತ್ತಿನ ಅತ್ಯಂತ ದುಬಾರಿ ಕಾಫಿ,. ಇದರ ಬೆಲೆ ಕೆಜಿಗೆ 25,000 ಮಾತ್ರ. 47 ವರ್ಷಗಳ ಹಿಂದೆ ಪ್ರಾರಂಭವಾದ ಸ್ಟಾರ್ ಬಕ್ಸ್ ಕಾಫಿ ಮಳಿಗೆ ಈವರೆಗೆ ಜಗತ್ತಿನಾದ್ಯಂತ 29,000 ಕಾಫಿ ಶಾಪ್ ಹೊಂದಿದೆ. ಪ್ರತೀ ದಿನ ಒಂದಲ್ಲ ಒಂದು ಕಡೆ ಕಾಫಿ ಶಾಪ್ ತೆರೆಯುತ್ತಿರುವ ಕಾಫಿ ಉದ್ಯಮ ಸಂಸ್ಥೆ ಇದಾಗಿದೆ. ಕಾಫಿ ಸೇವನೆಯಲ್ಲಿ ಭಾರತ 6 ನೇ ಸ್ಥಾನ ಪಡೆದಿದೆ. ಭಾರತದಲ್ಲಿ ಪ್ರತೀ ನಿತ್ಯ 150 ಲಕ್ಷ ಟನ್ ಹಾಲಿನ ಉತ್ಪಾದನೆಯಾಗುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಾಲು ಸೇವನೆ ಜಾಸ್ತಿಯಿದೆ. ನಗರ ಪ್ರದೇಶಗಳಲ್ಲಿ 10 ವರ್ಷಗಳಿಂದ ಕಾಫಿ ಸೇವನೆ ಅದರಲ್ಲಿಯೂ ಯುವಪೀಳಿಗೆಯಲ್ಲಿ ಹೆಚ್ಚಾಗುತ್ತಿದೆ. ಕಾಫಿ ಡೇ, ಕೊಡಗಿನ ಮೂಲದ ಎಸ್.ಎಲ್.ಎನ್.ನ ಲೆವಿಸ್ಟಾ, ಸ್ಟಾರ್ ಬಕ್ಸ್ ನಂಥ ಅನೇಕ ಕಾಫಿ ಶಾಪ್‍ಗಳ ಸಂಖ್ಯೆ ವೃದ್ಧಿಸುತ್ತಿರು ವುದು ಇದಕ್ಕೆ ಪ್ರಮುಖ ಕಾರಣ. ಕಾಫಿ ಶಾಪ್‍ಗಳು ಉದ್ಯಮ ವಹಿವಾಟು, ಮದುವೆ ಮಾತುಕತೆ, ವಿಚ್ಚೇದನ, ಗೆಳೆತನ, ರಾಜಕೀಯ ಮಾತುಕತೆ,ಪ್ರೀತಿ, ದ್ವೇಷ, ಸುಖ ಶೋಕದ ಮಾತಿಗೂ ಸಾಕ್ಷಿಯಾಗಿವೆ. ಈ ಮೂಲಕ ಕಾಫಿ ಕೇವಲ ಪಾನೀಯ ಮಾತ್ರವೇ ಅಲ್ಲ, ಅದು ಎಲ್ಲಾ ಸಂಬಂಧಗಳನ್ನು ಮೀರಿದ್ದು ಎಂಬುದು ನಿರೂಪಿತವಾಗಿದೆ.!

ಚಹಾ ರಸ್ತೆ ಬದಿಯಲ್ಲಿ ಸಾಮಾನ್ಯರ ಕೈಗೆಟಕುವ ಪಾನೀಯವಾಗಿದ್ದರೆ ಕಾಫಿಗೆ ಬೆಳೆಗಾರನಷ್ಟೇ ಗತ್ತು ಇದೆ. ಹೀಗಾಗಿಯೇ ಕಾಫಿ ತನ್ನದೇ ಆದ ಹೈಟೆಕ್ ಶಾಪ್‍ಗಳನ್ನು ಸೃಷ್ಟಿಸಿಕೊಂಡಿದೆ. ಎಲ್ಲಿಯಾದರೂ ಕಾಫಿಯ ಹಾಗೇ, ಐಷಾರಾಮಿ ಟೀ ಶಾಪ್‍ಗಳನ್ನು ನೋಡಿದ್ದೀರಾ ? ಅದುವೇ ಕಾಫಿಯ ವೈಭವ, ಪ್ರತಿಷ್ಟೆ ! ನಾವೇ ಬೆವರು ಸುರಿಸಿ ಪ್ರೀತಿಯ ನೀರೆರೆದು ಬೆಳೆಸುವ ಕಾಫಿಯನ್ನು ಬೇರೆಯವರು ಮಾರುಕಟ್ಟೆ ಮಾಡುತ್ತಾರೆ ಎಂದು ಚಿಂತಿಸಿಕೊಂಡು ಕೂರುವುದಕ್ಕಿಂತ ನಮ್ಮ ಮನೆಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಭೆಗಳಲ್ಲಿ ಕಾಫಿಯ ಸರಬರಾಜು ಕಡ್ಡಾಯ ಮಾಡಬೇಕು. ಮನೆಗೆ ಅತಿಥಿಗಳು ಬಂದಾದ ಟೀ ಕುಡಿತೀರಾ ಎಂಬುದರ ಬದಲಿಗೆ ಕಾಫಿ ಕೊಡುತ್ತೇನೆ ಎಂದು ಹೇಳಬೇಕು. ಚೆನ್ನಾಗಿ ಕಾಫಿ ತಯಾರಿಕೆಯಲ್ಲಿ ಯುವಪೀಳಿಗೆಯನ್ನು ಸಿದ್ದಗೊಳಿಸಬೇಕು. ಹೀಗಾದಾಗ ಕಾಫಿಗೆ ದೇಶದಲ್ಲಿಯೇ ಬೇಡಿಕೆ ಯಾಕೆ ದೊರಕಲಾರದು? ಇಂಥ ಕಾಫಿ ಸಂಸ್ಕøತಿಗೆ ಇಂದಿನಿಂದಲೇ ತಯಾರಾಗೋಣ. ಕೊಡಗಿನ ಸವಿ ಕಾಫಿಯ ಹಿನ್ನಲೆಯಲ್ಲಿ ಬೆಳೆಗಾರ ಕುಟುಂಬಗಳ ಶ್ರಮವಿದೆ. ಸಾವಿರಾರು ಕಾರ್ಮಿಕರ ಕಷ್ಟವಿದೆ. ಹೀಗಾಗಿಯೇ ಕಾಫಿ ಸದಾ ಶಕ್ತಿವರ್ಧಕವಾಗಿದೆ. ಘಮಘಮಿಸುವ ಘಮ್ಮತ್ತಿನ ಸ್ವಾದಿಷ್ಟ,. ಮನೆಯಂಗಳ ದಲ್ಲಿಯೇ ಬೆಳೆದ ನಮ್ಮದೇ ಕಾಫಿಯ ಸೇವನೆಯಲ್ಲಿರುವ ತೃಪ್ತಿ ಬೇರೆ ಯಾವ ಪಾನೀಯದಲ್ಲಿ ದೊರಕೀತು ಹೇಳಿ ? ಯೋಚಿಸಿ ಕಾಫಿ ದಿನದಂದು ಕಾಫಿಗೊಂದು ಚಿಯರ್ಸ್ ಹೇಳಿ! -ಅನಿಲ್ ಹೆಚ್. ಟಿ.