ಬೆಳಗಿನ ಕಾಫಿ ಕುಡಿಯುವುದೆಂದರೆ ಅದೇನೋ ಮಜಾ. ಕಾಫಿ ಪ್ರಿಯರ ಮನತಣಿಸುವ ಉತ್ಪನ್ನಗಳ ಬೇಡಿಕೆಯೇ ಅಪಾರ. ಅಂತರರಾಷ್ಟ್ರೀಯ ಕಾಫಿ ದಿನದ ಆರಂಭದ ಮಾಹಿತಿ ಇಲ್ಲದಿದ್ದರೂ ಅಕ್ಟೋಬರ್ 1ರಂದು ಅಂತರರಾಷ್ಟ್ರೀಯ ಕಾಫಿದಿನವನ್ನು ಆಚರಿಸಲಾಗುತ್ತಿದೆ. ಕರ್ನಾಟಕದ ಪ್ರಮುಖ ತೋಟದ ಬೆಳೆಯೊಂದಾದ ಕಾಫಿಯನ್ನು ಕೊಡಗಿನಲ್ಲೀಗ ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದೆ. 1947ರಲ್ಲಿ ಚೆಟ್ಟಳ್ಳಿಯಲ್ಲಿ ಕಾಫಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸೂಕ್ತವೆಂದು ಗುರುತಿಸಿ ಕಾಫಿ ಉಪ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಫಿನಾಡೆಂದೇ ಹೆಸರುಗಳಿಸಿರುವ ಕೊಡಗಿನಲ್ಲಿ ಇನ್ನೂ ಕಾಫಿ ಮ್ಯೂಸಿಯಂ ಸ್ಥಾಪನೆಯ ಕನಸು ನನಸಾಗಲಿಲ್ಲ.

1946ರಲ್ಲಿ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಆಗಿನ ಮೈಸೂರು ಸರಕಾರವು ಕಾಫಿ ಪ್ರಯೋಗ ಶಾಲೆಯೊಂದನ್ನು ಸ್ಥಾಪಿಸಿತು. ನಂತರದಲ್ಲಿ ಪ್ರಯೋಗ ಶಾಲೆಯನ್ನು ಕಾಫಿ ಮಂಡಳಿ ವಹಿಸಿಕೊಂಡು ಕೇಂದ್ರ ಕಾಫಿ ಸಂಶೋಧನಾ ಕೇಂದ್ರವನ್ನಾಗಿ ಪರಿವರ್ತಿಸಲಾಯಿತು. ಕಾಫಿ ಗಿಡದ ಪೋಷಣೆ, ಹಾಗೂ ರಕ್ಷಣೆಯೇ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿತ್ತು.

1947ರಲ್ಲಿ ಕೊಡಗಿನ ಕೇಂದ್ರ ಸ್ಥಾನವಾದ ಸೋಮವಾರಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಗ್ರಾಮದಲ್ಲಿರುವ ಚೆಟ್ಟಳ್ಳಿ ಎಂಬಲ್ಲಿ ಕಾಫಿ ಸಂಶೋಧನೆಯ ಕೇಂದ್ರಕ್ಕೆ ಸೂಕ್ತ ಸ್ಥಳವೆಂದು ಗುರುತಿಸಿ ಕಾಫಿ ಸಂಶೋಧನೆಯ ಉ¥ Àಕೇಂದ್ರವನ್ನು ಸ್ಥಾಪಿಸಲಾಯಿತು. ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ರೂಪಿಸಿ ರುವ ಕಾಫಿ ಬೆಳೆಗಳ ಹೊಸತಳಿಯ ವಿಧಾನವನ್ನು ದೊಡ್ಡ ಪ್ರಮಾಣದಲ್ಲಿ ರೂಪಿಸುವ ಕಾರ್ಯವನ್ನು ಮಾಡಲು ಈ ಕೇಂದ್ರ ಕಾರ್ಯ ನಿರ್ವಹಿಸ ತೊಡಗಿತು.

ಸುಮಾರು 300 ಎಕರೆ (1.20ಹೆಕ್ಟೇರ್) ವಿಸ್ತೀರ್ಣ ಹೊಂದಿರುವ ಚೆಟ್ಟಳ್ಳಿಯ ಕಾಫಿ ಸಂಶೋಧನ ಉಪಕೇಂದ್ರದಲ್ಲಿ 77 ಹೆಕ್ಟೇರ್ ಅರೆಬಿಕಾ ಹಾಗೂ 31 ಹೆಕ್ಟೇರ್‍ನಲ್ಲಿ ರೋಬಷ್ಟ ಬೆಳೆಯನ್ನು ಬೆಳೆಯಲಾಗಿದೆ. ಪ್ರಪಂಚದ ಎಲ್ಲಾ ಕಾಫಿ ತಳಿಗಳಿದ್ದು (ಜೀನ್ ಬ್ಯಾಂಕ್) ಇಲ್ಲಿ ತಳಿ ಅಭಿವೃದ್ಧಿ ಸಸ್ಯ ಶಾರೀರಿಕ ಕ್ರಿಯಾಶಾಸ್ತ್ರ, ಬೇಸಾಯ ಶಾಸ್ತ್ರ, ಮಣ್ಣು ವಿಜ್ಞಾನ ಮತ್ತು ಪರೀಕ್ಷಾ ವಿಭಾಗ, ರೋಗ ಹಾಗೂ ಕೀಟಶಾಸ್ತ್ರವಿಭಾಗ, ವಿವಿಧ ರೋಗಗಳ ಬಗ್ಗೆ ಸಂಶೋಧನೆ ಹಾಗೂ ಪರಿಹಾರ ವಿಭಾಗವಿದ್ದು, ನಿತ್ಯವೂ ಸಂಶೋಧನೆಗಳು ನಡೆಯುತ್ತಿವೆ. ವರ್ಷ ಪೂರ್ತಿ ಕೊಡಗಿನ ನಾನಾ ಕಡೆಗಳಲ್ಲಿ ಕಾಫಿಗಿಡಗಳಲ್ಲಿ ಕಂಡುಬರುವ ಕೀಟಗಳ ಬಗ್ಗೆ ರೋಗಗಳ ಬಗ್ಗೆ ಮಾಲೀಕರು ಕೈಗೊಳ್ಳಬೇಕಾದ ರಕ್ಷಣಾಕ್ರಮಗಳ ಬಗ್ಗೆ ಮಾಹಿತಿ ನೀಡುವ ಹಾಗೂ ಕಾಫಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ಬೆಳೆಗಾರರಿಗೆ ಮಾಹಿತಿ ಕಾರ್ಯಗಾರವನ್ನೆಲ್ಲ ನುರಿತ ಕಾಫಿ ಸಂಶೋಧಕರಿಂದ ನೀಡಲಾಗುತ್ತಾ ಬರುತ್ತಿದೆ.

ಕೊಡಗಿನ ಕೆಲವೆಡೆ ಕಾಫಿಮಂಡಳಿಗಳು ಕಾರ್ಯನಿರ್ವಹಿಸುತ್ತಿದ್ದರೂ, ಕಾಫಿ ಸಂಶೋಧನಾ ಕೇಂದ್ರವಿರುವುದು ಚೆಟ್ಟಳ್ಳಿಯಲ್ಲಿ ಮಾತ್ರ. ಇಲ್ಲಿ ಕಾಫಿ ಸಂಶೋಧನಾ ಕೇಂದ್ರಕ್ಕೆ ಬೃಹತ್ ಜಾಗ, ಕಟ್ಟಡ ವ್ಯವಸ್ಥೆ, ಕಾಫಿ ತೋಟಗಳಲ್ಲಿ ಬಳಸಲ್ಪಡುವ ಯಂತ್ರೋಪಕರಣಗಳು, ಉಳಿಯಲು ಗೆಸ್ಟ್ ಹೌಸ್, ನಾನಾ ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ಕಾಫಿ ಸಂಶೋದನಾ ಅಧಿಕಾರಿಗಳು, ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಾಫಿ ಬೀಜದಿಂದ ಗಿಡವಾಗಿ ಬೆಳೆದು ಫಸಲು ನೀಡಿ ಕುಡಿಯಲು ಕಾಫಿ ತಯಾರಾಗುವವರೆಗಿನ ಪ್ರಾತ್ಯಕ್ಷಿಕೆಗಳೆಲ್ಲ ಚೆಟ್ಟಳ್ಳಿಯ ಕಾಫಿ ಸಂಶೋಧನೆಯ ಉಪಕೇಂದ್ರದಲ್ಲೆ ಇವೆ.

ಚೆಟ್ಟಳ್ಳಿಯ ಕಾಫಿ ಸಂಶೋಧನಾಕೇಂದ್ರ ಮಡಿಕೇರಿಯಿಂದ 16ಕಿ.ಮಿ, ಸುಂಟಿಕೊಪ್ಪದಿಂದ 14 ಕಿ.ಮಿ. ಸಿದ್ದಾಪುರದಿಂದ 14 ಕಿ.ಮೀ ದೂರದಲ್ಲಿದೆ. ಅಂದರೆ ಕೇವಲ 20 ನಿಮಿಷಗಳ ಪ್ರಯಾಣ ಮಾತ್ರ. ಮಡಿಕೇರಿಯಿಂದ ದುಬಾರೆ ಹಾಗೂ ಇನ್ನಿತರ ಪ್ರದೇಶಗಳಿಗೆ ಅದೆಷ್ಟೋ ಪ್ರವಾಸಿಗರು ನಿತ್ಯವೂ ತೆರಳುತಿದ್ದು ಚೆಟ್ಟಳ್ಳಿಯಲ್ಲಿ ಕಾಫಿ ಮ್ಯೂಸಿಯಂ ಸ್ಥಾಪನೆಯಾದರೆ ಅದನ್ನು ನೋಡಿಯೇ ತೆರಳುವರು.

ಹಲವು ವರ್ಷಗಳ ಹಿಂದಿನಿಂದಲೇ ಚಿಕ್ಕಮಂಗಳೂರಿನಲ್ಲಿ ಸ್ಥಾಪನೆ ಗೊಂಡಂತ ಹೈಟೆಕ್ ಕಾಫಿ ಮ್ಯೂಸಿಯಂನಂತೆ ಕಾಫಿ ನಾಡಾದ ಕೊಡಗಿನಲ್ಲೂ ಕಾಫಿ ಮ್ಯೂಸಿಯಂನ್ನು ಸ್ಥಾಪಿಸಲು ಸೂಕ್ತ ಜಾಗವನ್ನು ಪರಿಶೀಲಿಸುತ್ತಿದ್ದಾಗ ಚೆಟ್ಟಳ್ಳಿಯ ಕಾಫಿ ಉಪ ಸಂಶೋಧÀನಾ ಕೇಂದ್ರವೇ ಸೂಕ್ತ ಎಂಬ ಬಗ್ಗೆ ಹಲವು ವರ್ಷಗಳ ಹಿಂದೆಯೇ ಕಾಫಿ ಮಂಡಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.

ಕೊಡಗಿನ ಕಾಫಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿಯ ಬೇಕೆಂದರೆ ಚೆಟ್ಟಳ್ಳಿಯ ಕಾಫಿ ಉಪ ಸಂಶೋಧನ ಕೇಂದ್ರಕ್ಕೆ ಬಂದು ಮಾಹಿತಿ ಪಡೆಯಬೇಕು. ಇವೆಲ್ಲವಕ್ಕೂ ಸೂಕ್ತ ಇಲ್ಲಿನ ಕಾಫಿ ಉಪ ಸಂಶೋಧನ ಕೇಂದ್ರ. ಆದ್ದರಿಂದ ಚೆಟ್ಟಳ್ಳಿಯ ಕಾಫಿ ಉಪ ಸಂಶೋಧನ ಕೇಂದ್ರದಲ್ಲೆ ಕಾಫಿ ಮ್ಯೂಸಿಯಂ ಸ್ಥಾಪನೆಯಾಗಲಿ ಎಂಬುದು ಕೊಡಗಿನ ಕಾಫಿ ಬೆಳೆಗಾರರ ಆಶಯ ಕೂಡ. ಮಡಿಕೇರಿಯಲ್ಲಿ ಹಾಗೂ ದಕ್ಷಿಣ ಕೊಡಗಿನ ಕಾಫಿ ಮ್ಯೂಸಿಯಂ ಸ್ಥಾಪನೆಗೆ ಒತ್ತಾಯ ಕೇಳಿ ಬಂದ ಮಾಹಿತಿ ಇದೆ.

ದೇಶ ವಿದೇಶದವರು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಕೊಡಗಿನ ಕಾಫಿಯ ಕುರಿತು ಖುಷಿಪಟ್ಟು ಇನ್ನಷ್ಟು ಅಭಿವೃದ್ಧಿ ಯಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ. ಇಲ್ಲಿಯೇ ಮ್ಯೂಸಿಯಂ ಆದರೆ ಅಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದ ಈ ಕೇಂದ್ರ ಮತ್ತೆ ಪ್ರಸಿದ್ಧಿ ಹೊಂದುವ ಸಾಧ್ಯತೆ ಇದೆ.

-ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ.