ಕಣಿವೆ/ಕುಶಾಲನಗರ, ಸೆ. 30. ಕೊಡಗು ಜಿಲ್ಲೆಯ ಮುಖ್ಯ ಪ್ರವಾಸೀ ತಾಣಗಳಲ್ಲಿ ಒಂದಾದ ದುಬಾರೆ ಸಾಕಾನೆ ಶಿಬಿರವನ್ನು ತಾ. 1 ರಿಂದ (ಇಂದಿನಿಂದ) ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಕುಶಾಲನಗರದ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದುಬಾರೆ ತೀರಕ್ಕೆ ಧಾವಿಸುವ ಪ್ರವಾಸಿಗರು ಅಥವಾ ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ. ಸಾಕಾನೆ ಶಿಬಿರಕ್ಕೆ ಪ್ರವೇಶಿಸುವಾಗ ಸ್ಯಾನಿಟೈಸ್‍ಗೆ ಒಳಪಡಬೇಕು. ಟೆಂಪರೇಚರ್ ಪರೀಕ್ಷೆಗೆ ಒಳಪಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಕಾನೆಗಳಿಂದ ಕನಿಷ್ಟ ಐದು ಮೀಟರ್ ಅಂತರವಿರಬೇಕು ಎಂದು ಅನನ್ಯಕುಮಾರ್ ತಿಳಿಸಿದ್ದಾರೆ. ಕೋವಿಡ್ ಕಾರಣದಿಂದ ಕಳೆದ ಆರೇಳು ತಿಂಗಳಿಂದ ಸ್ಥಗಿತಗೊಂಡಿದ್ದ ದುಬಾರೆ ಹಾಗೂ ಸಾಕಾನೆ ಶಿಬಿರಕ್ಕೆ ಪ್ರವಾಸಿಗರು ಬಾರದೇ ಬಿಕೋ ಎನ್ನುತ್ತಿತ್ತು. ಇದೀಗ ಅರಣ್ಯ ಇಲಾಖೆ ತೆಗೆದುಕೊಂಡ ಕ್ರಮದಿಂದ ದುಬಾರೆ ಪ್ರವಾಸಿಗರಿಗೆ ತೆರೆದುಕೊಳ್ಳುತ್ತಿದೆ.