ಸರ್ವೋದಯ ಎಂಬುದು ಗಾಂಧೀಜೀಯವರು ಸಮಾಜ ಅಭ್ಯುದಯದ ಕನಸುಕಂಡು ಪ್ರತಿಪಾದಿಸಿದ್ದಂತಹ ಒಂದು ಪರಿಕಲ್ಪನೆ. ಸಮಾಜದ ಕಲ್ಯಾಣ ಹಾಗೂ ಸಮಾಜದ ಸುಖೀ ಸಮಾಜದ ಸ್ಥಾಪನೆಯೇ ಸರ್ವೋದಯವಾಗಿದೆ. ಸರ್ವೋದಯವು ಯಶಸ್ವಿಯಾಗಬೇಕಾದರೆ ಸಮಾಜ ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಅಭಿವೃದ್ಧಿಯನ್ನು ಸಾಧಿಸಬೇಕು ಅಂದರೆ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ ಹಾಗೂ ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧಿಸಿದಾಗ ಸಮಾಜವು ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹೀಗೆ ಅಭಿವೃದ್ಧಿ ಹೊಂದಿದಂತಹ ರಾಜ್ಯವನ್ನು ಕಲ್ಯಾಣ ರಾಜ್ಯ ಅಥವಾ ರಾಮರಾಜ್ಯವೆಂದು ಕರೆಯಲಾಗುವುದು.
ಗಾಂಧೀಜಿಯವರು ಸರ್ವೋದಯ ಎಂಬುದನ್ನು ಜಾನ್ ರಷ್ಕಿನ್ ರವರ ತತ್ವದಿಂದ ಪ್ರಭಾವಿತಗೊಂಡು ವಿವರಿಸಿದ್ದಾರೆ. ರಷ್ಕಿನ್ ರವರ ‘ಆನ್ ಟು ದಿ ಲ್ಯಾಸ್ಟ್'ಎಂಬ ಗ್ರಂಥವು ಮಹಾತ್ಮ ಗಾಂಧೀಜಿಯವರ ಮೇಲೆ ಆಗಾಧವಾದ ಪರಿಣಾಮವನ್ನು ಬೀರಿದ್ದು, ಇದರಲ್ಲಿದ್ದಂತಹ ಸರ್ವೋದಯ ಸಮಾಜದ ಕನಸನ್ನು, ನನಸು ಮಾಡಲು ಗಾಂಧಿ ಪ್ರಯತ್ನಿಸಿದರು.
ಅಹಿಂಸೆ ನನ್ನ ನಂಬಿಕೆಯ ನನ್ನ ಧರ್ಮದ ಮೊದಲನೆಯ ಮತ್ತು ಕೊನೆಯ ವಿಧಿ ಎಂಬ ಗಾಂಧಿ ತತ್ವದಂತೆ ಅಹಿಂಸೆ ಮತ್ತು ನಂಬಿಕೆಯನ್ನು ವಿಶ್ವದ ಜನತೆಗೆ ಸಾರಿ, ಮನಗೆದ್ದ ವ್ಯಕ್ತಿ ಬಾಪೂಜಿ. ಗಾಂಧೀಜಿಯಾಗಿ ಎಲ್ಲರ ಮನೆ ಮನಗಳಲ್ಲಿ ಹಚ್ಚಹಸಿರಾಗಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ತೆರಳಿ 1891 ರಲ್ಲಿ ಕಾನೂನು ಪದವಿಯನ್ನು ಪಡೆದರು. ಒಂದು ಮೊಕದ್ದಮೆಗೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾಗ ಅಲ್ಲಿನ ಕರಿಯರು ಬಿಳಿಯರು ಎಂಬ ಬೇದ-ಭಾವದಿಂದ ರೈಲುನಿಲ್ದಾಣದಲ್ಲಿ ರೈಲಿನಿಂದ ಹೊರದೂಡಲ್ಪಟ್ಟು ಅವಮಾನಿತರಾದ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಹೋರಾಟವನ್ನು ಪ್ರಾರಂಭಿಸುತ್ತಾರೆ. 1914ರಲ್ಲಿ ಭಾರತಕ್ಕೆ ಆಗಮಿಸಿದ ಗಾಂಧೀಜಿ ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಜಯಗಳಿಸುತ್ತಾರೆ. 1920 ರಿಂದ 1948ರ ವರೆಗಿನ ಯುಗವನ್ನು ಗಾಂಧಿಯುಗ ಎಂದು ಕರೆಯಲಾಗುತ್ತದೆ. ಇವರು ಯಂಗ್ ಇಂಡಿಯಾ ಮತ್ತು ಹರಿಜನ ಎಂಬ ಪತ್ರಿಕೆಗಳ ಮೂಲಕ ತಮ್ಮ ಅಭಿಪ್ರಾಯವನ್ನು ಬ್ರಿಟಿಷರ ವಿರುದ್ಧ ವ್ಯಕ್ತಪಡಿಸುತ್ತಾರೆ.
ಗಾಂಧೀಜಿಯವರು ರಾಮಾಯಣ, ಮಹಾಭಾರತ, ಭಗವದ್ಗೀತೆ, ಕುರಾನ್ ಮತ್ತು ಬೈಬಲ್‍ಗಳಿಂದ ಪ್ರಭಾವಿತರಾಗಿದ್ದರು ಎನ್ನಲಾಗಿದೆ. ಇವರ ನನ್ನ ಸತ್ಯಾನ್ವೇಷಣೆ ಇಂಡಿಯಾ, ಹೋಂ ರೂಲ್ ಅಥವಾ ಹಿಂದು ಸ್ವರಾಜ್, ಎಕನಾಮಿಕ್ಸ್ ಆಫ್ ಖಾದಿ, ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ, ಮಹಿಳೆಯರು ಮತ್ತು ಸಾಮಾಜಿಕ ನ್ಯಾಯ, ಶಾಂತಿ ಮತ್ತು ಸಮರದಲ್ಲಿ ಅಹಿಂಸೆ, ಅಹಿಂಸಾತ್ಮಕ ಸಮಾಜದ ಹಾದಿಯಲ್ಲಿ ಎಂಬ ಕೃತಿಗಳನ್ನು ರಚಿಸಿದ್ದಾರೆ. ಗಾಂಧೀಜಿ ಸರ್ವೋದಯದ ಪರಿಕಲ್ಪನೆಯ ತನ್ನದೇ ತತ್ವದ ಮೂಲಕ ಚಿರಪರಿಚಿತರು. ಅವರ ಸರ್ವೋದಯದ ಪರಿಕಲ್ಪನೆ ಈ ರೀತಿ ಇದೆ.
ವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಿಯ ಪ್ರಗತಿ ಮತ್ತು ಅವಶ್ಯಕತೆಗಳನ್ನು ಪೂರೈಸಬೇಕು, ವ್ಯಕ್ತಿಸ್ವಾತಂತ್ರ್ಯ ಆರ್ಥಿಕ-ಸಾಮಾಜಿಕ ರಾಜಕೀಯ ಸಮಾನತೆಯನ್ನು ನೀಡುವಂತಿರಬೇಕು. ಪ್ರಜಾ ಪ್ರಭುತ್ವದ ಹೆಸರಿನಲ್ಲಿ ಬಹು ಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡುವುದಲ್ಲ, ಎಲ್ಲರ ಹಿತಕ್ಕಾಗಿ ಸ್ವಾತಂತ್ರ್ಯ ವನ್ನು ಬಳಸಬೇಕೇ ವಿನಹಃ ಸ್ವಾರ್ಥ ಪರವಾಗಿ ಅಲ್ಲ ಎಂದಿದ್ದಾರೆ. ಗಾಂಧೀಜಿಯವರು ರಾಜ್ಯರಹಿತ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ್ದು ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಒಂದು ಗ್ರಾಮ ಪಂಚಾಯಿತಿ ಇದ್ದು ಅದೇ ಸಂಪೂರ್ಣ ಅಧಿಕಾರವನ್ನು ಹೊಂದಿರಬೇಕು ಮತ್ತು ಗ್ರಾಮ ಪಂಚಾಯಿತಿಯ ಕಾರ್ಯಕಲಾಪಗಳು ಸಹಕಾರ ಮತ್ತು ಶಾಂತಿಯಿಂದ ಕಾರ್ಯನಿರ್ವಹಿಸಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಯು ಕೂಡ ತನ್ನ ಎಲ್ಲಾ ಕಾರ್ಯವನ್ನು ನಿರ್ವಹಿಸುವ ಮತ್ತು ಹಣಕಾಸು ವ್ಯವಸ್ಥೆಯನ್ನು ಕೂಡ ತಾನೇ ನೋಡಿಕೊಳ್ಳುವಂತಹ ಸ್ವತಂತ್ರ್ಯ ಸರಕಾರವಾಗಿರಬೇಕು ಸದಸ್ಯರು ನೇರವಾಗಿ ಜನರಿಂದ ಆಯ್ಕೆಯಾಗಬೇಕು. ಜನತೆಗೂ ಮತ್ತು ಸದಸ್ಯರಿಗೂ ನೇರ ಸಂಪರ್ಕವಿರುತ್ತದೆ. ಮಧ್ಯವರ್ತಿಗೆ ಅವಕಾಶವಿರುವುದಿಲ್ಲ. ಇದರಿಂದಾಗಿ ಪ್ರತಿಯೊಬ್ಬನೂ ಕೂಡ ತನ್ನ ಗ್ರಾಮದ ಚಟುವಟಿಕೆಯಲ್ಲಿ ಭಾಗವಹಿಸಿ ದಂತಾಗುತ್ತದೆ ಇದರಿಂದಾಗಿ ಅಧಿಕಾರ ವಿಕೇಂದ್ರೀಕರಣವನ್ನು ಸಾಧಿಸಿದಂತಾಗುತ್ತದೆ ಎಂದಿದ್ದಾರೆ.
ಸಮಾಜ ಅಭಿವೃದ್ಧಿ ಸಾಧಿಸಬೇಕೆಂದರೆ ಸಮಾನತೆ ಅನುಷ್ಠಾನ ಗೊಳ್ಳಬೇಕು. ವ್ಯಕ್ತಿಯ ಸ್ಥಾನಮಾನಕ್ಕೆ ಗೌರವ ನೀಡುವುದು, ಭೂದಾನ ಮಾಡುವುದು, ಆಸ್ತಿಯ ವಿಶ್ವ ವ್ಯವಸ್ಥೆ, ಗೋಹತ್ಯಾ ನಿಷೇಧ, ಗ್ರಾಮೀಣ ಅಭಿವೃದ್ಧಿ ಮತ್ತು ಗುಡಿ ಕೈಗಾರಿಕೆಗೆ ಪೆÇ್ರೀತ್ಸಾಹ, ಸ್ವದೇಶಿ ವಸ್ತುಗಳ ಬಳಕೆ, ಧಾರ್ಮಿಕ ಸಾಮರಸ್ಯತೆ, ಅಸ್ಪೃಶ್ಯತಾ ನಿವಾರಣೆ, ಸ್ತ್ರೀ ಸಮಾನತೆ, ಮದ್ಯಪಾನ ನಿಷೇಧ, ವೃತ್ತಿ ಶಿಕ್ಷಣಕ್ಕೆ ಆದ್ಯತೆ, ಪರಿಸರ ರಕ್ಷಣೆ ಮುಂತಾದ ಕಾರ್ಯಗಳನ್ನು ಹಮ್ಮಿಕೊಂಡರೆ ಕಲ್ಯಾಣ ರಾಜ್ಯ ಸ್ಥಾಪನೆಯಾಗುತ್ತದೆ. ಹೀಗೆ ಸರ್ಕಾರ ಪ್ರಜೆಗಳು ಅಧಿಕಾರಿಗಳು ಎಲ್ಲರೂ ತಮ್ಮ ತಮ್ಮ ತತ್ವಗಳ ಆಧಾರದಲ್ಲಿ ಕಾರ್ಯನಿರ್ವಹಿಸಿದರೆ ಗಾಂಧೀಜಿಯ ಸರ್ವೋದಯದ ಪರಿಕಲ್ಪನೆಯನ್ನು ನನಸು ಮಾಡಲು ಸಾಧ್ಯ.
?ಮಂದೆಯಂಡ ವನಿತ್ ಸಂಜು,
ವೀರಾಜಪೇಟೆ