ಇಬ್ಬರು ಭಾರತೀಯ ಸೈನಿಕರು ಹುತಾತ್ಮ

ಶ್ರೀನಗರ, ಅ.1 : ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನ ಪಡೆಗಳು ಗುರುವಾರ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದ್ದು, ದಾಳಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಕುಪ್ವಾರಾದ ನೌಗಮ್ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ)ಯಲ್ಲಿ ಮುಂಜಾನೆ ಪಾಕಿಸ್ತಾನ ಪಡೆಗಳು ಮುನ್ನೆಲೆ ಸೇನಾ ಶಿಬಿರಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿವೆ ಎಂದು ವಕ್ತಾರರಾದ ಕರ್ನಲ್ ರಾಜೇಶ್ ಕಾಲಿಯಾ ಯುಎನ್‍ಐಗೆ ತಿಳಿಸಿದ್ದಾರೆ. ಮಾನ್‍ಕೋಟ್ ಸೆಕ್ಟರ್‍ನಲ್ಲಿಯೂ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡು ಹಾರಿಸುವ ಮೂಲಕ ಪಾಕಿಸ್ತಾನ ಪಡೆಗಳು ಕದನ ವಿರಾಮವನ್ನು ಉಲ್ಲಂಘಿಸಿವೆ. ಪಾಕ್ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳೊಂದಿಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಮಾನ್‍ಕೋಟ್ ಸೆಕ್ಟರ್‍ನಲ್ಲಿ ಮಾರ್ಟಾರ್‍ಗಳೊಂದಿಗೆ ತೀವ್ರವಾದ ಶೆಲ್ ದಾಳಿ ನಡೆಸಿವೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಪಾಕ್‍ನ ಗುಂಡಿನ ದಾಳಿಗೆ ಭಾರತೀಯ ಸೇನೆ, ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅವರು ಹೇಳಿದ್ದಾರೆ.

ಭೂಸುಧಾರಣೆ ಕಾಯ್ದೆ ಜಾರಿಗೆ ಸುಗ್ರಿವಾಜ್ಞೆ

ಬೆಂಗಳೂರು, ಅ.1 : ರೈತರ ಭಾರೀ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಕೈಗಾರಿಕಾ ವ್ಯಾಜ್ಯಗಳ ಕಾಯ್ದೆ(ಕಾರ್ಮಿಕ ತಿದ್ದುಪಡಿ ಕಾಯ್ದೆ) ಜಾರಿಗೊಳಿಸಲು ಸುಗ್ರೀವಾಜ್ಞೆ ಹೊರಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಅಂಗೀಕರಿಸಲಾಗಿತ್ತು. ಆದರೆ ವಿಧಾನ ಪರಿಷತ್ ನಲ್ಲಿ ಇನ್ನೂ ಅಂಗೀಕಾರಗೊಂಡಿಲ್ಲ. ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ಪರಿಷತ್ ನಲ್ಲಿ ಇನ್ನೂ ಅಂಗೀಕಾರಗೊಂಡಿಲ್ಲ. ಆದರೆ ಕಾರ್ಮಿಕ ತಿದ್ದುಪಡಿ ಕಾಯ್ದೆ ಪರಿಷತ್‍ನಲ್ಲಿ ಸೋಲನುಭವಿಸಿತ್ತು. ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಹೀಗಾಗಿ ಈ ವಿವಾದಿತ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೊರೆ ಹೋಗಿದೆ. ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನಾಳೆ ಅತಿ ಉದ್ದದ ಸುರಂಗ ಉದ್ಘಾಟನೆ

ಶಿಮಾ,್ಲ ಅ.1 : ವಿಶ್ವದ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಅ.3ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. 9.2 ಕಿ.ಮೀ ಉದ್ದದ ಅಟಲ್ ಸುರಂಗ ಮಾರ್ಗವೂ ವಿಶ್ವದಲ್ಲಿಯೇ ಅತೀ ಉದ್ದದ ಹೆದ್ದಾರಿ ಮಾರ್ಗವಾಗಿದೆ. ಮನಾಲಿಯ ದಕ್ಷಿಣ ತುದಿಯಲ್ಲಿ ಅಟಲ್ ಸುರಂಗದ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮನಾಲಿಯಲ್ಲಿ ಭಾರೀ ಹಿಮಪಾತವಾಗುವ ಕಾರಣ ಅಲ್ಲಿ ಆರು ತಿಂಗಳು ಮಾತ್ರ ಸಂಚಾರವಿರುತ್ತಿತ್ತು. ಆದರೆ ಈ ಸುರಂಗ ಮಾರ್ಗದಿಂದ ಮನಾಲಿಯಿಂದ ಲಹೌಲ್ ಸ್ಪಿತಿ ಕಣಿವೆಯನ್ನು ವರ್ಷವಿಡಿ ಸಂಪರ್ಕಿಸಲಿದೆ. ಪ್ರತಿ 60 ಮೀಟರ್ನಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದು, ಮತ್ತು ಸುರಂಗದ ಒಳಗೆ ಪ್ರತಿ 500 ಮೀಟರ್‍ನಲ್ಲಿ ತುರ್ತು ನಿರ್ಗಮನ ಸುರಂಗಳನ್ನು ನಿರ್ಮಾಣ ಮಾಡಲಾಗಿದೆ. ಈ ಸುರಂಗವು ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46 ಕಿ.ಮೀ ಕಡಿಮೆ ಮಾಡಲಿದೆ. ನಾಲ್ಕು ಗಂಟೆಗಳ ಪ್ರಯಾಣದ ಅವಧಿ ಸಹ ಉಳಿತಾಯವಾಗಲಿದೆ ಎಂದೂ ಅವರು ಹೇಳಿದರು.

ರಾಹುಲ್, ಪ್ರಿಯಾಂಕ ಪೊಲೀಸ್ ವಶ

ನವದೆಹಲಿ, ಅ.1 : ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಸಂತ್ರಸ್ತ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಉತ್ತರ ಪ್ರದೇಶದ ಹತ್ರಾಸ್‍ಗೆ ತೆರಳುತ್ತಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಹತ್ರಾಸ್‍ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಕಾರನ್ನು ಗ್ರೇಟರ್ ನೋಯ್ಡಾದಲ್ಲಿಯೇ ಉತ್ತರ ಪ್ರದೇಶ ಪೊಲೀಸರು ತಡೆದರು. ಬಳಿಕ ಸಂತ್ರಸ್ಥ ಯುವತಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಕಾಲ್ನಡಿಯಲ್ಲಿ ತೆರಳುತ್ತಿದ್ದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, “ಕಳೆದ ವರ್ಷ ಇದೇ ಸಮಯದಲ್ಲಿ ನಾವು ಉನ್ನಾವೊ ಮಗಳಿಗಾಗಿ ಹೋರಾಡುತ್ತಿದ್ದೆವು. ಒಂದು ವರ್ಷದಲ್ಲಿ ಯುಪಿಯ ಪರಿಸ್ಥಿತಿ ಬದಲಾಗಿಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಿಳೆಯರ ಸುರಕ್ಷತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮೈಸೂರು ದಸರಾ ಗಜಪಡೆಗೆ ಪೂಜೆ

ಮೈಸೂರು, ಅ.1 : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದ್ದು, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಗುರುವಾರ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳ ತಂಡ ವೀರನ ಹೊಸಹಳ್ಳಿಯಿಂದ ಮೈಸೂರಿಗೆ ಪಯಣ ಬೆಳೆಸಿತು. ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೆರವಣಿಗೆಗೆ ಅವಕಾಶ ಇಲ್ಲ. ಸಾಮಾನ್ಯವಾಗಿ 14 ಆನೆಗಳು ಪಾಲ್ಗೊಳ್ಳುತ್ತಿದ್ದವಾದರೂ, ಈ ಬಾರಿ ಅಭಿಮನ್ಯು, ವಿಜಯ, ಕಾವೇರಿ, ವಿಕ್ರಮ ಸೇರಿದಂತೆ ಕೇವಲ 5 ಆನೆಗಳು ಮಾತ್ರ ಭಾಗವಹಿಸಲಿವೆ. ವೀರನ ಹೊಸಹಳ್ಳಿಯಲ್ಲಿ ಗಜಪಡೆಗೆ ಪೂಜೆ ನೆರವೇರಿಸಲಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನತ್ತ ಗಜಪಡೆ ಪ್ರಯಾಣ ಬೆಳೆಸಿದೆ. ಪೂಜೆ ಕಾರ್ಯಕ್ರಮದಲ್ಲಿ ಕೇವಲ ಅಧಿಕಾರಿಗಳಷ್ಟೇ ಭಾಗಿಯಾಗಿದ್ದರು. ಗಜಪಯಣ ಪೂಜಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗಿಯಾಗಿರಲಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಗಜಪಯಣದ ಜವಾಬ್ದಾರಿಯನ್ನು ಔಪಚಾರಿಕವಾಗಿ ಹಮ್ಮಿಕೊಂಡಿತ್ತು.

ಟಿಕೆಟ್ ಶುಲ್ಕ ಮರು ಪಾವತಿಗೆ ನಿರ್ದೇಶನ

ನವದೆಹಲಿ, ಅ.1 : ಲಾಕ್ ಡೌನ್ ಕಾರಣದಿಂದ ರದ್ದಾದ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಶುಲ್ಕವನ್ನು ತಕ್ಷಣ ಮರುಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಕೋವಿಡ್-19 ಲಾಕ್ ಡೌನ್ ಪರಿಣಾಮ ಮಾರ್ಚ್ 25 ರಿಂದ ಮೇ 24 ರ ಅವಧಿಯಲ್ಲಿ ರದ್ದಾದ ವಿಮಾನಗಳ ಟಿಕೆಟ್ ಶುಲ್ಕವನ್ನು ಮರುಪಾವತಿಸಬೇಕು. ಲಾಕ್ ಡೌನ್ ಅವಧಿಯಲ್ಲಿ ಏಜೆಂಟ್ ಗಳ ಮೂಲಕ ಬುಕ್ ಟಿಕೆಟ್ ಬುಕ್ ಮಾಡಿದ್ದರೆ ವಿಮಾನಯಾನ ಸಂಸ್ಥೆಗಳು ಕೂಡಲೇ ಸಂಪೂರ್ಣ ಹಣವನ್ನು ಏಜೆಂಟ್ ಗಳಿಗೆ ಪಾವತಿಸಬೇಕು ಮತ್ತು ಏಜೆಂಟ್ ಸಹ ತಕ್ಷಣ ಪ್ರಯಾಣಿಕರಿಗೆ ಮರುಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಹಣಕಾಸಿನ ತೊಂದರೆಯಿಂದಾಗಿ ಯಾವುದೇ ವಿಮಾನಯಾನ ಸಂಸ್ಥೆಗಳು ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ ಅವರು ಪ್ರಯಾಣಿಕರಿಂದ ನೇರವಾಗಿ ಅಥವಾ ಟ್ರಾವೆಲ್ ಏಜೆಂಟ್ ಮೂಲಕ ಬುಕಿಂಗ್ ಮಾಡಿದ ಪ್ರಯಾಣಿಕರ ಹೆಸರಿನಲ್ಲಿ ಸಂಗ್ರಹಿಸಿದ ಶುಲ್ಕದ ಮೊತ್ತಕ್ಕೆ ಸಮನಾದ ಕ್ರೆಡಿಟ್ ಶೆಲ್ ಅನ್ನು ಒದಗಿಸಬೇಕು. ಅದು 2021, ಮಾರ್ಚ್ 31ರೊಳಗೆ ಅದನ್ನು ಉಪಯೋಗಿಸಿಕೊಳ್ಳಬಹುದು’’ ಎಂದು ಕೋರ್ಟ್ ಹೇಳಿದೆ.

ಮೃಗಾಲಯಕ್ಕೆ 20 ಲಕ್ಷ ನೀಡಿದ ಸುಧಾಮೂರ್ತಿ

ಮೈಸೂರು, ಅ.1 : ಸಾಂಸ್ಕೃತಿಕ ನಗರಿ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳ ಪಾಲನೆಗಾಗಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಗುರುವಾರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರಣಿ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದು, ಸುಧಾ ಮೂರ್ತಿ ಅವರು ಕಳೆದ ಮೇ ತಿಂಗಳಲ್ಲಿ 20 ಲಕ್ಷ ರೂ. ನೀಡಿರುವುದಾಗಿ ಹೇಳಿದ್ದಾರೆ. ಕೋವಿಡ್ -19 ರ ಕಷ್ಟದ ಸಮಯದಲ್ಲಿ ಸುಧಾ ಮೂರ್ತಿಯವರ ಈ ರೀತಿಯ ಉದಾರವಾದ ದೇಣಿಗೆ ಅತ್ಯಮೂಲ್ಯ ಮತ್ತು ಇತರರಿಗೆ ಸ್ಫೂರ್ತಿಯಾಗಿದೆ.