ಬೆಳಗಿನ ಹೊತ್ತು ಕೈಯಲ್ಲಿ ಒಂದು ಕಪ್ಪು ಕಾಫಿ ಹಿಡಿದು ಹೀರುತ್ತಿರುವಾಗ, ಅದರ ಪರಿಮಳದ ಆನಂದ ಅದೆಷ್ಟು ಆವರಿಸಿರುತ್ತೆಂದರೆ, ಆ ಪರಿಮಳ ಬಂದುದಾದರೂ ಹೇಗೆ ? ಕಾಫಿಯಾದರೂ ಎಲ್ಲಿಂದ ಬಂತು ? ಅದರ ತಯಾರಿಯನ್ನು ಕಂಡುಹಿಡಿದವರ್ಯಾರು ? ಇತ್ಯಾದಿ ಯಾವ ಪ್ರಶ್ನೆಗಳು ನೆನಪಾಗುವುದಿಲ್ಲ. ಅಷ್ಟು ಪರಿಮಳವು ಆವರಿಸಿರುತ್ತದೆ. ನಮ್ಮ ದೇಶದಲ್ಲಿ ಬೆಳೆಯುವ ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕಾಫಿ, ವಿದೇಶಗಳಿಗೆ ರಫ್ತಾಗುತ್ತದೆ. ಕಾಫಿ ಒಟ್ಟು ಉತ್ಪಾದನೆ ಮತ್ತು ದೇಶದ ಜನಸಂಖ್ಯೆ ಎರಡನ್ನು ಹೋಲಿಸಿ ನೋಡಿದಾಗ ಕಾಫಿ ಆಂತರಿಕ ಬಳಕೆ ಅತ್ಯಂತ ಕಡಿಮೆ ಇದೆ. ದೇಶದೊಳಗೆ ಕಾಫಿ ಬಳಕೆ ಹೆಚ್ಚಿಸುವ ಗುರಿ ಮತ್ತು ಸವಾಲು ನಮ್ಮ ಮುಂದಿದೆ. ಬೆಳೆಗಾರರನ್ನು ರಕ್ಷಿಸಲು ಮತ್ತು ಗ್ರಾಹಕರ ಸಂಖ್ಯೆ ಹೆಚ್ಚಿಸಲು ಗುಣಮಟ್ಟದ ಕಾಫಿ ಉತ್ಪಾದನೆಗೆ ಇನ್ನಷ್ಟು ಉತ್ತೇಜನ ದೊರೆಯಬೇಕಿದೆ. ಕಾಫಿಯನ್ನು ಕೆಲವರು ಅಮೃತ ಎಂದೂ ಕರೆದಿದ್ದಾರೆ. ಚಳಿ ಹಿಡಿದ ಮೈಯನ್ನು ಬೆಚ್ಚಗೆ ಮಾಡುವ, ಜಡ್ಡು ಹಿಡಿದ ಮೆದುಳಿಗೆ ಸ್ಫ್ಪೂರ್ತಿ ತುಂಬುವ ಕಾಫಿಯು, ನಮ್ಮ ಮಲೆನಾಡಿನ ಅಮೃತ ಎನ್ನಬಹುದು. ಕಾಫಿ ಹೂವು ಬಿಟ್ಟಾಗಲಂತೂ ನೋಡಲು ಎರಡು ಕಣ್ಣು ಸಾಲವು. ಇಡೀ ಕಾಫಿ ತೋಟದಲ್ಲಿ ಅಚ್ಚ ಬಿಳಿಯ ಹೂವುಗಳು ಹಸಿರಿನ ಮೇಲೆ ಮೊಸರು ಚೆಲ್ಲಿದಂತೆ ಕಾಣುತ್ತವೆ. ಹೂವಾಡಿದ ಮೇಲೆ ಕಾಯಿ ತುಂಬಿಕೊಂಡು ಅವುಗಳು ಹಣ್ಣಾಗುವವರೆಗೂ ಅಷ್ಟೇ ಸುಂದರವಾದ ದೃಶ್ಯ ಕಾಫಿ ತೋಟವನ್ನು ಆವರಿಸಿಕೊಂಡಿರುತ್ತದೆ. ಹಸಿರು ಕಾಯಿಗಳು ಬಲಿತಂತೆ ರಂಗು ತುಂಬಿಕೊಳ್ಳುತ್ತವೆ. ಅಪ್ಪಟ ಕೆಂಪು ಬಣ್ಣದ ಹಣ್ಣುಗಳು ಕಾಫಿ ಗಿಡದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಅಂತರರಾಷ್ಟ್ರೀಯ ಕಾಫಿ ದಿನವು ಕಾಫಿಯನ್ನು ಒಂದು ಪಾನೀಯವಾಗಿ ಪ್ರಚಾರ ಮಾಡಲು ಮತ್ತು ಆಚರಿಸಲು ಬಳಸಲಾಗುವ ಒಂದು ಸಂದರ್ಭವಾಗಿದೆ, ಜಗತ್ತಿನಾದ್ಯಂತ ಹಲವು ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಮಾರ್ಚ್ 3,2014 ರಂದು ನಡೆದ ಒಂದು ಸಭೆಯಲ್ಲಿ, ಎಕ್ಸ್ಪೋ 2015 ರ ಭಾಗವಾಗಿ ಇಂಟರ್ ನ್ಯಾಷನಲ್ ಕಾಫಿ ಆರ್ಗನೈಸೇಶನ್ ಮಿಲನ್ನಲ್ಲಿ ಮೊದಲ ಅಧಿಕೃತ ಅಂತರರಾಷ್ಟ್ರೀಯ ಕಾಫಿ ದಿನವನ್ನು ಪ್ರಾರಂಭಿಸಲು ತೀರ್ಮಾನಿಸಿತು. ಇಂಟರ್ ನ್ಯಾಷನಲ್ ಕಾಫಿ ಆರ್ಗನೈಸೇಶನ್ ಅಂಗೀಕರಿಸಿದ ಮೊದಲ ಅಧಿಕೃತ ದಿನಾಂಕ 1 ಅಕ್ಟೋಬರ್ 2015. ಕರ್ನಾಟಕದ ಕಾಫಿಗೆ ಅದರದೆ ಆದ ವಿಶೇಷತೆಯುಂಟು. ಇಲ್ಲಿನದು ಹೆಚ್ಚಾಗಿ ರೋಬಸ್ಟಾ ಮತ್ತು ಅರೆಬಿಕಾ ತಳಿಗಳು. ಆದರೆ ಇಲ್ಲಿನ ಕಾಫೀ ತೋಟಗಳು ನೆರಳಿನಲ್ಲಿ ಅಪ್ಪಟ ಜೈವಿಕ ಸಮೃದ್ಧತೆಯಿಂದ ಇರುವಂತಹಾ ತೋಟಗಳು. ಸಾಕಷ್ಟು ನಿತ್ಯಹರಿದ್ವರ್ಣದ, ಸಾರಜನಕವನ್ನು ಸ್ಥಿರೀಕರಿಸಬಲ್ಲ, ಜೊತೆಗೆ ವಿವಿಧ ಎತ್ತರಗಳ ಎಲೆ ತಾರಸಿಗಳನ್ನು ಹೊಂದಿರುವ ಸಾಕಷ್ಟು ಸಸ್ಯಗಳನ್ನು ತೋಟದಲ್ಲಿ ಕಾಣಬಹುದು. ಈ ದೃಶ್ಯವನ್ನು ಭಾರತ ಬಿಟ್ಟು ಇತರೇ ದೇಶಗಳಲ್ಲಿ ಕಾಣಲಾಗದು. ಗಿಡಮರ ನಾಶಪಡಿಸಿ, ಕಾಫಿ ಬೆಳೆಯುವ ಹೊಸ ಪ್ರಯತ್ನಗಳು ಕಾಫಿ ಕೃಷಿ ಮತ್ತು ಕಾಫಿ ಸಂಸ್ಕøತಿಯನ್ನೇ ನಾಶಪಡಿಸುತ್ತವೆ. ಇಂತಹ ಪ್ರಯೋಗಗಳಿಂದ ಗುಣಮಟ್ಟದ ಕಾಫಿ ಉತ್ಪಾದನೆ ಸಾಧ್ಯವಿಲ್ಲ. ಇದು ಯಶಸ್ವಿಯಾಗುವುದೂ ಇಲ್ಲ. ಭಾರತದ ಮುಕ್ಕಾಲು ಪಾಲು ಕಾಫಿಯನ್ನು ಕರ್ನಾಟಕ ರಾಜ್ಯದಲ್ಲೇ ಉತ್ಪಾದಿಸಲಾಗುತ್ತಿದೆ. ಕಾಫಿ ಉತ್ಪಾದನೆಯಲ್ಲಿ ನಮ್ಮ ದೇಶವು ಜಗತ್ತಿನಲ್ಲಿ 5ನೇಯ ರಾಷ್ಟ್ರವಾಗಿದೆ. ಅದರ ಮುಕ್ಕಾಲು ಪಾಲಿನ ಕೊಡುಗೆಯು ಕರ್ನಾಟಕ ರಾಜ್ಯದ್ದೇ. ನೆರಳಿನ ಆಶ್ರಯ ಮತ್ತು ಪರಿಸರ ಸ್ನೇಹಿ ಕಾಫಿಗೆ ಕರ್ನಾಟಕ ರಾಜ್ಯ ಪ್ರಸಿದ್ಧಿ. ನಮ್ಮದು ಪರಿಸರಸ್ನೇಹಿ ಕಾಫಿ ಕೃಷಿ. ವಿಶ್ವಮಟ್ಟದಲ್ಲೂ ಹಾಗೆಯೇ ಗುರುತಿಸಿಕೊಂಡಿದ್ದೇವೆ. ಅರೆಬಿಕಾ ಕಾಫಿಯನ್ನು ಹದವಾದ ನೆರಳಿನಲ್ಲಿ ಬೆಳೆಯಬೇಕು. ನಮ್ಮ ಕಾಫಿ ಉದ್ಯಮವು ಪರಿಸರವನ್ನು ಉಳಿಸಿ, ಬೆಳೆಸುವಂತಿರಬೇಕು. ಜೀವವೈವಿಧ್ಯಗಳನ್ನು ಪೆÇೀಷಿಸಿ, ಜಲಮೂಲ ರಕ್ಷಿಸುವಂತಾಗಬೇಕಿದೆ. ಇಂದಿನ ದಿನಗಳಲ್ಲಿ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಕಾಫಿ ಬೆಳೆಯಲ್ಲಿ ಸಿಗುತ್ತಿರುವ ಆದಾಯ ತೋಟದ ನಿರ್ವಹಣೆಗೂ ಸಾಕಾಗುತ್ತಿಲ್ಲ. ಹಾಕಿದ ಬಂಡವಾಳವೂ ಸಿಗುತ್ತಿಲ್ಲ. ಪೂರಕ ಬೆಳೆಯಾಗಿ ಕಾಳುಮೆಣಸು ಬೆಳೆದಿರುವವರು ಮಾತ್ರ ಚೇತರಿಕೆಯಲ್ಲಿದ್ದಾರೆ. ಕಾಫಿಯನ್ನು ರಾಷ್ಟ್ರೀಯ ಪಾನಿಯ ಎಂದು ಘೋಷಿಸುವ ಆಂದೋಲನ ಕೆಲವು ವರ್ಷಗಳ ಹಿಂದೆ ಚಾಲ್ತಿಯಲ್ಲಿದ್ದು, ಈಗ ಅದು ಕೂಡಾ ಜನಮಾನಸದಿಂದ ಮರೆಮಾಚುತ್ತಿದೆ. ದೇಶದೊಳಗೆ ಕಾಫಿ ಆಂತರಿಕ ಬಳಕೆ ಹೆಚ್ಚಿಸುವ ಬಗ್ಗೆ ಕಾಫಿ ಮಂಡಳಿ, ಕಾಫಿಗೆ ಸಂಬಂಧಿಸಿದ ಸಂಘ-ಸಂಸ್ಥೆಗಳು ಹಾಗೂ ಕಾಫಿ ಬೆಳೆಗಾರರು ಕಾರ್ಯಪ್ರವೃರ್ತರಾಗಬೇಕಿದೆ. ಗುಣಮಟ್ಟದ ಕಾಫಿ ಉತ್ಪಾದಿಸುವ ನಿಟ್ಟಿನಲ್ಲಿ ಆಲೋಚಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಬೇಡಿಕೆ ಹೆಚ್ಚಿಸಬೇಕಾಗಿದೆ. ಕಾಫಿ ಬಳಕೆ ಮಾಡದಿರುವ ದೇಶಗಳಿಗೆ ಗುಣಮಟ್ಟದ ಕಾಫಿ ರಫ್ತು ಮಾಡಿ, ಜನರು ಕಾಫಿ ಕುಡಿಯುವಂತೆ ಮಾಡಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ದೇಶದ ಕಾಫಿಗೆ ಬೇಡಿಕೆ ಹೆಚ್ಚುವಂತೆ ಮಾಡುವುದೊಂದೇ ಇದಕ್ಕಿರುವ ಏಕೈಕ ಪರಿಹಾರ. ಮೂರು ಕಪ್ ಕಾಫಿ ಸೇವನೆ ಮಾಡಿದರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆ, ಆರು ಕಪ್‍ಗಿಂತ ಹೆಚ್ಚು ಕುಡಿದರೆ ಪಾಶ್ರ್ವವಾಯುವಿನ ಸಾಧ್ಯತೆ ಕಡಿಮೆ ಎನ್ನುತ್ತಾರೆ. ಈ ಕೊರೊನಾ ಕಾಲಘಟ್ಟದಲ್ಲಿ ಕುಡಿಯುವ ಕಾಫಿಗೆ ಸ್ವಲ್ಪ ಜಜ್ಜಿದ ಶುಂಟಿ ಹಾಕುವುದರಿಂದ ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕಾಫಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕಾಫಿಯಲ್ಲಿನ ಔಷದೀಯ ಗುಣಗಳಿರುವುದು ಸಂಶೋಧನೆಗಳಿಂದ ಕಂಡು ಬಂದಿದೆ. ಇತ್ತೀಚೆಗೆ ಗ್ರೀನ್ ಕಾಫಿ ಕೂಡ ಬಂದಿದೆ. ವ್ಯಾಯಾಮದ ನಂತರ ಕಾಫಿ ಕುಡಿದರೆ ಸ್ನಾಯು ನೋವು ಕಡಿಮೆ ಆಗುತ್ತದೆ ಎನ್ನುತ್ತಾರೆ. ಇನ್ನು ಎಲ್ಲರಿಗೂ ತಿಳಿದಿರುವಂತೆ ತಲೆ ನೋವು ಕೂಡ ಕಡಿಮೆಯಾಗುತ್ತದೆ. ಒಂದು ಹಂತದ ನೈಸರ್ಗಿಕ ನೋವು ನಿವಾರಕ ಈ ಕಾಫಿ ಎಂದರೂ ತಪ್ಪಿಲ್ಲ. ಕಾಫಿಗೆ ಒತ್ತಡವನ್ನು ತಗ್ಗಿಸುವ ಶಕ್ತಿ ಇದೆ ಎಂಬುವುದು ಇತ್ತೀಚೆಗಿನ ಸಂಶೋಧನೆಗಳಿಂದ ಕಂಡು ಬಂದಿದೆ. ಜಾಗತಿಕ ಆರ್ಥಿಕತೆಯ ಮೇಲೆ ಕೊರೊನಾ ವೈರಸ್ ದಾಳಿಯ ಈ ಸಂದರ್ಭದಲ್ಲಿ ಗುಣಮಟ್ಟದ ಕಾಫಿ ಉತ್ಪಾದಿಸಿ, ಸ್ಥಳೀಯವಾಗಿ ಸಂಸ್ಕರಿಸಿ, ಪುಡಿಮಾಡಿ, ಪ್ಯಾಕಿಂಗ್ ಮಾಡಿ ಅಂತರರಾಷ್ಟ್ರೀಯ ಗುಣಮಟ್ಟ ದೊಂದಿಗೆ ಜಾಗತಿಕ ಮಾರುಕಟ್ಟೆಗೆ ಭಾರತೀಯ ಕಾಫಿಯ ಪರಿಮಳ ಪಸರಿಸಲು ಇದು ಪರ್ವಕಾಲ.

-ಅರುಣ್ ಕೂರ್ಗ್, ಮಡಿಕೇರಿ.