ಸೋಮವಾರಪೇಟೆ, ಸೆ. 28: ಭೂ ಸುಧಾರಣಾ ಕಾಯ್ದೆ ವಿರೋಧಿಸಿ ರೈತಪರ ಸಂಘಟನೆಗಳು ಹಾಗೂ ಬಿಜೆಪಿಯೇತರ ರಾಜಕೀಯ ಪಕ್ಷಗಳು ಕರೆನೀಡಿದ್ದ ಬಂದ್‍ಗೆ ಸೋಮವಾg Àಪೇಟೆ ವ್ಯಾಪ್ತಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.ವಾರದ ಸಂತೆ ಸೋಮವಾರ ಪೇಟೆಯಲ್ಲಿ ಎಂದಿನಂತೆ ನಡೆದರೆ, ಖಾಸಗಿ ಬಸ್‍ಗಳ ಓಡಾಟ ಹೊರತುಪಡಿಸಿ ಉಳಿದಂತೆ ಕೆಎಸ್ ಆರ್‍ಟಿಸಿ, ಖಾಸಗಿ ವಾಹನಗಳು, ಆಟೋಗಳ ಸಂಚಾರ ಎಂದಿನಂತೆ ಇತ್ತು.ಪಟ್ಟಣದ ವಿವೇಕಾನಂದ ವೃತ್ತ, ಗೌಡಳ್ಳಿ-ಬೀಟಿಕಟ್ಟೆ ಮುಖ್ಯರಸ್ತೆಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರು ತೊಂದರೆಗೆ ಒಳಗಾದರು. ಅರ್ಧಗಂಟೆಗಳ ತರುವಾಯ ರಸ್ತೆ ತಡೆಯನ್ನು ಹಿಂಪಡೆದಿದ್ದರಿಂದ ಸಂಚಾರ ಸುಗಮವಾಯಿತು.ಬಂದ್ ಇರುತ್ತೋ ಇಲ್ವೋ ಎಂಬ ಜಿಜ್ಞಾಸೆಯಲ್ಲಿದ್ದ ಸಾರ್ವಜನಿಕರು ಮಧ್ಯಾಹ್ನದವರೆಗೆ ಹೆಚ್ಚಾಗಿ ಪಟ್ಟಣಕ್ಕೆ ಆಗಮಿಸಲಿಲ್ಲ. ಇಂದು ಬೆಳಗ್ಗಿನಿಂದಲೇ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.

ಪ್ರತಿಭಟನೆ: ಪಟ್ಟಣದ ವಿವೇಕಾನಂದ ವೃತ್ತದ ಬಳಿ ರೈತ-ಕಾರ್ಮಿಕ ಸಂಘಟನೆಗಳೊಂದಿಗೆ ಕಾಂಗ್ರೆಸ್ (ಮೊದಲ ಪುಟದಿಂದ) ಹಾಗೂ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ವಿವೇಕಾನಂದ ವೃತ್ತದಲ್ಲಿ ಅರ್ಧಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೋರೇಟ್ ಕಂಪೆನಿಗಳ ಪರ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.

ಗೌಡಳ್ಳಿ-ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯ ರೈತ ಹೋರಾಟ ಸಮಿತಿಯ ಪ್ರಮುಖ ಹೂವಯ್ಯ ಮಾತನಾಡಿ, ಇದೀಗ ಜಾರಿಗೆ ತರುತ್ತಿರುವ ಕಾಯ್ದೆ ಯಾವದೇ ಕಾರಣಕ್ಕೂ ರೈತ ಸ್ನೇಹಿಯಾಗಿಲ್ಲ. ಕಾರ್ಪೋರೇಟ್ ಕಂಪೆನಿಗಳ ಪರವಾಗಿರುವ ಕಾಯ್ದೆಯನ್ನು ಯಾವದೇ ಕಾರಣಕ್ಕೂ ರೈತರು ಒಪ್ಪುವದಿಲ್ಲ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್.ಸುರೇಶ್, ತಾಲೂಕು ಅಧ್ಯಕ್ಷ ನಾಗರಾಜು, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ, ತಾಲೂಕು ರೈತ ಹೋರಾಟ ಸಮಿತಿಯ ಅಧ್ಯಕ್ಷ ಲಿಂಗೇರಿ ರಾಜೇಶ್, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಗೌಡಳ್ಳಿ-ದೊಡ್ಡಮಳ್ತೆ ರೈತ ಹೋರಾಟ ಸಮಿತಿ ಅಧ್ಯಕ್ಷ ಮೊಗಪ್ಪ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ವಿ.ಎ. ಲಾರೆನ್ಸ್, ಮಿಥುನ್, ಮಂಜುಳಾ, ಜಯಂತಿ ಶಿವಕುಮಾರ್, ಎಸ್.ಎಂ. ಡಿಸಿಲ್ವಾ, ಬಸಪ್ಪ, ಬಸವರಾಜು, ಅನಿಲ್‍ಕುಮಾರ್, ಕೆ.ಟಿ. ಪರಮೇಶ್, ಉದಯಶಂಕರ್, ಹೆಚ್.ಎ. ನಾಗರಾಜ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಹಶೀಲ್ದಾರ್ ಮೂಲಕ ಮನವಿ

ಪ್ರತಿಭಟನೆ ಸಂದರ್ಭ ಸ್ಥಳಕ್ಕಾಗಮಿಸಿದ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಸಂಘಟನೆಗಳ ಪ್ರಮುಖರು ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸುವ ಪ್ರತ್ಯೇಕ ಮನವಿ ಪತ್ರಗಳನ್ನು ರಾಜ್ಯಪಾಲರು-ರಾಷ್ಟ್ರಪತಿಗಳಿಗೆ ಸಲ್ಲಿಸಿದರು.

ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಠಾಣಾಧಿಕಾರಿಗಳಾದ ಶಿವಶಂಕರ್, ವಿರೂಪಾಕ್ಷ ಸೇರಿದಂತೆ ಸಿಬ್ಬಂದಿಗಳು ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

ಗೌಡಳ್ಳಿಯಲ್ಲಿ ಬಂದ್: ಭೂ ಸುಧಾರಣಾ ಕಾಯ್ದೆ ವಿರೋಧಿಸಿ ತಾಲೂಕಿನ ಬೀಟಿಕಟ್ಟೆ-ಗೌಡಳ್ಳಿಯಲ್ಲಿ ಸ್ವಯಂಪ್ರೇರಿತ ಬಂದ್ ನಡೆಯಿತು.

ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಲಾಯಿತು.

ಸ್ಥಳೀಯ ರೈತ ಹೋರಾಟ ಸಮಿತಿಯ ಅಧ್ಯಕ್ಷ ಮೊಗಪ್ಪ, ಹೂವಯ್ಯ ಸೇರಿದಂತೆ ಪದಾಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಸೇರಿದಂತೆ ಕಾರ್ಯಕರ್ತರು ಬೀಟಿಕಟ್ಟೆ ಜಂಕ್ಷನ್‍ನಲ್ಲಿ ರಸ್ತೆ ತಡೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಕುಶಾಲನಗರದಲ್ಲಿ ಪ್ರತಿಭಟನೆ

ಕೃಷಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ನೀತಿ ಖಂಡಿಸಿ ರಾಜ್ಯವ್ಯಾಪ್ತಿ ಕರೆ ನೀಡಿದ್ದ ಬಂದ್‍ಗೆ ಕುಶಾಲನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆದವು. ಸಾರಿಗೆ ಬಸ್, ಆಟೋ, ಟ್ಯಾಕ್ಸಿ ಸೇವೆಗಳು ಯಾವುದೇ ಅಡ್ಡಿಯಿಲ್ಲದೆ ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು. ಅಂಗಡಿ ಮುಂಗಟ್ಟುಗಳ ವ್ಯಾಪಾರ, ಜನಜೀವನ ಅಬಾಧಿತವಾಗಿತ್ತು. ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕೊಡಗು-ಮೈಸೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಜಿಲ್ಲಾ ಮೀಸಲು ಪೊಲೀಸ್ ಪಡೆ, ಅಗ್ನಿಶಾಮಕ ದಳ ಸೇರಿದಂತೆ ಪೊಲೀಸರ ಕಣ್ಗಾವಲು ಬೆಳಗ್ಗೆ 6 ಗಂಟೆಯಿಂದ ಸಂಜೆ ತನಕ ಮುಂದುವರೆದಿತ್ತು. ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳಾದ ಗಣೇಶ್, ನಂದೀಶ್, ಪ್ರೊಬೆಷನರಿ ಅಧಿಕಾರಿ ಕರಿಬಸಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಕೃಷಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ನೀತಿ ಖಂಡಿಸಿ ರಾಜ್ಯವ್ಯಾಪ್ತಿ ಕರೆ ನೀಡಿದ್ದ ಬಂದ್‍ಗೆ ಬೆಂಬಲಿಸಿ ಬೆಳಗ್ಗೆ 8.30ಕ್ಕೆ ಕುಶಾಲನಗರದಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು, ಕಾರ್ಯಕರ್ತರು ಕುಶಾಲನಗರ ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಬಳಿ ರಸ್ತೆ ತಡೆ ನಡೆಸಲು ಯತ್ನಿಸಿದರು. ಈ ಸಂದರ್ಭ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೊಲೀಸ್ ಬಸ್‍ನಲ್ಲಿ ತುಂಬಿಸಿ ಕರೆದೊಯ್ದರು. ಕಾಂಗ್ರೆಸ್ ಮುಖಂಡ ಹಾಗೂ ಇಂಟೆಕ್ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ 11 ಗಂಟೆಗೆ ರಾಜ್ಯ ರೈತ ಸಂಘ ಹಾಗೂ ಉಳುವ ಯೋಗಿ ಹಸಿರು ಸೇನೆ ರೈತ ಸಂಘದ ಕಾರ್ಯಕರ್ತರು ಅರಣ್ಯ ತಪಾಸಣಾ ಗೇಟ್ ಬಳಿ ಬಂದು ಸರಕಾರದ ಕೃಷಿ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿದರು. ಇಂದಿನ ಪ್ರತಿಭಟನೆ ನಿರತ 50 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

ಸುಂಟಿಕೊಪ್ಪ: ಕರ್ನಾಟಕ ಬಂದ್‍ಗೆ ನಿರಸ ಪ್ರತಿಕ್ರಿಯೆ ಉಂಟಾಗಿದೆ. ಎಂದಿನಂತೆ ಸರಕಾರಿ ಕಚೇರಿ ಹಾಗೂ ಅಂಗಡಿಗಳು ತೆರೆದು ಕಾರ್ಯಚಟುವಟಿಕೆ ನಡೆದವು.

ಬಂದ್ ಕರೆ ನೀಡಿದ ರೈತ ಸಂಘ ಹಾಗೂ ವಿವಿಧ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಜೆಡಿಎಸ್ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಬಂದ್‍ನಿಂದ ವಿಮುಖರಾಗಿದ್ದರು. ಕೆಎಸ್‍ಆರ್‍ಟಿಸಿ ಬಸ್‍ಗಳು ಆಗಮ್ಮೋ ಈಗೊಮ್ಮೆ ಸಂಚರಿಸುತ್ತಿದ್ದವು. ಆದರೆ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿತ್ತು. ಆಟೋರಿಕ್ಷಾ, ಬಾಡಿಗೆ ವಾಹನಗಳ ಸಂಚಾರ ಎಂದಿನಂತಿದ್ದವು. ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಬ್ಯಾಂಕ್, ಕಂದಾಯ ಕಚೇರಿ, ಚೆಸ್ಕಾಂ ಇಲಾಖೆ, ಗ್ರಾ.ಪಂ. ಕೃಷಿ ಇಲಾಖೆ, ಬಿಎಸ್‍ಎನ್‍ಎಲ್ ಎಂದಿನಂತೆ ಕಾರ್ಯಚರಿಸಿದ್ದರೂ ವಿರಳವಾಗಿ ಗ್ರಾಹಕರು ಆಗಮಿಸಿದರು. ತೋಟಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳು ಮುಂಜಾನೆಯೇ ಸಂಚರಿಸಿದವು. ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರು ಎಂದಿನಂತೆ ಕೆಲಸ ನಿರ್ವಹಿಸಿದರು. ವರ್ತಕರು ತಮ್ಮ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದರು. ಪಟ್ಟಣದಲ್ಲಿ ಜನರ ಓಡಾಟ ಮಾತ್ರ ಕಡಿಮೆಯಾಗಿತ್ತು.

ಕೂಡಿಗೆ: ಕೂಡಿಗೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಪಿ. ಹಮೀದ್ ನೇತೃತ್ವದಲ್ಲಿ ಕೂಡಿಗೆ ಸರ್ಕಲ್ ಮತ್ತು ಮುಖ್ಯ ರಸ್ತೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಬಂದ್ ಮಾಡಲಾಗಿತ್ತು.

ಶನಿವಾರಸಂತೆ: ರೈತಪರ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಸ್ಪಂದಿಸಿ ಶಿವರಾಮೇಗೌಡರ ಕರವೇ ಶನಿವಾರಸಂತೆ ಹೋಬಳಿ ಹಾಗೂ ತಾಲೂಕು ಯುವ ಘಟಕದ ಕಾರ್ಯಕರ್ತರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಕಾರ್ಯಕರ್ತರು ಪಟ್ಟಣದ ನಾಡಕಚೇರಿಗೆ ತೆರಳಿ ರೈತ ವಿರೋಧಿ ಶಾಸನಗಳನ್ನು ವಿರೋಧಿಸಿ ಮುಂದೆ ಸರಕಾರ ರೈತರಿಗೆ ಅನುಕೂಲಕರ ಶಾಸನ ಮಾಡುವಂತೆ ಆಗ್ರಹಿಸಿ ರಾಜ್ಯ ಸರಕಾರಕ್ಕೆ ಕಂದಾಯ ಅಧಿಕಾರಿ ನಂದಕುಮಾರ್ ಮೂಲಕ ಮನವಿ ಸಲ್ಲಿಸಿದರು.

ಕರವೇ ಹೋಬಳಿ ಘಟಕದ ಅಧ್ಯಕ್ಷ ಆನಂದ್, ತಾಲೂಕು ಘಕಟದ ಅಧ್ಯಕ್ಷ ಪ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್, ಪ್ರಮುಖರಾದ ನಿಡ್ತ ಗ್ರಾಮದ ಅಧ್ಯಕ್ಷ ಯತೀಶ್, ಮೋಹನ್, ರಂಜಿತ್, ಹರೀಶ್, ರಮೇಶ್, ಎಂ.ಸಿ. ಅರುಣ್ ಕುಮಾರ್, ರಾಜು, ಅರುಣ್ ಇತರ 20 ಮಂದಿ ಕಾರ್ಯಕರ್ತರು ಹಾಜರಿದ್ದರು.

ಮುಳ್ಳೂರು: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ರೈತ ವಿರೋಧಿ ನೀತಿ ಮತ್ತು ರಾಜ್ಯ ಸರಕಾರದ ಜನವಿರೋಧಿ ಕ್ರಮಗಳನ್ನು ಖಂಡಿಸಿ ರಾಜ್ಯ ವ್ಯಾಪಿ ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯ ಮೂಲಕ ಬೆಂಬಲ ವ್ಯಕ್ತಪಡಿಸಿ ಉಪ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಕೊಡ್ಲಿಪೇಟೆಯ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು, ದಲಿತ ಹಾಗೂ ಕನ್ನಡಪರ ಸಂಘಟನೆಗಳ ಪ್ರಮುಖರು, ಹೋಬಳಿ ವ್ಯಾಪ್ತಿಯ ರೈತರು, ಕರವೇ ಹಾಗೂ ಆಟೋ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪಟ್ಟಣದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಸಹಕರಿಸಿದರು.

ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ನೀರುಗುಂದ ಸೋಮಣ್ಣ, ವಲಯ ಕಾಂಗ್ರೆಸ್ ಅಧ್ಯಕ್ಷ ಔರಂಗ್ ಜೇಬ್, ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರಾದ ಕೆ.ಆರ್. ಚಂದ್ರಶೇಖರ್, ಎಸ್.ಡಿ. ತಮ್ಮಯ್ಯ, ಯತೀಶ್, ವಸಂತ್, ಸೋಮಣ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.