ಮಡಿಕೇರಿ, ಸೆ. 28: ಕೊಡಗು ಜಿಲ್ಲೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳಲ್ಲಿ ರೂ.1711.28 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಮಾಹಿತಿ ನೀಡಿದ್ದಾರೆ. ಸದನದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.ವೀಣಾ ಅಚ್ಚಯ್ಯ ಅವರು ಕರ್ನಾಟಕದ ಕಾಶ್ಮೀರವೆಂದೇ ಖ್ಯಾತಿ ಪಡೆದ ಕೊಡಗು ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಹಾಗೂ ರೂಪಿಸಿರುವ ಪ್ರವಾಸಿ ಸ್ನೇಹಿ ಯೋಜನೆಗಳೇನು ಮತ್ತು ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸರ್ಕಾರ ಕಳೆದ 3 ವರ್ಷಗಳಲ್ಲಿ ಎಷ್ಟು ಅನುದಾನದಲ್ಲಿ ಕಾಮಗಾರಿ ಕೈಗೊಂಡಿದೆ ಎಂಬ ಬಗ್ಗೆ ಸದನದಲ್ಲಿ ಪ್ರವಾಸೋದ್ಯಮ ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಸಿ.ಟಿ.ರವಿ ಅವರನ್ನು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಸಚಿವರು; ಕಳೆದ 3 ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರವಾಸಿ ಮೂಲ ಸೌಲಭ್ಯ ಅಭಿವೃದ್ಧಿಗೊಳಿಸಲು ರೂ.1711.28 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಎಂದು ಉತ್ತರಿಸಿದರು. ಬಳಿಕ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತ ಹಿನ್ನಲೆಯಲ್ಲಿ ಪರಿಸರ ಸ್ನೇಹಿ ಸುಸ್ಥಿರ ಹಾಗೂ ಪ್ರವಾಸಿ ಸ್ನೇಹಿ (ಮೊದಲ ಪುಟದಿಂದ) ಪ್ರವಾಸೋದ್ಯಮವನ್ನು ಉತ್ತೇಜಿಸಲು, ಸರ್ಕಾರ ಕ್ರಮ ಕೈಗೊಂಡಿರುವ ವಿವರಗಳನ್ನು ನೀಡಬೇಕು ಎಂದು ವೀಣಾ ಅಚ್ಚಯ್ಯ ಪ್ರಶ್ನಿಸಿದರು.

ಜನವರಿ 2019 ರಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮೂರು ದಿನಗಳ ಕಾಲ ಕೊಡಗು ಪ್ರವಾಸಿ ಉತ್ಸವವನ್ನು ರೂ.1 ಕೋಟಿ ವೆಚ್ಚದಲ್ಲಿ ಆಚರಿಸಲಾಗಿದೆ, ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ; ಭಾರತ ಸರ್ಕಾರದ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಸಂಘ ಸಂಸ್ಥೆಗಳ ಜೊತೆಗೂಡಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗಿದೆ, ಪ್ರವಾಸೋದ್ಯಮವನ್ನು ಉತ್ತೇಜಿಸಲು ಸ್ಥಳೀಯ ಪ್ರವಾಸೋದ್ಯಮ ಪಾಲುದಾರರೊಂದಿಗೆ 2019ರ, ಜುಲೈ, 19ರಂದು ಕನೆಕ್ಟ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಉತ್ತರಿಸಿದ್ದಾರೆ.