ವೀರಾಜಪೇಟೆ, ಸೆ. 28: ಇತ್ತೀಚೆಗೆ ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ ಕೃಷಿ-ಭೂಕಾಯ್ದೆ (ತಿದ್ದುಪಡಿ) ವಿರೋಧಿಸಿ ರಾಜ್ಯದ ರೈತ ಪರ ಸಂಘಟನೆಗಳು ಆಹ್ವಾನ ನೀಡಿದ್ದ ಕರ್ನಾಟಕ ಬಂದ್‍ಗೆ ವೀರಾಜಪೇಟೆ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ವೀರಾಜಪೇಟೆ ನಗರದ ಶೇ. 75 ರಷ್ಟು ಅಂಗಡಿ-ಮಳಿಗೆಗಳು ಮುಚ್ಚಲ್ಪಟ್ಟಿದ್ದವು. ಖಾಸಗಿ ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಸರಕಾರಿ ಕಚೇರಿಗಳು, ಬ್ಯಾಂಕ್‍ಗಳು ಕಾರ್ಯ ನಿರ್ವಹಿಸಿದವು. ಬಂದ್ ಪರ ಸಂಘಟನೆಗಳಾದ ಕಾಂಗ್ರೆಸ್, ಜೆ.ಡಿ.ಎಸ್., ಸಿ.ಪಿ.ಐ, ಸಿ.ಪಿ.ಎಂ, ಎಸ್.ಡಿ.ಪಿ.ಐ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಕ್ಷಣಾ ವೇದಿಕೆ, ಕಾರ್ಮಿಕ ಸಂಘಟನೆಗಳಾದ ಎ.ಐ.ಟಿ.ಯು.ಸಿ, ಸಿ.ಐ.ಟಿ.ಯು, ತಾಲೂಕು ರೈತ ಹಾಗೂ ಕಾರ್ಮಿಕ ರಕ್ಷಣಾ ವೇದಿಕೆ, (ಮೊದಲ ಪುಟದಿಂದ) ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮಹಿಳಾ ವಿಭಾಗಗಳ ನೂರಾರು ಕಾರ್ಯಕರ್ತರು ನಗರದ ದೊಡ್ಡಟ್ಟಿ ಚೌಕಿಯಿಂದ ಮೆರವಣಿಗೆ ಹೊರಟು ಗಡಿಯಾರ ಕಂಬದ ಬಳಿ ಪ್ರತಿಭಟಿಸಿದರು. ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಬಿ.ಜೆ.ಪಿ. ಸರಕಾರದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿಧಾನ ಪರಿಷತ್‍ನ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ರಾಷ್ಟ್ರದ ಬೆನ್ನೆಲುಬಾದ ಕೋಟಿಗಟ್ಟಲೆ ರೈತರಿಗೆ ಮಾರಕ ವಾಗಿರುವ ಕರಾಳ ಮಸೂದೆಗಳನ್ನು ಜಾರಿಗೆ ತರುವುದರ ಮೂಲಕ ಕೇಂದ್ರದ ಬಿ.ಜೆ.ಪಿ. ಸರಕಾರ ರೈತರಿಗೆ ಮಾರಕವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಗಳೊಂದಿಗೆ ಕನಿಷ್ಟ ಸಮಾಲೋಚನೆ ಯನ್ನು ಮಾಡದೆ ಮಸೂದೆಗಳನ್ನು ಅಂಗೀಕರಿಸುವಂತೆ ಮಾಡಿದ್ದಾರೆ. ಮಸೂದೆಗಳು ರೈತರ ಹಿತದೃಷ್ಟಿಯಿಂದ ಕೂಡಿದೆ ಎಂದಾದರೆ ವಿರೋಧ ಪಕ್ಷಗಳ ಮುಂದೆ ಇಡಬಹುದಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತಾಪಿ ವರ್ಗದ ಶತ್ರುಗಳೆಂದು ಟೀಕಿಸಿದರು. ಜ್ಯಾತ್ಯಾತೀತ ಜನತಾದಳದ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, ಎಸ್.ಎಚ್. ಮತೀನ್, ಕಾಂಗ್ರೆಸ್ಸಿನ ಮುಹಮ್ಮದ್ ರಾಫಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಇ.ಎಂ. ಸಿರಾಜ್, ಎಸ್.ಡಿ.ಪಿ.ಐ.ನ ಸಾಬಿತ್ ಮುಂತಾದವರು ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ತಾಲೂಕು ರೈತ ವೇದಿಕೆಯ ಪಡಿಕ್ಕಲ್ ಕುಸುಮಾವತಿ ಚಂದ್ರಶೇಖರ್, ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಎಚ್.ಆರ್ ಪರಶುರಾಮ್, ಎಚ್.ಎಸ್. ಕೃಷ್ಣಪ್ಪ, ರಾಫೀಕ್ ನವಲಗುಂದ, ಎಚ್.ವಿ.ಜಯ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ತಾಲೂಕು ತಹಶೀಲ್ದಾರ್ ನಂದೀಶ್ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ವಿರುದ್ಧ ಆಕ್ರೋಶ: ಸರಕಾರಗಳ ವಿರುದ್ಧದ ಪ್ರತಿಭಟನೆಗೆ ಬಿ.ಜೆ.ಪಿ. ಕಾರ್ಯಕರ್ತರು ಪ್ರತಿ ಪ್ರತಿಭಟನೆ ನಡೆಸಿದ್ದು ಇಂದಿನ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದ್ದು ಹಾಗೂ ಇಂದು ಮುಚ್ಚಿದ ಅಂಗಡಿಗಳನ್ನು ಬಲಾತ್ಕಾರವಾಗಿ ತೆರೆಸಿದ್ದು ಗೂಂಡಾಗಿರಿಯ ಪ್ರವೃತ್ತಿಯಾಗಿದೆ. ಇದನ್ನು ಖಂಡಿಸುವುದಾಗಿ ಜನಾತಾ ದಳದ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್ ‘ಶಕ್ತಿ’ಗೆ ತಿಳಿಸಿದರು.

ಗೋಣಿಕೊಪ್ಪಲಿನಲ್ಲಿ ಬೆಂಬಲ

ರೈತ ಸಂಘದ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು ಹರಿಶ್ಚಂದ್ರಪುರದಿಂದ ಉಮಾಮಹೇಶ್ವರಿ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಸಾಗಿ ರೈತರಿಗೆ ಮಾರಕವಾಗಿರುವ ಮಸೂದೆಗಳನ್ನು ಕೈಬಿಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ,ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿಯ ಮಸೂದೆಗಳು ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.

ಟಿ.ಶೆಟ್ಟಿಗೇರಿಯ ಅಪ್ಪಚಂಗಡ ಮೋಟಯ್ಯ, ಯುಕೋ ಸಂಘಟನೆಯ ಸಂಚಾಲಕ ಮಚ್ಚಮಾಡ ಅನೀಶ್ ಮಾದಪ್ಪ, ರೈತ ಸಂಘದ ಅಮ್ಮತ್ತಿ ಭಾಗದ ಅಧ್ಯಕ್ಷ ಕಾವಡಿಚಂಡ ಗಣಪತಿ ಮಾತನಾಡಿದರು.

ರೈತರು ಪ್ರತಿಭಟನೆಯ ಮೆರವಣಿಗೆಯು ಸಾಗಿ ಬರುತ್ತಿದ್ದಂತೆಯೇ ನಗರದ ಅಂಗಡಿ ಮುಂಗಟ್ಟುಗಳ ವರ್ತಕರು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು. ಆಟೋರಿಕ್ಷಾಗಳು, ಖಾಸಗಿ ಬಸ್‍ಗಳು, ಸರ್ಕಾರಿ ಬಸ್‍ಗಳು ಸಂಚಾರ ನಡೆಸಿದರು. ಬ್ಯಾಂಕ್, ಅಂಚೆ ಕಚೇರಿ ಸರ್ಕಾರಿ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಿದವು. ಕೆಲವು ಬೆರಳೆಣಿಕೆಯ ಅಂಗಡಿ ಮಾತ್ರ ತೆರೆದಿದ್ದವು. ಡಿವೈಎಸ್ಪಿ ಜಯಕುಮಾರ್ ನೇತೃತ್ವದಲ್ಲಿ ಸಿಪಿಐ ರಾಮರೆಡ್ಡಿ ಪೊನ್ನಂಪೇಟೆ ಎಸ್‍ಐ ಡಿ.ಕುಮಾರ್,ಶ್ರೀಮಂಗಲ ಎಸ್‍ಐ ಮಂಚಯ್ಯ, ಗೋಣಿಕೊಪ್ಪ ಎಸ್‍ಐ ಸುರೇಶ್ ಬೋಪಣ್ಣ ಹಾಗೂ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಖಜಾಂಚಿ ಇಟ್ಟಿರ ಸಭಿತ, ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್,ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್,ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶಮಾಚಯ್ಯ, ತಾಣಚ್ಚಿರ ಲೆಹರ್‍ಬಿದ್ದಪ್ಪ, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್‍ಮಾದಪ್ಪ, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ನಲ್ಲೂರು ಅಧ್ಯಕ್ಷ ತೀತರಮಾಡ ರಾಜ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಮಿದೇರಿರ ನವೀನ್, ಕಾಂಗ್ರೆಸ್ ಮುಖಂಡರಾದ ತೀತಿರ ಧರ್ಮಜ, ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ, ಮುಕ್ಕಾಟೀರ ಸಂದೀಪ್, ಚೆಟ್ಟಿಮಾಡ ರಾಬಿನ್ ಬೋಪಣ್ಣ, ಎ.ಜೆ. ಬಾಬು ಹಾಗೂ ವಿವಿಧ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಿದ್ದಾಪುರ: ಸಿದ್ದಾಪುರದಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದಿಲ್ಲ. ಬಂದ್ ಹಿನ್ನೆಲೆಯಲ್ಲಿ ಬಸ್‍ಗಳು ಸಂಚಾರ ಇರಲಿಲ್ಲ. ಇದರಿಂದಾಗಿ ಜನರ ಓಡಾಟ ವಿರಳವಾಗಿತ್ತು. ಎಂದಿನಂತೆ ಸಿದ್ದಾಪುರ ದಲ್ಲಿ ವ್ಯಾಪಾರ ವ್ಯವಹಾರಗಳು ನಡೆಯುತ್ತಿದ್ದವು ಸಿದ್ದಾಪುರದ ಹಮಾಲಿ ಕಾರ್ಮಿಕ ಸಂಘಟನೆ ವತಿಯಿಂದ ಬಸ್ ನಿಲ್ದಾಣದ ಬಳಿಯಿರುವ ಅಂಚೆ ಕಚೇರಿ ಎದುರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಹಮಾಲಿ ಕಾರ್ಮಿಕರ ಜಿಲ್ಲಾಧ್ಯಕ್ಷ ಪಿಆರ್ ಭರತ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಅಯ್ಯಾ, ರಾಜೇಶ್ ಇನ್ನಿತರರು ಹಾಜರಿದ್ದರು.

ನೆಲ್ಲಿಹುದಿಕೇರಿ: ಸೋಮವಾರ ದಂದು ಕರೆ ನೀಡಿದ್ದ ಬಂದ್ ಬೆಂಬಲಿಸಿ ನೆಲ್ಲಿಹುದಿಕೇರಿ ಸಿಪಿಎಂ ಪಕ್ಷದ ವತಿಯಿಂದ ನೆಲ್ಯಹುದಿ ಕೇರಿ ಪಟ್ಟಣದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು ಈ ಸಂದರ್ಭ ಪಕ್ಷದ ಪ್ರಮುಖರಾದ ಭರತ್, ಮೋನಪ್ಪ ಇನ್ನಿತರರು ಹಾಜರಿದ್ದರು.

ಅಮ್ಮತ್ತಿ: ಕೇಂದ್ರ ಸರ್ಕಾರ ತಂದಿರುವ ರೈತ ವಿರೋಧಿ ಮಸೂಧೆಯನ್ನು ಖಂಡಿಸಿ ಜಿಲ್ಲೆಯ ರೈತ ಸಂಘ ಹಾಗು ವಿವಿಧ ಪಕ್ಷ - ಸಂಘಟನೆಗಳು ಕರೆ ನೀಡಿದ್ದ ಕೊಡಗು ಬಂದ್‍ಗೆ ಅಮ್ಮತ್ತಿಯಲ್ಲಿ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆಯಿಂದಲೇ ಜನಜೀವನ ಎಂದಿನಂತೆ ಸಾಗಿತ್ತು. ಆಟೋ - ಟ್ಯಾಕ್ಸಿಗಳು ಎಂದಿನಂತೆ ರಸ್ತೆಗಿಳಿದಿದ್ದವು. ವಿರಳ ಅಂಗಡಿಗಳು ಮಾತ್ರ ಮುಚ್ವಿದ್ದವು.

ಶ್ರೀಮಂಗಲ: ಶ್ರೀಮಂಗಲದಲ್ಲಿ ಬಂದ್‍ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀಮಂಗಲದಲ್ಲಿ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದಿದ್ದರೆ ಕೆಲವು ವ್ಯಾಪಾರ ಮಳಿಗೆಗಳು ಸಾಂಕೇತಿಕ ಬೆಂಬಲ ನೀಡಿ ಬೆಳಿಗ್ಗೆ 10 ಗಂಟೆಯವರೆಗೆ ಮುಚ್ಚಿದ್ದವು. ಟಿ.ಶೆಟ್ಟಿಗೇರಿಯಲ್ಲಿ ಕೆಲವು ವರ್ತಕರು ಮಧ್ಯಾಹ್ನ 12 ಗಂಟೆಯವರೆಗೆ ಮಳಿಗೆಗಳನ್ನು ಮುಚ್ಚಿ ಬಂದ್‍ಗೆ ಸಾಂಕೇತಿಕ ಬೆಂಬಲ ಸೂಚಿಸಿದರು. ಆದರೆ ಬಹಳಷ್ಟು ಮಳಿಗೆಗಳು ಎಂದಿನಂತೆ ತೆರೆದಿತ್ತು.

ಟಿ.ಶೆಟ್ಟಿಗೇರಿ, ಹುದಿಕೇರಿ, ಶ್ರೀಮಂಗಲದಲ್ಲಿ ವಾರದ ಸಂತೆ ನಡೆಯಿತು. ಕುಟ್ಟದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

ಪೆÇನ್ನಂಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಕಾಯಿದೆಗಳು ರೈತ ವಿರೋಧಿ ಎಂದು ಆಪಾದಿಸಿ ರೈತ ಪರ ಸಂಘಟನೆಗಳು ಇಂದು ಕರೆ ನೀಡಿದ್ದ ಬಂದ್‍ಗೆ ಪೆÇನ್ನಂಪೇಟೆ ಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತ ವಾಯಿತು. ಅಂಗಡಿ ಮುಂಗಟ್ಟು ಗಳು, ಹೊಟೇಲ್ ಎಂದಿನಂತೆ ತೆರೆದಿದ್ದವು. ಆಟೋ, ಖಾಸಗಿ ಬಸ್ ಹಾಗೂ ವಾಹನ ಸಂಚಾರ ಇತ್ತು. ಜನ ಜೀವನ ಸಹಜವಾಗಿತ್ತು.

ಕಡಂಗ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಇಂದು ಕರೆನೀಡಿದ್ದ ಬಂದ್‍ಗೆ ಕಡಂಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಸ್ ಸಂಚಾರ ವಿರಳ ವಾಗಿತ್ತು ಆಟೋ ಸಂಚಾರ ಎಂದಿನಂತೆ ಇದ್ದು, ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಸಾರ್ವಜನಿಕರ ಓಡಾಟ ಸಹಜ ಸ್ಥಿತಿಯಲ್ಲಿ ಇತ್ತು ಒಟ್ಟಾರೆ ಕಡಂಗದಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.