ಕರಿಕೆ, ಸೆ. 28: ಸುಮಾರು 7 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕರಿಕೆ ಗ್ರಾಮದಲ್ಲಿ ಹತ್ತು ಹಲವು ಸಮಸ್ಯೆಗಳ ನಡುವೆ ನೆಟ್ವರ್ಕ್ ಸಮಸ್ಯೆಯೂ ಗುರುತರವಾಗಿದೆ.

ಸುಮಾರು 7, 8 ತಿಂಗಳುಗಳಿಂದÀ ಕರಿಕೆ ಗ್ರಾಮದಲ್ಲಿರುವ ಬಿ.ಎಸ್.ಎನ್.ಎಲ್ ಕಚೇರಿಯು ಸಿಬ್ಬಂದಿಗಳಿಲ್ಲದೆ ಅನಾಥವಾಗಿದೆ. ಈ ಕಚೇರಿಯಲ್ಲಿ 2 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು. ಈ ಪೈಕಿ ಒಬ್ಬರು ಇತ್ತೀಚೆಗೆ ಸಾವನ್ನಪ್ಪಿದ್ದು, ಇದೀಗ ಒಬ್ಬರು ಖಾಸಗಿ ಸಿಬ್ಬಂದಿ ಮಾತ್ರ ವಾರದಲ್ಲಿ ಒಂದೆರಡು ದಿನಗಳು ಬಂದು ಹೋಗುತ್ತಿದ್ದಾರೆ. ರೂ. 18,500 ಮಾಸಿಕ ವೇತನವನ್ನು ರೂ.8,000 ಸಾವಿರಕ್ಕೆ ಇಳಿಸಿದ್ದು, ಇದೀಗ ಮತ್ತೆ ರೂ.6,500 ಕ್ಕೆ ಇಳಿಸಲಾಗಿದೆ. ಈ ವೇತನವೂ ಅನೇಕ ತಿಂಗಳುಗಳಿಂದ ಸರಿಯಾಗಿ ಸಿಗುತ್ತಿಲ್ಲವೆಂಬುದು ಹಲವರ ಆರೋಪವಾಗಿದೆ. ಈ ಕಾರಣದಿಂದಾಗಿ ಹಲವರು ಕೆಲಸ ತ್ಯಜಿಸಿದ್ದಾರೆ ಎನ್ನಲಾಗಿದೆ. ಕಚೇರಿಯಲ್ಲಿನ ಜನರೇಟರ್ ಹಾಳಾಗಿ 1 ವರ್ಷಗಳು ಕಳೆಯಿತಾದರೂ ಇನ್ನೂ ಕೂಡ ಅದನ್ನು ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಈ ಹಿನ್ನೆಲೆ ವಿದ್ಯುತ್ ಕೈಕೊಟ್ಟರೆ ನೆಟ್ವರ್ಕ್ ಕೂಡ ಕಡಿತವಾಗುತ್ತದೆ. ಪ್ರಸ್ತುತ ಇರುವ ಬೆರಳೆಣಿಕೆಯಷ್ಟ್ಟು ಸ್ಥಿರ ದೂರವಾಣಿ ಸಂಪರ್ಕ ಕೂಡ 7, 8 ತಿಂಗಳುಗಳಿಂದ ಚಾಲನೆಯಲಿಲ್ಲ.

ಪ್ರಯೋಜನಕ್ಕೆ ಬಾರದÀ ಟವರ್ - ಕೇರಳದ ಸಿಗ್ನಲ್‍ಗೆ ಬೆಟ್ಟ ಏರುವ ಪರಿಸ್ಥಿತಿ

ಕರಿಕೆ ಗ್ರಾಮದಲ್ಲಿರುವ ಏಕೈಕ ಬಿ.ಎಸ್.ಎನ್.ಎಲ್ ಟವರ್ ಯಾವುದೇ ಪ್ರಯೋಜನವಿಲ್ಲದಂತಾಗಿದ್ದು, ಗಿಡಗಂಟಿಗಳ ನಡುವೆ ಅನಾಥವಾಗಿದೆ. ಕೊರೊನಾ ಹಿನೆÀ್ನಲೆ ಶಾಲಾ ವಿದ್ಯಾರ್ಥಿಗಳು ಆನ್‍ಲೈನ್ ಶಿಕ್ಷಣ ಅವಲಂಬಿಸುತ್ತಿರುವ ಈ ನಡುವೆ ಕರಿಕೆ ಗ್ರಾಮದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತ ಪರಿಸ್ಥಿತಿ ಉಂಟಾಗಿದೆ. ಹಲವು ಭಾರೀ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರನ್ನು ನೀಡಿದರೂ ಯಾವುದೇ ಪ್ರಯೋಜನ ವಾಗಿಲ್ಲ. ಗ್ರಾಮಸ್ಥರು ಕೇರಳದ ಐಡಿಯಾ, ಏರ್‍ಟೆಲ್, ಜಿಯೋ ಸಂಪರ್ಕ ಪಡೆದು ಬೆಟ್ಟದ ಮೇಲೆ ಏರಿ ತಮ್ಮ ಮಕ್ಕಳಿಗೆ ಆನ್ ಲೈನ್ ತರಗತಿಯಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿ ಕೂಡ ಎದುರಾಗಿದೆ.

ಆದಷ್ಟು ಬೇಗ ಈ ಕಚೇರಿಯಲ್ಲಿ ಸಿಬ್ಬಂದಿಗಳನ್ನು ನೇಮಿಸಿ ಹಾಗೂ ನೆಟ್‍ವರ್ಕ್ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಸೇರಿದಂತೆ ಕರಿಕೆ ಗ್ರೀನ್ ಸ್ಟಾರ್ ಯುವಕ ಸಂಘದ ಅಧ್ಯಕ್ಷ ಹಾಗೂ ವಾಯ್ಸ್ ಆಫ್ ಕರಿಕೆ ಗುಂಪಿನವರು ಆಗ್ರಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಗ್ರಾಮದ ಸಂಪರ್ಕ ವ್ಯವಸ್ಥೆಗೆ ಅಗತ್ಯ ಕ್ರಮವಹಿಸಬೇಕಾಗಿದೆ. -ಸುಧೀರ್ ಹೊದ್ದೆಟ್ಟಿ