ರಾಜ್ಯದ ವಿವಿಧೆಡೆ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು, ಸೆ.28 : ರೈತ, ಕಾರ್ಮಿಕ ವಿರೋಧಿ ವಿಧೇಯಕಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ರೈತಪರ, ಕಾರ್ಮಿಕ, ದಲಿತ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಸಾವಿರಾರು ಮಂದಿ ವಿವಿಧ ಕಡೆಗಳಿಂದ ಮೆರವಣಿಗೆ ಮೂಲಕ ಟೌನ್ ಹಾಲ್ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ರೈತರಿಗೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೂಡ ಸಾಥ್ ನೀಡಿದರು. ಪುರಭವನದ ಬಳಿ ರೈತರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಇದು ಸಾಂಕೇತಿಕ ಪ್ರತಿಭಟನೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಹೊಟೇಲ್ ಉದ್ಯಮದವರು ನಮ್ಮ ಪ್ರತಿಭಟನೆಗೆ ಬೆಂಬಲ ನೀಡಬೇಕಿತ್ತು. ನಾವು ಬೆಳೆದ ಅನ್ನ ಮಾರಿ ಬದುಕುತ್ತಿರುವ ನೀವು ನಮಗೆ ಬೆಂಬಲ ನೀಡಬೇಕಿತ್ತು ಎಂಬ ಆಕ್ರೋಶ ವ್ಯಕ್ತಪಡಿಸಿದರು. ಕೃಷಿಗೆ ಮಾರಕವಾದ ಶಾಸನವಾದ ಈ ಕಾಯ್ದೆಗಳನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ನಾನು ರೈತರ ಪರವೆಂದ ಸಿಎಂ ಬಿಎಸ್‍ವೈ

ಬೆಂಗಳೂರು, ಸೆ.28 : ನಾನು ರೈತನ ಪುತ್ರನಾಗಿದ್ದು, ಸದಾಕಾಲ ರೈತರ ಪರವಾಗಿಯೇ ಇರುತ್ತೇನೆ. ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ. ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಟಕ ಬಂದ್ ವಿಚಾರ ಸಂಬಂಧ ಗೃಹ ಕಚೇರಿಯಲ್ಲಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘಟನೆಗಳು, ಕಾಂಗ್ರೆಸ್‍ನವರ ಪಿತೂರಿಯಿಂದ ಧರಣಿ ನಡೆಯುತ್ತಿದೆ. ರೈತ ಮುಖಂಡರನ್ನು ಕರೆಸಿ ಮಾತಾಡುವ ಪ್ರಯತ್ನ ಮಾಡಿದ್ದೆ. ಈ ಕಾಯ್ದೆಗಳಿಂದ ಆಗುವ ಅನುಕೂಲದ ಬಗ್ಗೆ ವಿವರಿಸಿದ್ದೇನೆ. ಆದರೆ, ಅವರು ಪ್ರತಿಭಟನೆ ಮಾಡುವ ಉದ್ದೇಶದಿಂದ ಬಂದಿದ್ದಾರೆ. ನಾನು ಅಧಿಕಾರಕ್ಕಾಗಿ ಅಂಟಿ ಕುಳಿತಿಲ್ಲ, ರೈತರ ಪರವಾಗಿ ಇದ್ದೇನೆ. ರೈತರಿಗೆ ಕೆಟ್ಟದ್ದಾಗಲೂ ನಾನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ತಮ್ಮ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಬಹುದು. ಎಪಿಎಂಸಿ ಬಾಗಿಲನ್ನು ನಾವು ಮುಚ್ಚಿಲ್ಲ. ರೈತರು ಎಪಿಎಂಸಿಯಲ್ಲಿ ಬೇಕಾದರೂ ಬೆಳೆ ಮಾರಾಟ ಮಾಡಬಹುದಾಗಿದೆ. 6 ತಿಂಗಳಿಂದ 1 ವರ್ಷದವರೆಗೆ ನೋಡಿ ನಿಮಗೇ ತಿಳಿಯುತ್ತದೆ ಎಂದು ತಿಳಿಸಿದ್ದಾರೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರವಾಗಿ ಈ ತಿದ್ದುಪಡಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು. ಕೃಷಿಗೆ ಉಪಯೋಗವಿಲ್ಲದ ಭೂಮಿಯಲ್ಲಿ ಕೈಗಾರಿಕೆ ನಡೆಸಬಹುದು. ಅದರೆ, ನೀರಾವರಿ ಜಮೀನಿನಲ್ಲಿ ಕೃಷಿಯನ್ನೇ ಮಾಡಬೇಕು. ಈ ರೀತಿಯ ನಿಯಮ ತಿದ್ದುಪಡಿ ವಿಧೇಯಕದಲ್ಲಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‍ನಿಂದ 2 ಕೋಟಿ ಸಹಿ ಸಂಗ್ರಹ

ಬೆಂಗಳೂರು, ಸೆ.28 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಅ.2ರ ಗಾಂಧಿ ಜಯಂತಿಯಂದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಕೆಪಿಸಿಸಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅ.10 ರಂದು ರೈತ ಸಮಾವೇಶ ನಡೆಸಲಾಗುವುದು. ಅ.30ರೊಳಗೆ ಬಿಜೆಪಿ ನೀತಿ ವಿರುದ್ಧ ದೇಶಾದ್ಯಂತ ಜನರಿಂದ 2 ಕೋಟಿ ಸಹಿ ಸಂಗ್ರಹಿಸಿ ಅದನ್ನು ಎಐಸಿಸಿ ನಾಯಕಿ ಸೋನಿಯಾಗಾಂಧಿ ಮೂಲಕ ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದರು. ಮೋದಿ ಹಾಗೂ ಯಡಿಯೂರಪ್ಪ ರೈತರ ಪರ ಕಾಯ್ದೆ ಜಾರಿಗೆ ತರುತ್ತಿದ್ದೇವೆ ಎಂದು ಹೇಳುತ್ತಿದ್ದರಾದರೂ ದೇಶದ ಎಲ್ಲ ರಾಜ್ಯಗಳಲ್ಲಿ ರೈತರ ಪ್ರತಿಭಟನೆ ನಡೆಯುತ್ತಿವೆ. ಪ್ರಧಾನಿ ಮೋದಿ ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಈ ಕಾಯ್ದೆ ಜಾರಿಯಾದರೆ ಕೇವಲ ಸಿರಿವಂತರಷ್ಟೇ ಭೂಮಿ ಖರೀದಿಸುತ್ತಾರೆ. ಆಗ ರೈತರು ಎಲ್ಲಿಗೆ ಹೋಗಬೇಕು. ರೈತರಿಗೆ ಬೆಂಬಲ ಬೆಲೆ ಕೊಡುತ್ತೇವೆಂದು ಮೋದಿ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಚಿವ ಮಾಧುಸ್ವಾಮಿಗೆ ಕೋವಿಡ್

ಬೆಂಗಳೂರು, ಸೆ.28 : ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸಚಿವರು ಇಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಸಚಿವರು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದು ವರದಿ ಪಾಸಿಟಿವ್ ಬಂದ ಹಿನ್ನೆಲೆ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಆತ್ಮೀಯರೂ ಆದ ಜೆ.ಸಿ. ಮಾಧುಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಎಸ್‍ಪಿಬಿಗೆ ಭಾರತರತ್ನ ನೀಡಲು ಒತ್ತಾಯ

ಅಮರಾವತಿ, ಸೆ.28 : ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡುವಂತೆ ಆಂಧ್ರಪ್ರದೇಶ ಸರ್ಕಾರ ಸೋಮವಾರ ಕೇಂದ್ರವನ್ನು ಒತ್ತಾಯಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಸಂಬಂಧ ಪತ್ರ ಬರೆದಿದ್ದು ಎಸ್ಪಿಬಿ ಎಂದು ಖ್ಯಾತವಾಗಿರುವ ಬಾಲಸುಬ್ರಮಣ್ಯಂ ಅವರ ಹೆಸರನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಾಗಿ ಪರಿಗಣಿಸುವಂತೆ ಕೋರಿದ್ದಾರೆ. ಅಂತಹಾ ಶ್ರೇಷ್ಠ ಗಾಯಕನ ಜನ್ಮಸ್ಥಳ ಆಂಧ್ರಪ್ರದೇಶವಾಗಿರುವುದು ನಮ್ಮ ಅದೃಷ್ಟ ಎಂದಿರುವ ಜಗನ್ ಎಸ್ಪಿಬಿ ಅಕಾಲಿಕ ನಿಧನವು ದೇಶಾದಾದ್ಯಂತದ ಲಕ್ಷಾಂತರ ಅಭಿಮಾನಿಗಳಿಗೆ ಮತ್ತು ಅಂತರರಾಷ್ಟ್ರೀಯ ಸಂಗೀತ ಪ್ರೇಮಿಗಳಿಗೂ ಸಾಕಷ್ಟು ಸಂಕಟವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ರೋಹಿಣಿ ಸಿಂಧೂರಿ ಮೈಸೂರು ಡಿಸಿ

ಬೆಂಗಳೂರು, ಸೆ.28 : ಇತ್ತೀಚಿಗಷ್ಟೇ ಮೈಸೂರು ಜಿಲ್ಲಾಧಿಕಾರಿಯಾಗಿ ಬಂದಿದ್ದ ಬಿ. ಶರತ್ ಅವರನ್ನು ರಾಜ್ಯ ಸರ್ಕಾರ ಸೋಮವಾರ ದಿಢೀರ್ ವರ್ಗಾವಣೆ ಮಾಡಿದ್ದು, ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿದೆ. ರಾಜ್ಯ ಸರ್ಕಾರ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಇಂದು ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಆಗಸ್ಟ್ 29 ರಂದು ಕಲಬುರಗಿಯಿಂದ ಮೈಸೂರು ಜಿಲ್ಲಾಧಿಕಾರಿಯಾಗಿ ಬಿ. ಶರತ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಒಂದು ತಿಂಗಳು ತುಂಬುವ ಮೊದಲೇ ಶರತ್ ಅವರನ್ನು ಸ್ಥಳ ನಿಯುಕ್ತಿಗೊಳಿಸದೇ ವರ್ಗಾವಣೆ ಮಾಡಲಾಗಿದೆ.

ಪಾಕ್ ಸೈನಿಕರಿಂದ ಗುಂಡಿನ ದಾಳಿ

ಶ್ರೀನಗರ, ಸೆ.28 : ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದು ದಾಳಿಯಲ್ಲಿ ಭಾರತೀಯ ಯೋಧನೋರ್ವ ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಚಿಲ್ ಸೆಕ್ಟರ್ ಬಳಿ ಪಾಕ್ ಸೈನಿಕರು ಸಣ್ಣ ಪಿರಂಗಿ ಬಳಸಿ ದಾಳಿ ನಡೆಸಿದ್ದಾರೆ. ಪರಿಣಾಮ ಯೋಧನೋರ್ವ ಗಾಯಗೊಂಡಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಸಹ ಗುಂಡಿನ ದಾಳಿ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ನಿಯನ್ನು ಥಳಿಸಿದ ಅಧಿಕಾರಿ ಅಮಾನತು

ಭೂಪಾಲ್, ಸೆ.28 : ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ. ಮಧ್ಯಪ್ರದೇಶ ಡಿಜಿಪಿ ಪುರುಷೋತ್ತಮ ಶರ್ಮಾ, ತನ್ನ ಹೆಂಡತಿ ಮೇಲೆ ಹಲ್ಲೆ ಮಾಡುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿತ್ತು. ಅಧಿಕಾರಿಯನ್ನು ತನ್ನ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.