ಭಾಗಮಂಡಲ, ಸೆ. 28: ಪುಣ್ಯ ನದಿ ಮಾತೆ ಕಾವೇರಿಯ ಕ್ಷೇತ್ರವಾದ ತಲಕಾವೇರಿ ಹಾಗೂ ಭಾಗಮಂಡಲ ದಲ್ಲಿ ಕಾವೇರಿ ತೀರ್ಥೋದ್ಭವ ಸೇರಿ ದಂತೆ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಹಿಂದಿನಿಂದ ನಡೆದು ಬಂದ ಸಂಪ್ರದಾಯಕ್ಕೆ ಒತ್ತು ನೀಡುವಂತಾಗಬೇಕೆಂದು ಇಲ್ಲಿನ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಭಾಗಮಂಡಲ ನಾಗರಿಕರ ಸಭೆಯಲ್ಲಿ ಆಗ್ರಹಿಸಲಾಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ, ಕಾವೇರಿ ಕ್ಷೇತ್ರದಲ್ಲಿ ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯವನ್ನು ತಿರುಚುವ ಕೆಲಸವಾಗುತ್ತಿದ್ದು, ಇದು ಮುಂದುವರೆಯಬಾರದು. ತಕ್ಕ ಮುಖ್ಯಸ್ಥರ ದಾರಿ ತಪ್ಪಿಸುವ ಕೆಲಸವಾದರೆ ನಾವುಗಳು ತಕ್ಕ ಮುಖ್ಯಸ್ಥರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.ಕೋಡಿ ಪೊನ್ನಪ್ಪ ಮಾತನಾಡಿ, ತಕ್ಕ ಸ್ಥಾನ ಎಂಬದು ಹಾಗೂ ತಲಕಾವೇರಿಗೆ ಭಂಡಾರವನ್ನು ತೆಗೆದುಕೊಂಡು ಹೋಗುವದು ಶಾಸನ ಬದ್ಧವಾಗಿ ಬಂದ ಹಕ್ಕಾಗಿದೆ. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರು ಸಾಂಪ್ರದಾಯಿಕ ಆಚರಣೆಗಳನ್ನು ತಿರುಚಲು ಹಸ್ತಕ್ಷೇಪ ಮಾಡುತ್ತಿದ್ದಾರೆ. ಮೊನ್ನೆ ದಿನ ಪತ್ತಾಯಕ್ಕೆ ಅಕ್ಕಿ ಹಾಕುವಾಗ ಬಳ್ಳಡ್ಕ ಕುಟುಂಬದಿಂದ ಅಕ್ಕಿ ತಂದು ತಕ್ಕರು ಮಾತ್ರ ಅಕ್ಕಿ ಹಾಕಬೇಕಾಗಿರುವದು ಕ್ರಮ. ಆದರೆ ತಕ್ಕರು ಅಕ್ಕಿ ಹಾಕಿದ ತಕ್ಷಣ ಹೊರ ಊರಿನಿಂದ ಬಂದವರು ಅಕ್ಕಿ ಹಾಕಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದು ನಮ್ಮ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶವಾಗಿದ್ದು, ಇದಕ್ಕೆ ಅವಕಾಶ ನೀಡುವದಿಲ್ಲ ವೆಂದರು.

ಹೊಸೂರು ಸತೀಶ್‍ಕುಮಾರ್ ಮಾತನಾಡಿ, (ಮೊದಲ ಪುಟದಿಂದ) ದೇವಾಲಯದಲ್ಲಿ ನಡೆದು ಬಂದಿರುವ ಸಾಂಪ್ರದಾಯಿಕ ಆಚರಣೆಗಳನ್ನು ಇತ್ತೀಚಿನ ವರ್ಷಗಳಲ್ಲಿ ತಿರುಚಲಾಗುತ್ತಿದ್ದು, ತಕ್ಕರ ಹಕ್ಕುಗಳಿಗೆ ಅಡ್ಡಿಪಡಿಸಲಾಗುತ್ತಿದೆ. ಇದಕ್ಕೆ ಮೊನ್ನೆ ನಡೆದ ಘಟನೆಯೇ ಸಾಕ್ಷಿ ಎಂದ ಅವರು ಇಂತಹ ಘಟನೆಗಳನ್ನು ಸ್ಥಳೀಯವಾಗಿ ವಿರೋಧಿಸುವದರೊಂದಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕೆಂದರು.

ಪ್ರಮುಖರಾದ ಅಮೆ ಬಾಲಕೃಷ್ಣ, ಕುದುಪಜೆ ಪ್ರಕಾಶ್, ಕುದುಕುಳಿ ಭರತ್ ಇವರುಗಳು ಮಾತನಾಡಿ, ಕಾವೇರಿ ಜಾತ್ರೆ ಸೇರಿದಂತೆ ಇಲ್ಲಿ ನಡೆಯುವ ಎಲ್ಲಾ ಪೂಜಾ ಕಾರ್ಯಗಳಿಗೆ ಕುಪ್ಪಸ, ದಟ್ಟಿ ಧರಿಸಿ ಬರುವದು ಸರಿಯಲ್ಲ. ತಕ್ಕಮುಖ್ಯಸ್ಥರು ಹಾಗೂ ಅವರ ಐವರು ಸಹಾಯಕರಿಗೆ ಮಾತ್ರ ಇದಕ್ಕೆ ಅವಕಾಶ ನೀಡಬೇಕು. ಅಲ್ಲದೆ ಯಾವದೇ ಸ್ಥಾನಗಳಿಲ್ಲದ ವ್ಯಕ್ತಿಗಳು ಕುಪ್ಪಸ ದಟ್ಟಿ ಧರಿಸುವ ಅವಕಾಶವಿಲ್ಲ. ಒಂದು ವೇಳೆ ಇದಕ್ಕೆ ಅವಕಾಶ ನೀಡಿದರೆ ನಾವು ಕೂಡ ನಮ್ಮ ಜನಾಂಗದಿಂದ ಸಮವಸ್ತ್ರ ಧರಿಸಿ ಬರುತ್ತೇವೆ. ಆದ್ದರಿಂದಾಗಿ ಇದಕ್ಕೆ ಅವಕಾಶ ನೀಡಬಾರದೆಂದರು.

ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಕಾವೇರಿ ಕ್ಷೇತ್ರಕ್ಕೆ ಎಲ್ಲರೂ ಭಕ್ತಾದಿಗಳಾಗಿ ಬರಲಿ. ಸಮವಸ್ತ್ರ ಧರಿಸಿ ಬರುವದರಿಂದ ಸಂಘರ್ಷಕ್ಕೆ ಅವಕಾಶವಾಗುತ್ತದೆ. ಆದ್ದರಿಂದ ಜಾತ್ರ್ರೆ ಸಂಬಂಧಿಸಿದ ಪೂಜೆ ಸಂದರ್ಭ ಸಮವಸ್ತ್ರಕ್ಕೆ ಜಿಲ್ಲಾಧಿಕಾರಿಗಳು ಅವಕಾಶ ನೀಡಬಾರದು. ಎಲ್ಲರೂ ಸಮಾನತೆಯಿಂದ ಕಾವೇರಿ ಮಾತೆಯ ಸೇವೆ ಮಾಡುವಂತಾಗಬೇಕೆಂದರು.

ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಗೌಡ ಸಮಾಜ ಕಾರ್ಯದರ್ಶಿ ರವಿ, ಪ್ರಮುಖರಾದ ದೇವಂಗೋಡಿ ಹರ್ಷ, ಹೊಸಗದ್ದೆ ಭಾಸ್ಕರ, ಕುಯ್ಯಮುಡಿ ಮನೋಜ್, ದಂಡಿನ ಜಯಂತ್ ಮಾತನಾಡಿದರು. ಸಭೆಯಲ್ಲಿ ಸ್ಥಳೀಯರು ಭಾಗವಹಿಸಿದ್ದರು.