ಪೆÇನ್ನಂಪೇಟೆ, ಸೆ.28: ದೇಶ ಸೇವೆಯಲ್ಲಿದ್ದಾಗಲೇ ಪ್ರಾಣತ್ಯಾಗ ಮಾಡಿದ ದೇಶ ಸೇವಕರು ಸಮಾಜದಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತಾರೆ ಎಂದು ವೀರಾಜಪೇಟೆ ಸಮೀಪದ ನಲ್ವತ್ತೋಕ್ಲು ಮೊಹಿದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಸಿದ್ದಿಕ್ ಪಾಜ್ಹಿಳಿ ಅವರು ಹೇಳಿದರು.

ಕೋವಿಡ್-19 ಸಾಂಕ್ರಾಮಿಕ ಸೋಂಕಿನಿಂದಾಗಿ ತಿರುವನಂತಪುರಂ ನಲ್ಲಿ ಮೃತರಾದ ಬಿ.ಎಸ್.ಎಫ್. ಯೋಧ ದುದ್ದಿಯಂಡ ಎ.ಮಜೀದ್ ಗೌರವಾರ್ಥ ಅವರ ಹುಟ್ಟೂರಾದ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಅಮೂಲ್ಯ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದರಲ್ಲೂ ದೇಶಸೇವೆ ಸಂದರ್ಭದಲ್ಲಿ ಅಮೂಲ್ಯವಾದ ಮನುಷ್ಯ ಜೀವ ಬಲಿಯಾದರೆ ಅವರು ಸದಾ ಅಮರರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಸಿದ್ದೀಕ್ ಪಾಜ್ಹಿಳಿ ಮಯ್ಯತ್ ನಮಾಜಿನ ನೇತೃತ್ವ ವಹಿಸಿದ್ದರು. ಹಿರಿಯ ವಿದ್ವಾಂಸರಾದ ಮೆಹದಿ ತಂಗಳ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು. ನಲ್ವತ್ತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಗ್ರಾಮಸ್ಥರು, ದಿ.ಯೋಧ ಮಜೀದ್ ಅವರ ಸಂಬಂಧಿಗಳು ಈ ಸಂದರ್ಭ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನರಾದ ಹಿರಿಯ ಧಾರ್ಮಿಕ ಪಂಡಿತರು ಮತ್ತು ಕರ್ಮಶಾಸ್ತ್ರ ತಜ್ಞರಾಗಿದ್ದ ಉಡುಪಿಯ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅವರ ಹೆಸರಿನಲ್ಲೂ ಮಯ್ಯತ್ ನಮಾಜ್ ನಿರ್ವಹಿಸಿ, ಪ್ರಾರ್ಥಿಸಲಾಯಿತು.