ಮಡಿಕೇರಿ, ಸೆ. 27: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಸುರಿದ ಧಾರಾಕಾರ ಮಳೆ ಹಾಗೂ ಭೂ ಕುಸಿತದಿಂದಾಗಿ ಸುಮಾರು 5 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಸರ್ಕಾರ ಮಳೆ ಹಾನಿ ಪರಿಹಾರವಾಗಿ ಇದುವರೆಗೂ ಎಷ್ಟು ಹಣವನ್ನು ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕಂದಾಯ ಸಚಿವ ಆರ್.ಅಶೋಕ್ ಅವರಿಂದ ಮಾಹಿತಿ ಪಡೆದಿದ್ದಾರೆ.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು ಕೊಡಗು ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಭೂಕುಸಿತ ಮತ್ತು ಅತಿವೃಷ್ಟಿಯಿಂದ ಉಂಟಾದ ಹಾನಿಯ ವಿವರ ನೀಡಿದರು. 5 ಮಾನವ ಹಾನಿ, 17 ಜಾನುವಾರು ಹಾನಿ, 342 ಮನೆ ಹಾನಿ, 2 ಗುಡಿಸಲು, 35 ಜಾನುವಾರು ಕೊಟ್ಟಿಗೆ ಹಾನಿ, 41026 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಹಾಗೂ 601.20 ಕೋಟಿಯಷ್ಟು ಮೂಲಭೂತ ಸೌಕರ್ಯ ಹಾನಿಯಾಗಿದೆ ಎಂದರು.
ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ ಅವರ ಪ್ರಕೃತಿ ವಿಕೋಪ ಪಿಡಿ ಖಾತೆಯಲ್ಲಿ ರೂ.70.76ಕೋಟಿ ಮೊತ್ತ ಲಭ್ಯವಿದೆ. ಬಿಡುಗಡೆಗೊಳಿಸಿದ ಪರಿಹಾರದ ಹಣದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಇದುವರೆಗೂ ಕಲ್ಪಿಸಿರುವ ಪರಿಹಾರ ಕ್ರಮಗಳೇನು ಎಂದು ವೀಣಾ ಅಚ್ಚಯ್ಯ ಅವರು ಪ್ರಶ್ನಿಸಿದರು. ಇದಕ್ಕೆ ಕಂದಾಯ ಸಚಿವರು ಕೊಡಗು ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವವರಿಗೆ ಇದುವರೆಗೆ ಕಲ್ಪಿಸಲಾಗಿರುವ ಪರಿಹಾರದ ವಿವರ ನೀಡಿದರು.
ಜಿಲ್ಲೆಯ 9 ಕಾಳಜಿ ಕೇಂದ್ರದಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ಆಶ್ರಯ ಕಲ್ಪಿಸಿದ 710 ಸಂತ್ರಸ್ತರ ನಿರ್ವಹಣೆಗೆ ರೂ. 15.15 ಲಕ್ಷ, ಪ್ರಕೃತಿ ವಿಕೋಪದಿಂದ ಮನೆಯಲ್ಲಿರುವ ದಿನ ನಿತ್ಯ ವಸ್ತುಗಳು ಹಾನಿಯಾದ 82 ಸಂತ್ರಸ್ತ ಕುಟುಂಬಗಳಿಗೆ ತಲಾ ರೂ.10 ಸಾವಿರದಂತೆ ಪರಿಹಾರಕ್ಕೆ ರೂ. 8.20 ಲಕ್ಷ, ಭಾಗಮಂಡಲದಲ್ಲಿ ರಕ್ಷಣಾ ಮತ್ತು ಶೋಧನ ಕಾರ್ಯಾಚರಣೆಗೆ ವೆಚ್ಚ ರೂ. 15.96 ಲಕ್ಷ, ಭಾರಿ ಮಳೆ ಸಂದರ್ಭ ಪರಿಶಿಷ್ಟ ಪಂಗಡದ 343 ಕುಟುಂಬದವರಿಗೆ ಟಾರ್ಪಲ್ ವಿತರಿಸಿದ ವೆಚ್ಚ 6.71 ಲಕ್ಷ ರೂ., 2020-21ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ‘ಎ’ ವರ್ಗದ ಮನೆಗಳಿಗೆ ರೂ.5 ಲಕ್ಷ, ಬಿ ವರ್ಗದ ಮನೆಗಳಿಗೆ ರೂ. 3 ಲಕ್ಷ, ಸಿ ವರ್ಗದ ಮನೆಗಳಿಗೆ ರೂ.50 ಸಾವಿರ, ಕೊಟ್ಟಿಗೆ ಹಾನಿಗೆ ರೂ. 2,100, ಗುಡಿಸಲು ಹಾನಿಗೆ ರೂ.4,100 ಗಳ ಪರಿಹಾರ ವಿತರಣೆಗೆ ಮತ್ತು ಬೆಳೆ ಹಾನಿ ನಷ್ಟ ಪರಿಹಾರ ವಿತರಣೆ ಸಂಬಂಧ ಸಮೀಕ್ಷೆ ಪ್ರಗತಿಯಲ್ಲಿದ್ದು, ನಿಯಾಮನುಸಾರ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.