ಕೂಡಿಗೆ, ಸೆ. 27: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2019-20ನೇ ಸಾಲಿನ. ಜಮಾಬಂದಿ ಕಾರ್ಯಕ್ರಮವು ಆಡಳಿತಾಧಿಕಾರಿ ಸೀಮಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್. ಡಿ. ಹರೀಶ್ ಅವರು 2019-20ನೇ ಸಾಲಿನ ಜಮಾಬಂದಿ ವರದಿಯನ್ನು ಮಂಡಿಸಿದರು.
2019- 20ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಗೆ ಬಂದ ಅನುದಾನದ ವಿವರ, ಗ್ರಾಮ ಪಂಚಾಯತಿ ಕೈಗೊಂಡ ಖರ್ಚುಗಳ ವಿವರ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯ ಹಾಗೂ 14ನೇ ಹಣಕಾಸು ಯೋಜನೆಗಳ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿ ಅನುಮೋದಿಸಲಾಯಿತು.
ಈ ಸಂದರ್ಭ ಮಾತನಾಡಿದ ನೋಡಲ್ ಅಧಿಕಾರಿ ಶಿರಂಗಾಲ ಪ್ರೌಢಶಾಲಾ ಮುಖ್ಯ ಶಿಕ್ಷಕ ಸೋಮಯ್ಯನವರು ಗ್ರಾಮ ಪಂಚಾಯಿತಿಯ ಮನೆ ಕಂದಾಯ ಮತ್ತು ನೀರಿನ ದರ ವಸೂಲಾತಿ ಪ್ರಮಾಣ ಕಡಿಮೆಯಾಗಿದ್ದು, ಇನ್ನು ಮುಂದೆ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಅಭಿಯಾನ ನಡೆಸಿ ತೆರಿಗೆ ವಸೂಲಾತಿ ಹೆಚ್ಚಿಸಬೇಕೆಂದು ಅಭಿಪ್ರಾಯ ಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತ ಅಧಿಕಾರಿ ಸೀಮಾ ರವರು ಶಿರಂಗಾಲ ಗ್ರಾಮಪಂಚಾಯಿತಿಯಲ್ಲಿ ಮನೆ ಕಂದಾಯ ಮತ್ತು ನೀರಿನ ದರ ವಸೂಲಾತಿ ಪ್ರಮಾಣ ಹೆಚ್ಚಿಸಲು ಮುಂದಿನ ವಾರದಲ್ಲಿ ಒಂದು ವಿಶೇಷ ಅಭಿಯಾನ ನಡೆಸಲು ಸಾರ್ವಜನಿಕರ ಸಹಕಾರ ಮುಖ್ಯ.
ಜನರಿಗೆ ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಿ ಒಂದು ವಾರದೊಳಗೆ ಕಡ್ಡಾಯವಾಗಿ ಬಾಕಿ ಉಳಿಸಿಕೊಂಡ ಮನೆ ಕಂದಾಯ ಮತ್ತು ನೀರಿನ ತೆರಿಗೆ ಪಾವತಿಸು ವಂತೆ ನೋಟಿಸ್ ನೀಡುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಗೆ ತಿಳಿಸಿದರು.
ಸಭೆಯಲ್ಲಿ ಶಿರಂಗಾಲ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ ಬಗ್ಗೆ ಚರ್ಚಿಸಲಾಯಿತು. ಚೆಸ್ಕಾಂ ಇಲಾಖೆಯಿಂದ ನೀರಿನ ಘಟಕಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿ ಪತ್ರ ಬರೆಯಲು ತೀರ್ಮಾನಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಗ್ರಾಮ ಪಂಚಾಯಿತಿ ಸಭೆಗೆ ಮಾಹಿತಿಯನ್ನು ನೀಡುತ್ತಾ ಗ್ರಾಮ ಪಂಚಾಯಿತಿ ವತಿಯಿಂದ ಸ್ನಾನದ ಮನೆಯ ನೀರು ಇಂಗಿಸಲು ಇಂಗು ಗುಂಡಿ ನಿರ್ಮಾಣಕ್ಕಾಗಿ ವಿಶೇಷ ಅಭಿಯಾನ ನಡೆಸುತ್ತಿದ್ದು, ನಾಗರಿಕರು ಇದರ ಸದು ಪಯೋಗವನ್ನು ಪಡೆದು ಕೊಳ್ಳುವಂತೆ ಹೇಳಿದರು.