ಮಡಿಕೇರಿ, ಸೆ. 27: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಉಪ ಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಗೋವಿಂದ ಎಂ.ಕಾರಜೋಳ ಅವರನ್ನು ಕಳೆದ ಎರಡು ವರ್ಷಗಳಿಂದ ಸುರಿದ ಮಳೆಯಿಂದ ಕೊಡಗು ಜಿಲ್ಲೆ ಕೊಡ್ಲಿಪೇಟೆ, ಮಡಿಕೇರಿ, ವೀರಾಜಪೇಟೆ ಮಾರ್ಗದ ರಾಜ್ಯ ಹೆದ್ದಾರಿ ರಸ್ತೆಯು ಹಾಳಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದರು.
ಸರ್ಕಾರದ ಗಮನಕ್ಕೆ ಬಂದಿದೆ ಎಂದು ಸಚಿವರು ಉತ್ತರಿಸಿದ್ದಾರೆ. ನಂತರ ಗೋವಿಂದ ಎಂ.ಕಾರಜೋಳ ಅವರನ್ನು ಈ ರಸ್ತೆಯನ್ನು ಮರು ಡಾಂಬರೀಕರಣಗೊಳಿಸಲು ಸರ್ಕಾರ ಮೀಸಲಿಟ್ಟರುವ ಅನುದಾನದ ವಿವರ ನೀಡಬೇಕು ಎಂದು ಅಪ್ಪಚ್ಚು ರಂಜನ್‍ರವರು ಕೇಳಿದರು. ಅದಕ್ಕೆ ಉತ್ತರಿಸಿದ ಗೋವಿಂದ ಎಂ.ಕಾರಜೋಳ ಅವರು 2018-19ನೇ ಸಾಲಿನ ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ಕೊಡ್ಲಿಪೇಟೆ, ಮಡಿಕೇರಿ, ವೀರಾಜಪೇಟೆ ಮಾರ್ಗದ ವೀರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯಾಗಿದ್ದು, ಕೆಲವು ಭಾಗಗಳು ಕೊಚ್ಚಿಹೋಗಿದ್ದು ಭಾಗಗಳನ್ನು ಪುನರ್ ನಿರ್ಮಾಣ ಮಾಡಲಾಗಿದೆ. 2019-20ನೇ ಸಾಲಿನಲ್ಲಿ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಹಾಳಾಗಿರುವ ಆಯ್ದ ಭಾಗಗಳನ್ನು ಅಭಿವೃದ್ಧಿ ಪಡಿಸಲು ಅನುವು ಮಾಡಲಾಗಿದೆ ಎಂದು ಹೇಳಿದರು.
ಬಳಿಕ ಅಪ್ಪಚ್ಚು ರಂಜನ್ ಅವರು ಕಳೆದ ಮೂರು ವರ್ಷಗಳಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ನಬಾರ್ಡ್ ಯೋಜನೆಯಡಿಯಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ಗೋವಿಂದ ಎಂ. ಕಾರಜೋಳ ಅವರನ್ನು ಪ್ರಶ್ನಿಸಿದಾಗ, ಅದಕ್ಕೆ ಅವರು 2017-18 ಮತ್ತು 2018-19ರಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಬಾರ್ಡ್ ಯೋಜನೆಯಡಿಯಲ್ಲಿ ಅನುಮೋದನೆಯಾದ ಅನುದಾನದ ವಿವರಗಳನ್ನು ಅನುಬಂಧ-3ರಲ್ಲಿ ನೀಡಿದೆ ಹಾಗೂ 2019-20ರಲ್ಲಿ ನಬಾರ್ಡ್‍ನಿಂದ ಯಾವುದೇ ಕಾಮಗಾರಿ ಮಂಜೂರಾಗಿರುವುದಿಲ್ಲ ಎಂದು ಉತ್ತರಿಸಿದರು.
ಕೊಡಗು ಜಿಲ್ಲೆಯಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಸೇರ್ಪಡೆಗೊಂಡ ಪೂರ್ಣಗೊಂಡ ಕಾಮಗಾರಿಗಳು ಯಾವುವು ಎಂದು ಅಪ್ಪಚ್ಚು ರಂಜನ್ ಅವರು ಉಪ ಮುಖ್ಯಮಂತ್ರಿ ಅವರಿಂದ ಮಾಹಿತಿ ಪಡೆದರು. ಕೊಡಗು ಜಿಲ್ಲೆಯಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಸೇರ್ಪಡೆಗೊಂಡು ಪೂರ್ಣಗೊಂಡ ಕಾಮಗಾರಿಗಳ ವಿವರ ನೀಡಿದೆ ಎಂದು ಉತ್ತರಿಸಿದರು. ನಂತರ ಅಪ್ಪಚ್ಚು ರಂಜನ್ ಅವರು ಬಾಕಿ ಇರುವ ಕಾಮಗಾರಿಗಳು ಪೂರ್ಣಗೊಳ್ಳದಿರಲು ಕಾರಣವೇನು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಚಿವರು, ಕಳೆದ 2 ವರ್ಷಗಳ ಅಕಾಲಿಕ ಮಳೆಯಿಂದಾಗಿ ಕಾಮಗಾರಿಗಳ ಪ್ರಗತಿಯಲ್ಲಿ ವಿಳಂಬವಾಗಿರುತ್ತದೆ ಎಂದು ಹೇಳಿದರು.
ಬಳಿಕ ಕೊಡಗು ಜಿಲ್ಲೆಯ ಮೂರು ತಾಲೂಕುಗಳನ್ನು ಹಾಯ್ದು ಹೋಗುವ ಕೊಡ್ಲಿಪೇಟೆ, ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ ಮುಖ್ಯ ರಸ್ತೆ ಮೇಲ್ದರ್ಜೆಗೇರಿಸಲು ಕೇಶಿಫ್ ವತಿಯಿಂದ ಡಿ.ಪಿ.ಆರ್ ಆಗಿದ್ದರೂ ಈವರೆವಿಗೂ ಕಾಮಗಾರಿ ಮಂಜೂರಾತಿಯಾಗದಿರಲು ಕಾರಣವೇನು ಹಾಗೂ ಈ ಬಗ್ಗೆ ಸರ್ಕಾರ ಅನುದಾನ ಮೀಸಲಿರಿಸಲು ಕೈಗೊಂಡಿರುವ ಕ್ರಮಗಳೇನು ಎಂದು ಅಪ್ಪಚ್ಚು ರಂಜನ್‍ರವರು ಗೋವಿಂದ ಎಂ.ಕಾರಜೋಳರನ್ನು ಪ್ರಶ್ನಿಸಿದಾಗ ಅವರು ಕೇಶಿಫ್ ಪ್ರಸ್ತಾವನೆಯಂತೆ ಪೂರ್ಣ ಆರ್ಥಿಕ ನೆರವು ಎಡಿಬಿ ಯಿಂದ ಒದಗಿ ಬರದ ಕಾರಣ ಹಾಗೂ ಎಡಿಬಿ ಮಾರ್ಗಸೂಚಿಯಂತೆ ಪಿಪಿಪಿ ಮಾದರಿ ಗುತ್ತಿಗೆಗೆ ಅರ್ಹವಾಗದ ಕಾರಣ ಉದ್ದೇಶಿತ ಸದರಿ ರಸ್ತೆ ಅಭಿವೃದ್ಧಿಯನ್ನು ಎಡಿಬಿ ನೆರವಿನ ಕೆಶೀಫ್-3ರಲ್ಲಿ ಅನುಮೋದನೆಗೊಂಡಿರುವುದಿಲ್ಲ, ರಸ್ತೆಯನ್ನು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿರುವುದಿಲ್ಲ ಎಂದು ಉತ್ತರಿಸಿದ್ದಾರೆ.