*ಸಿದ್ದಾಪುರ, ಸೆ. 25: ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅಮ್ಮಂಗಾಲದಿಂದ ನೆಲ್ಯಹುದಿಕೇರಿ ಗ್ರಾ.ಪಂ. ಬರಡಿ ಗ್ರಾಮದವರೆಗೆ ಕಾಡಾನೆ ಹಾವಳಿ ತಡೆಗೆ ರೈಲ್ವೇ ಕಂಬಿಗಳನ್ನು ಅಳವಡಿಸುವ ಕಾಮಗಾರಿ ಅಪೂರ್ಣಗೊಂಡಿರುವ ಬೆನ್ನಲ್ಲೇ ಕಾಡಾನೆಗಳ ಹಾವಳಿ ಮಿತಿ ಮೀರಿದೆ.
ತ್ಯಾಗತ್ತೂರು ಕೃಷ್ಣಪುರ ಪ್ರದೀಪ್ ಹಾಗೂ ಮುಂಡ್ರಮನೆ ಕುಟುಂಬಸ್ಥರ ಗದ್ದೆಗಳಿಗೆ ದಾಳಿ ಮಾಡಿರುವ ಕಾಡಾನೆಗಳ ಹಿಂಡು ಭತ್ತದ ಸಸಿಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ. ರೈಲ್ವೇ ಕಂಬಿಗಳನ್ನು ಹಾಕಲು ಕಂಬಗಳನ್ನು ಮಾತ್ರ ಅಳವಡಿಸಿದ್ದು, ಅಡ್ಡಕ್ಕೆ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ಕೆಲವು ಬೆಳೆಗಾರರು ಇದೇ ಕಂಬಗಳಿಗೆ ತಾವೇ ತಂತಿ ಹಾಕಿ ಬಂದೋಬಸ್ತ್ ಮಾಡಿಕೊಂಡಿದಾರೆಯಾದರೂ ಕಾಡಾನೆಗಳ ಹಾವಳಿ ನಿಂತಿಲ್ಲ. ಸುಮಾರು 9 ಕಿ.ಮೀ. ದೂರದ ಕಾಮಗಾರಿಗೆ 7 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಕಾಮಗಾರಿ ವಿಳಂಬವಾದ ಕಾರಣ ಕೃಷಿಕರು ಗದ್ದೆಯಲ್ಲಿ ಕೃಷಿ ಕಾರ್ಯ ಕೈಗೊಂಡಿದ್ದು, ಕಂಬಿಗಳನ್ನು ಕೊಂಡೊಯ್ಯಲು ದಾರಿ ಇಲ್ಲದಾಗಿದೆ. ಕೊಯ್ಲು ಆದ ನಂತರವೇ ಕಾಮಗಾರಿಯನ್ನು ಆರಂಭಿಸುವ ಅನಿವಾರ್ಯತೆ ಎದುರಾಗಿದೆ.
ಬರಡಿ ಗ್ರಾಮದ ಮೈನಾ ಮೊಣ್ಣಪ್ಪ ಅವರ ತೋಟದ ಬಳಿಯಿಂದ ರೈಲ್ವೆ ಕಂಬಿಗಳ ಬೇಲಿ ನಿರ್ಮಾಣವಾದರೆ ಮಾತ್ರ ಕಾಡಾನೆ ದಾಳಿ ತಡೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅರಣ್ಯ ಇಲಾಖೆಯ ನಿಧಾನಗತಿಯ ಕಾಮಗಾರಿಯಿಂದಾಗಿ ಬೆಳೆಗಾರರು ಹಾಗೂ ರೈತರು ನಿತ್ಯ ನಷ್ಟ ಅನುಭವಿಸುವಂತಾಗಿದೆ.
–ಅಂಚೆಮನೆ ಸುಧಿ