ಶನಿವಾರಸಂತೆ, ಸೆ. 25: ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬುಲುಸೆ ಗ್ರಾಮದಲ್ಲಿ ಕೆಲವರು ಸಾರ್ವಜನಿಕರ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಕೆರೆಗಳನ್ನು ತೆರವುಮಾಡಿಸಿಕೊಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬುಲುಸೆ ಗ್ರಾಮದ ಸರ್ವೆ ನಂ. 5,11,30,33ರ ಉಳಿಕೆರೆ 2.31 ಎಕರೆ, ಕಟ್ಟೆಕೆರೆ 0.57 ಎಕರೆ, ಹೊಟ್ರಮಣೆಕೆರೆ 2.90 ಎಕರೆ, ಗೌಡನಕೆರೆ 0.90 ಎಕರೆ, ಕೆರೆಗಳಿಂದ ಒಳ್ಳೆಯ ನೀರಾವರಿಯಾಗುತ್ತದೆ ಹಾಗೂ ದನಕರುಗಳಿಗೂ ನೀರು ಕುಡಿಯಲು ತುಂಬಾ ಅನುಕೂಲವಿದೆ. ಈ ಕೆರೆಗಳನ್ನು ಊರಿನ ಕೆಲವರು ಒತ್ತುವರಿ ಮಾಡಿಕೊಂಡು ಈ ಜಾಗದ ಅಕ್ಕಪಕ್ಕದವರಾದ ಸುಮಾರು 3-4 ಮಂದಿ ಪಂಚಾಯಿತಿ ವತಿಯಿಂದ ಮನೆ ನಿರ್ಮಿಸಿಕೊಂಡು ವಾಸವಿದ್ದು, ಓರ್ವ ಒತ್ತುವರಿ ಮಾಡಿದ ಜಾಗದಲ್ಲಿ ಕಾಫಿ, ಅಡಿಕೆ, ಬಾಳೆ ವ್ಯವಸಾಯ ಮಾಡಿರುತ್ತಾರೆ. ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರಾದ ಪ್ರಸನ್ನ, ಜಗದೀಶ್, ಚಂದ್ರಶೇಖರ್, ಕೊಮರ, ಕರುಣಾಕರ, ಮಲ್ಲಿಗಮ್ಮ, ಸದಾಶಿವ, ರಾಕೇಶ್, ಕಾರ್ತಿಕ್, ಮಹಾಂತಪ್ಪ, ಕೊಮೊರಮ್ಮ, ಅಭಿ, ವಿನಯ, ಶೋಭ ಇತರ ಮೂವತ್ತು ಮಂದಿ ಲಿಖಿತ ಮನವಿ ಅರ್ಪಿಸಿದ್ದಾರೆ.