ಕಣಿವೆ, ಸೆ. 25: 7ನೇ ಹೊಸಕೋಟೆ ಗ್ರಾಮದ ಮೆಟ್ಟನಹಳ್ಳ ದಿಂದ ತೊಂಡೂರು ಹಾಗೂ ಉಪ್ಪುತೋಡು ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸರಿಪಡಿಸಿ ಜನ ಹಾಗೂ ವಾಹನ ಸಂಚಾರಕ್ಕೆ ಸುಗಮಗೊಳಿಸ ಬೇಕೆಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಆನೆ ಕಾಡು ಅರಣ್ಯದ ಅಂಚಿನಲ್ಲಿ ವಾಸವಿರುವ ಸುಮಾರು 150 ಕ್ಕೂ ಹೆಚ್ಚು ಕುಟುಂಬಗಳಿರುವ ಇಲ್ಲಿನ ಜನರು ಸಂಕಟದಿಂದ ಸಂಚರಿಸು ವಂತಾಗಿದೆ. ಸಂಜೆಯಾಯಿತೆಂದರೆ ಮನೆಗಳ ಮುಂಬದಿಯೇ ಸಾಗಿ ತೋಟಗಳಿಗೆ ಧಾವಿಸುವ ಕಾಡಾನೆಗಳ ಭಯ ಒಂದೆಡೆಯಾದರೆ, ದ್ವಿಚಕ್ರ ವಾಹನಗಳು ಕೂಡ ಸಂಚರಿಸದಷ್ಟು ಹಾಳಾಗಿರುವ ಈ ರಸ್ತೆಯನ್ನು ಸರಿಪಡಿಸಿ ಕೊಡಬೇಕು. ದಶಕಗಳ ಹಿಂದೆ ನಿರ್ಮಿಸಿದ್ದ ಡಾಂಬರು ರಸ್ತೆ ಇದೀಗ ಪೂರ್ಣ ಕಿತ್ತು ನಿಂತಿದೆ. ಈ ಕಿತ್ತು ನಿಂತ ರಸ್ತೆ ಈಗ ರಸ್ತೆಯಾಗಿ ಕಾಣದೇ ಪಾದಚಾರಿ ಮಾರ್ಗದಂತಾಗಿದೆ. ಈ ರಸ್ತೆಯಲ್ಲಿ ಯಾರಾದರೂ ಅಪ್ಪಿ ತಪ್ಪಿ ಕಾರಿನಲ್ಲಿ ಏನಾದರೂ ಬಂದರೆ ನೇರವಾಗಿ ಗ್ಯಾರೇಜ್‍ಗೆ ಹೋಗುವಷ್ಟರ ಮಟ್ಟಿಗೆ ಈ ಮಾರ್ಗದ ರಸ್ತೆ ಹಾಳಾಗಿದೆ. ಇದರಿಂದಾಗಿ ಇಲ್ಲಿ ವಾಸವಿರುವ ನಿವಾಸಿಗಳು, ಗರ್ಭಿಣಿ, ಬಾಣಂತಿಯರು, ತುರ್ತು ಆರೋಗ್ಯ ಸೇವೆಗಳಿಗೆ ಕುಶಾಲನಗರ ಅಥವಾ ಸುಂಟಿಕೊಪ್ಪಕ್ಕೆ ತೆರಳಲು ಆಟೋದವರನ್ನು ಕರೆದರೆ ಈ ರಸ್ತೆ ಕಿತ್ತು ನಿಂತ ಕಾರಣಕ್ಕೆ ಆಟೋ ಚಾಲಕರು ಕೂಡ ಹೆದರಿ ಈ ಮಾರ್ಗವನ್ನೇ ತೊರೆದಿದ್ದಾರೆ ಎಂದು ಇಲ್ಲಿನ ನಿವಾಸಿಗಳಾದ ಚೋಂದಮ್ಮ, ಗಂಗಮ್ಮ, ಭವ್ಯ, ಭಾಸ್ಕರ, ಮೊದಲಾದವರು ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಜಿಲ್ಲೆಯ ಜನಪ್ರತಿನಿಧಿಗಳು ಇತ್ತ ಧಾವಿಸಿ ನಮ್ಮ ಸಂಚಾರ - ಸಂಪರ್ಕ ಸಮಸ್ಯೆಗೆ ಮುಕ್ತಿ ಕಾಣಿಸಬೇಕೆಂದು ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆರೆಮನೆ ಮಂಜುನಾಥ್, ಮಾಜಿ ಸದಸ್ಯ ರಮೇಶ್, ಅಬ್ದುಲ್ ರಜಾಕ್ ಮೊದಲಾದವರು ಒತ್ತಾಯಿಸಿದ್ದಾರೆ.