ವೀರಾಜಪೇಟೆ, ಸೆ.25: ವೀರಾಜಪೇಟೆಯ ತೆಲುಗರ ಬೀದಿಯ ನಿವಾಸಿ ಲಲಿತರಾವ್ (70) ಎಂಬವರ ಮೃತದೇಹ ಅವರು ವಾಸಿಸುತ್ತಿದ್ದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ನಗರ ಪೊಲೀಸರು ಇದನ್ನು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.
ವೀರಾಜಪೇಟೆಯ ಜವುಳಿ ವ್ಯಾಪಾರಿಯಾಗಿದ್ದ ಈಶ್ವರ್‍ರಾವ್ ಅವರು ಕೆಲವು ವರ್ಷಗಳ ಹಿಂದೆ ನಿಧನ ಹೊಂದಿದ್ದು, ನಂತರ ಅವರ ಪತ್ನಿ ಮನೆಯಲ್ಲಿಯೇ ಒಬ್ಬರೇ ವಾಸಿಸುತ್ತಿದ್ದರು. ತಾ.20 ರಂದು ಲಲಿತರಾವ್ ಅವರನ್ನು ಆಜು-ಬಾಜುದಾರರು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದಾದ ನಂತರ ಇಂದು ಬೆಳಿಗ್ಗೆ ಮನೆಯಲ್ಲಿಯೇ ಕೊಳೆತು ನಾರುತ್ತಿದ್ದ ಮೃತದೇಹ ಪತ್ತೆಯಾಗಿದೆ. ಪೊಲೀಸರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿ ಸಂಜೆ ವಾರೀಸುದಾರರ ವಶಕ್ಕೆ ಒಪ್ಪಿಸಿದ್ದಾರೆ.
ಮೃತ ಮಹಿಳೆ ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮನೆಯಲ್ಲಿ ಒಬ್ಬಾಕೆಯೇ ವಾಸಿಸುತ್ತಿದ್ದುದರಿಂದ ಐದು ದಿನಗಳ ಹಿಂದೆಯೇ ಸಾವನ್ನಪ್ಪಿದ್ದರೂ ಯಾರಿಗೂ ಗೊತ್ತಾಗಿರಲಿಲ್ಲ. ಇಂದು ಮೃತದೇಹ ಕೊಳೆತು ಗಬ್ಬು ವಾಸನೆ ಬೀರುತ್ತಿದ್ದುದರಿಂದ ಹಾಗೂ ಮಹಿಳೆ ಐದು ದಿನಗಳಿಂದ ಮನೆಯ ಬಾಗಿಲನ್ನು ತೆರೆಯದಿರುವುದರಿಂದ ಆಜು-ಬಾಜುದಾರರು ಸಂಶಯಗೊಂಡು ಪೊಲೀಸರಿಗೆ ಇಂದು ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಮನೆಯ ಮೇಲಿನ ಹಂಚನ್ನು ತೆಗೆಸಿ ಬಾಗಿಲಿನ ಚಿಲಕವನ್ನು ತೆಗೆದಾಗ ಮಹಿಳೆಯ ಶವ ಪತ್ತೆಯಾಗಿದೆ.