ಗೋಣಿಕೊಪ್ಪಲು, ಸೆ. 25: ನಡು ರಾತ್ರಿ ವೇಳೆ ಅಕ್ರಮವಾಗಿ ಜಾನುವಾರುಗಳನ್ನು ಮಾರುತಿ ವ್ಯಾನ್‍ನಲ್ಲಿ ಸಾಗಿಸುತ್ತಿದ್ದ ಸಂದರ್ಭ ಪೊಲೀಸರ ಆಗಮನದಿಂದ ವ್ಯಾನ್ ಅನ್ನು ನಿಲ್ಲಿಸಿ ಸಮೀಪದ ಕಾಫಿ ತೋಟದಲ್ಲಿ ಆರೋಪಿಗಳು ಪರಾರಿಯಾದ ಘಟನೆ ಕುಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಆರೋಪಿಯು ಬಳಸಿದ್ದ 800 ಓಮಿನಿ ಕಾರ್ ಹಾಗೂ ಮೂರು ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾ. 25ರ ರಾತ್ರಿ 3 ಗಂಟೆ ಸುಮಾರಿಗೆ ಕುಟ್ಟ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ವೃತ್ತ ನಿರೀಕ್ಷಕರಿಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೇಂಬುಕೊಲ್ಲಿ ಮಾರ್ಗವಾಗಿ ಕೇರಳ ರಾಜ್ಯದ ಕಸಾಯಿಖಾನೆಗೆ ಓಮಿನಿ ವ್ಯಾನಿನಲ್ಲಿ ಅಕ್ರಮ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವುದನ್ನು ತಿಳಿದ ಪೊಲೀಸರು ನಡು ರಾತ್ರಿ 1.30ರ ಸುಮಾರಿಗೆ ಚೂರಿಕಾಡು ಸರ್ಕಾರಿ ಪ್ರಾಥಮಿಕ ಶಾಲೆಯ ಸಮೀಪವಿರುವ ಸಾರ್ವಜನಿಕ ರಸ್ತೆಯಲ್ಲಿ ಆಗಮಿಸುತ್ತಿದ್ದ ಓಮಿನಿ ವ್ಯಾನನ್ನು ನಿಲ್ಲಿಸಲು ಸೂಚನೆ ನೀಡಿದಾಗ ವ್ಯಾನ್‍ಅನ್ನು ರಸ್ತೆಯ ಪಕ್ಕದಲ್ಲಿ ಬೇಲಿಗೆ ಡಿಕ್ಕಿಪಡಿಸಿ ವ್ಯಾನಿನಲ್ಲಿ ಇದ್ದ ಚಾಲಕ ಲಕ್ಕುಂದ ಗ್ರಾಮದ ನಾಗರಾಜು ಹಾಗೂ ಇತರ ವ್ಯಕ್ತಿಗಳು ವ್ಯಾನಿನಿಂದ ಜಿಗಿದು ಸಮೀಪದ ತೋಟದಲ್ಲಿ ಪರಾರಿಯಾಗಿದ್ದಾರೆ.

ವ್ಯಾನನ್ನು ಪರಿಶೀಲಿಸಿದ ಸಂದರ್ಭ ವ್ಯಾನಿನೊಳಗೆ ಕಪ್ಪು ಬಿಳಿ ಮಿಶ್ರಿತ 4 ಅಡಿ ಎತ್ತರದ ಗಂಡು ಹೋರಿ, ಕರು, ಜೆರ್ಸಿ ಹಸುಗಳು ಕಂಡು ಬಂದವು. ಜಾನುವಾರುಗಳನ್ನು ಆರೋಪಿಗಳು ಕಳ್ಳತನ ಮಾಡಿಕೊಂಡು ಕೇರಳ ರಾಜ್ಯದ ಕಸಾಯಿ ಖಾನೆಗೆ ಮಾಂಸಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದುದಾಗಿ ತಿಳಿದು ಬಂದಿದೆ. ಜಾನುವಾರು ಹಾಗೂ ಓಮಿನಿ ವ್ಯಾನನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ. ಕುಟ್ಟ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪರಶಿವಮೂರ್ತಿ ನಿರ್ದೇಶನದ ಮೇರೆ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿದ್ದರು.