ಹಳೆಯ ಆದೇಶವನ್ನು ಹಿಂಪಡೆದ ಸರಕಾರ

ಮಡಿಕೇರಿ, ಸೆ. 25 : ಆಯುಷ್ ವೈದ್ಯರು ತುರ್ತು ಸಂದರ್ಭಗಳಲ್ಲಿಯು ಅಲೋಪತಿ ಔಷಧಿಗಳನ್ನು ನೀಡದಂತೆ ಸರಕಾರ ಆದೇಶ ಹೊರಡಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯರುಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಅವಶ್ಯವಿದ್ದಲ್ಲಿ ರೋಗಿಗಳಿಗೆ ಅಲೋಪತಿ ಔಷಧಿಗಳನ್ನು ನೀಡಲು ಕೆಲ ಷರತ್ತುಗಳನ್ನು ಪಾಲಿಸುವ ಮೂಲಕ ಈ ಹಿಂದೆ ತಾ.5-1-2017 ರಂದು ಅನುಮತಿ ನೀಡಲಾಗಿತ್ತು.

ಈ ಆದೇಶವನ್ನು ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿ ಹಿಂಪಡೆದಿದ್ದಾರೆ. ಈ ಹಿಂದೆ ಹೋಮಿಯೋಪತಿ ವೈದ್ಯರು ನೀಡಿದ ಅಲೋಪತಿ ಔಷಧಿಯಿಂದ ರೋಗಿಯು ಸಾವನ್ನಪ್ಪಿದ್ದರು. ನಿರ್ಲಕ್ಷ್ಯ ವಹಿಸಿದ್ದ ವೈದ್ಯರ ಮೇಲೆ 3 ಲಕ್ಷ ದಂಡ ವಿಧಿಸಲಾಗಿತ್ತು. ಈ ಕಾರಣದಿಂದಾಗಿ ಸೇರಿದಂತೆ ಇತರ ಕಾರಣಗಳಿಂದ ಆಯುಷ್ ವೈದ್ಯರು ಸರಕಾರಿ ಆಸ್ಪತ್ರೆಯಲ್ಲಿ ಅಲೋಪತಿ ಔಷಧಿಗಳನ್ನು ಬಳಸುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ವರದಿ ಮಾಡಿತ್ತು. ಈ ಹಿನ್ನೆಲೆ

ತಾ.5-1-2017 ರಂದು ಹೊರಡಿಸಿದ್ದ ಆದೇಶವನ್ನು ತಾ.7 ರಂದು ಹಿಂಪಡೆಯಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ತಿಳಿಸಿದ್ದಾರೆ.