ಮಡಿಕೇರಿ, ಸೆ. 23: ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವಂತೆ ಘೋಷಣೆಯಾಗಿರುವ ಪೊನ್ನಂಪೇಟೆ ತಾಲೂಕು ಕುರಿತಾಗಿ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವ ಬೇಡಿಕೆಯೊಂದಿಗೆ ಶಾಸಕ ಕೆ.ಜಿ. ಬೋಪಯ್ಯ ಅವರ ನೇತೃತ್ವದಲ್ಲಿ ಪ್ರಮುಖರ ನಿಯೋಗವೊಂದು ನಿನ್ನೆ ಸಿ.ಎಂ. ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿತು.ನೂತನ ತಾಲೂಕಾಗಿ ಪೊನ್ನಂಪೇಟೆ ಈಗಾಗಲೇ ಘೋಷಣೆಯಾಗಿದ್ದು, ಇದರ ಉದ್ಘಾಟನೆ ಹಾಗೂ ಅಗತ್ಯ ಕೆಲಸ ಕಾರ್ಯಗಳು ಇನ್ನಷ್ಟೆ ಆರಂಭವಾಗಬೇಕಿದೆ. ಈ ಬಗ್ಗೆ ನಿಯೋಗ ನಿನ್ನೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದೆ. ನೂತನ ತಹಶೀಲ್ದಾರ್ ನೇಮಕ ಹಾಗೂ ತ್ವರಿತವಾಗಿ ರೂ. 25 ಲಕ್ಷ ಬಿಡುಗಡೆಗೊಳಿಸಿ ಉದ್ಘಾಟನೆ ನೆರವೇರಿಸಲು ಮನವಿ ಸಲ್ಲಿಸಲಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ಅವರು ತಿಳಿಸಿದ್ದಾರೆ.ಈ ವಿಚಾರವಾಗಿ ಪೊನ್ನಂಪೇಟೆ ನಾಗರಿಕ ವೇದಿಕೆ ಹಾಗೂ ತಾಲೂಕು ಹೋರಾಟ ಸಮಿತಿಯ ಸರ್ವ ಸದಸ್ಯರ ಸಭೆ ಕರೆದು ಶಾಸಕರ ಅಭಿಪ್ರಾಯದೊಂದಿಗೆ ಉದ್ಘಾಟನೆಯ ದಿನಾಂಕವನ್ನು

(ಮೊದಲ ಪುಟದಿಂದ) ನಿರ್ಧರಿಸಿ ಮುಂದಿನ ರೂಪು-ರೇಷೆಯ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

25 ಲಕ್ಷ ಬಿಡುಗಡೆಗೆ ಸೂಚನೆ

ಪೊನ್ನಂಪೇಟೆ ತಾಲೂಕು ಸಂಬಂಧ ಆಡಳಿತಾತ್ಮಕ ವೆಚ್ಚಕ್ಕಾಗಿ 50 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಕೆ.ಜಿ. ಬೋಪಯ್ಯ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ತ್ವರಿತವಾಗಿ 25 ಲಕ್ಷ ಬಿಡುಗಡೆ ಮಾಡುವಂತೆ ಕಂದಾಯ ಇಲಾಖೆಗೆ ಸೂಚಿಸಿದ್ದಾರೆ.